ಕನ್ಡಪ್ರಭ ವಾರ್ತೆ ನಂಜನಗೂಡುತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳವರು ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಹೆಜ್ಜಿಗೆ ಲಿಂಗಣ್ಣ ವೃತ್ತದಿಂದ ಪಾದಯಾತ್ರೆ ಮೂಲಕ ತೆರಳಿದ ನೂರಾರು ಮಂದಿ ಪ್ರತಿಭಟನಾಕಾರರು ತಾಲೂಕು ಕಚೇರಿ ಪ್ರವೇಶ ದ್ವಾರವನ್ನು ಬಂದ್ ಮಾಡಿ ಆರೋಪಿ ಬಂಧನಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೆಂಪಣ್ಣ, ಎನ್.ಸಿ. ಬಸವಣ್ಣ, ಶಿವಮಲ್ಲಪ್ಪ, ಮಹದೇವಸ್ವಾಮಿ ಮಾತನಾಡಿ, ಕರ್ತವ್ಯನಿರತ ಅಧಿಕಾರಿಯನ್ನು ನಿಂದಿಸಿ ಹಲ್ಲೆಗೆ ಮುಂದಾಗಿದ್ದ ವ್ಯಕ್ತಿರೌಡಿ ಶೀಟರ್ ಆಗಿದ್ದು, ಈ ಹಿಂದೆ ಸಹಾ ಹಲವು ಮಂದಿ ಸರ್ಕಾರಿ ನೌಕರರನ್ನು ಬೆದರಿಸಿ ಕಿರುಕುಳ ನೀಡಿರುವ ಆರೋಪ ಹೊತ್ತಿದ್ದಾನೆ. ಇನ್ನು ಹಿರಿಯ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿ ಕುಮಾರ್ ನನ್ನು ಸ್ಥಳದಲ್ಲೇ ಬಂಧಿಸಬೇಕಿತ್ತು, ಆದರೆ ಪೊಲೀಸರು ಪ್ರಕರಣವನ್ನುರಾಜೀ ಮೂಲಕ ಬಗೆಹರಿಸುವ ಪ್ರಯತ್ನ ನಡೆಸಿದ್ದರು ಎಂದು ದೂರಿದರು.ಇನ್ನು ಬಳಿಕ ಸಾರ್ವಜನಿಕರ ಒತ್ತಡಕ್ಕೆ ಮಣಿದು ಎಫ್‌ಐಆರ್ ದಾಖಲಿಸಿದ್ದರೂ ಈವರೆಗೂ ಆರೋಪಿ ಬಂಧಿಸಲು ಮುಂದಾಗಿಲ್ಲ, ಹೀಗಾಗಿ ತಕ್ಷಣ ಆರೋಪಿಯನ್ನು ಬಂಧಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮೇಲೆ ನಡೆದಿರುವ ದೌರ್ಜ್ಯನ್ಯದ ಬಗ್ಗೆ ಈವರೆಗೂ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಈಗಲಾದರೂ ಅವರು ಆರೋಪಿ ಬಂಧನಕ್ಕೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಅವರು ಒತ್ತಾಯಿಸಿದರು.ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಅವರಿಗೆ ಮನವಿ ಪತ್ರ ಸಲ್ಲಿಸಿ ಇನ್ನುಎರಡು ದಿನಗಳಲ್ಲಿ ಆರೋಪಿಯನ್ನು ಬಂಧಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ಅಂತ್ಯಗೊಳಿಸಿದರು. ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಪ್ಪ ದೇವರು, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೆಂಡಗಣ್ಣಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದರಾಜು, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್.ವಿ. ಮಹದೇವಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಸದಸ್ಯ ಮಹದೇವಪ್ರಸಾದ್, ಮಂಜುನಾಥ್, ರೇಚಣ್ಣ, ಜಗದೀಶ್, ಗಿರೀಶ್, ವಕೀಲ ಮಹೇಶ್ ಬಾಬು, ರಾಜಶೇಖರ್, ಪರಶಿವಮೂರ್ತಿ, ಮಂಜುನಾಥ್, ಪ್ರೇಮಾ ಶಂಭಯ್ಯ, ಕೋಮಲಾ, ಶಶಿಕಲಾ ಗಿರೀಶ್, ನಂದಿನಿ ಮಹೇಶ್ ಭಾಗವಹಿಸಿದ್ದರು.----------------