ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಮಹತ್ವದ ಸೇವಾ ಪರ್ವ: ಸದ್ಗುರು ಶ್ರೀ ಮಧುಸೂದನ ಸಾಯಿ

KannadaprabhaNewsNetwork |  
Published : Aug 23, 2026, 02:30 AM IST
ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಖ್ಯಾತ ವಿದುಷಿ ಸಂಗೀತ ಕಟ್ಟಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಉಚಿತ ಆಸ್ಪತ್ರೆ ನಿರ್ಮಾಣದ ಯೋಜನೆ ಜಾರಿಗೊಳಿಸಲು ಇನ್ನೂ ಮೂರ್ನಾಲ್ಕು ವರ್ಷಗಳ ಕಾಲವಕಾಶ ಬೇಕಾಗಬಹುದು. ಹತ್ತು ವರ್ಷ ಸಮಯ ಕೊಡಿ. ಕರ್ನಾಟವನ್ನು ಬದಲಿಸುತ್ತೇನೆ ಎಂದು ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ಗದಗ: ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಉಚಿತ ಆಸ್ಪತ್ರೆ ನಿರ್ಮಾಣದ ಯೋಜನೆ ಜಾರಿಗೊಳಿಸಲು ಇನ್ನೂ ಮೂರ್ನಾಲ್ಕು ವರ್ಷಗಳ ಕಾಲವಕಾಶ ಬೇಕಾಗಬಹುದು. ಹತ್ತು ವರ್ಷ ಸಮಯ ಕೊಡಿ. ಕರ್ನಾಟವನ್ನು ಬದಲಿಸುತ್ತೇನೆ ಎಂದು ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ, ವಿದುಷಿ ಸಂಗೀತಾ ಕಟ್ಟಿ ಕೇಳಿದ ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು. ಆಸ್ಪತ್ರೆ ನಿರ್ವಹಣೆಗೆ ಅಗತ್ಯವಿರುವ ವೈದ್ಯರು, ನರ್ಸ್‌ಗಳು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ಲಭ್ಯವಾದ ಬಳಿಕ ಯೋಜನೆಯನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದು. ಮೊದಲ ಹಂತದಲ್ಲಿ ವೆಲ್‌ನೆಸ್ ಕೇಂದ್ರಗಳನ್ನು ಆರಂಭಿಸಿ, ಬಳಿಕ 50 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಲಾಗುವುದು. ನಮ್ಮ ವಿದ್ಯಾರ್ಥಿಗಳೇ ವೈದ್ಯಕೀಯ ಸಿಬ್ಬಂದಿಯಾಗಿ ಸೇವೆಗೆ ಬಂದ ಬಳಿಕ ದೊಡ್ಡ ಆಸ್ಪತ್ರೆ ನಿರ್ಮಾಣದ ಯೋಜನೆಗೆ ವೇಗ ನೀಡಲಾಗುವುದು. ಪ್ರತಿ ತಾಲೂಕಿನಲ್ಲೂ ಇಂತಹ ಕೇಂದ್ರಗಳನ್ನು ನಿರ್ಮಿಸುವ ಆಶಯವಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.

ತಂತ್ರಜ್ಞಾನವು ಮಾಹಿತಿ ಮತ್ತು ಜ್ಞಾನವನ್ನು ನೀಡಬಹುದೇ ಹೊರತು, ವ್ಯಕ್ತಿಯಲ್ಲಿ ನಿಜವಾದ ಪರಿವರ್ತನೆ ತರಲು ಸಾಧ್ಯವಿಲ್ಲ. ನಮ್ಮ ದೇಶದ ಗುರುಶಿಷ್ಯ ಪರಂಪರೆಯು ಜ್ಞಾನ ಮತ್ತು ಸಂಸ್ಕಾರವನ್ನೇ ಆಧರಿಸಿದೆ. ಗುರುವಿನ ಸಾನ್ನಿಧ್ಯಕ್ಕೆ ಪರ್ಯಾಯವಿಲ್ಲ. ಪುಸ್ತಕಗಳು ಮತ್ತು ತಾಂತ್ರಿಕ ಸಾಧನಗಳ ಮೂಲಕ ಕಲಿಯಬಹುದಾದರೂ, ಗುರುವಿನ ಸಾನ್ನಿಧ್ಯದಲ್ಲಿದ್ದಾಗ ವ್ಯಕ್ತಿಯೊಳಗಿನ ಶಕ್ತಿ ಜಾಗ್ರತವಾಗುತ್ತದೆ ಎಂದರು.

ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವನ ಅಂತರಂಗದ ತುಡಿತಕ್ಕೆ ಭೌತಿಕ ಸುಖ, ಸಂಪತ್ತು ಅಥವಾ ಕೀರ್ತಿ ತೃಪ್ತಿ ನೀಡಲಾರದು. ನಿಸ್ವಾರ್ಥ ಸೇವೆಯಿಂದ ಜೀವಕಾರುಣ್ಯ ಅರಳಿ, ಮನುಷ್ಯನು ಪರಮಾತ್ಮನ ಸನ್ನಿಧಾನವನ್ನು ಸೇರುವ ದಾರಿಯನ್ನು ಕಂಡುಕೊಳ್ಳುತ್ತಾನೆ ಎಂದರು.

ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ 3ನೇ ವರ್ಷದ ಲೈಫ್ ಸೈನ್ಸ್ ವಿದ್ಯಾರ್ಥಿನಿ ಸೃಷ್ಟಿ ಪಲ್ಲೆ ಹಾಗೂ ಶ್ರೀ ಸತ್ಯ ಸಾಯಿ ವಾಣಿ ನಿಕೇತನಂ ಗುರುಕುಲದ ಗೌರವಾಧ್ಯಕ್ಷ ಬಿ.ಎಸ್. ಗೋಣಿ ಮಾತನಾಡಿದರು. ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ವೇದಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ಸ್ವರಮೇಳ (ಸಾಯಿ ಸಿಂಫನಿ ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.

ರಾಜಕಾರಣಿಗಳ ಮನಸ್ಸು ಬದಲಾಗಬೇಕು: ಡಿ.ಆರ್. ಪಾಟೀಲ

ರಾಜಕಾರಣಿಗಳು ನಿಸ್ವಾರ್ಥ ಸೇವೆಗೆ ಮನಸ್ಸು ಮಾಡಿದರೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು. ಇದು ಸಾಧ್ಯವಾಗಲು ರಾಜಕೀಯದಲ್ಲಿರುವವರ ಮನಸ್ಸು ಬದಲಾಗಬೇಕು ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಕರ್ನಾಟಕ ಪರಿವರ್ತಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಹೋಗುವವರು ಅಧಿಕಾರ ಹೇಗೆ ನಡೆಸಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ನಿಮ್ಮಿಂದ ತರಬೇತಿ ಪಡೆಯಬೇಕಾದ ಅಗತ್ಯವಿದೆ. ರಾಜಕಾರಣಿಗಳು ಮಾದರಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ಮಾಡಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ: ಪೊನ್ನಣ್ಣ
ಸದ್ಗುಣಗಳೇ ಮಾನವನ ಧೀಶಕ್ತಿಯಾಗಲಿ: ದಿನೇಶ ಪೂಜಾರ