ಆತ್ಮಹತ್ಯೆ ತಡೆಗೆ ಮಹತ್ವದ ಹೆಜ್ಜೆ: ರಾಜ್ಯದ 37 ಸರ್ಕಾರಿ ಆಸ್ಪತ್ರೆಗಳಿಗೆ ''ಉಷಸ್'' ಯೋಜನೆ ವಿಸ್ತರಣೆ

KannadaprabhaNewsNetwork |  
Published : Sep 18, 2026, 01:15 AM IST
 'ಉಷಸ್' ಯೋಜನೆ | Kannada Prabha

ಸಾರಾಂಶ

ನಿಮ್ಹಾನ್ಸ್, ರಾಜ್ಯ ಸರ್ಕಾರ ಹಾಗೂ ಹಿಮಾಲಯ ವೆಲ್ನೆಸ್‌ನ ಜಂಟಿ ಉಪಕ್ರಮ. 12 ತಿಂಗಳ ನಿರಂತರ ಫಾಲೋ-ಅಪ್ ವ್ಯವಸ್ಥೆ

ಬೆಂಗಳೂರು: ಆತ್ಮಹತ್ಯೆ ಅಥವಾ ಸ್ವಯಂ-ಹಾನಿಗೆ ಯತ್ನಿಸಿ ಬದುಕುಳಿದವರಿಗೆ ವ್ಯವಸ್ಥಿತ ಮಾನಸಿಕ ಹಾಗೂ ಸಾಮಾಜಿಕ (ಸೈಕೋ-ಸೋಷಿಯಲ್) ಆರೈಕೆ ಒದಗಿಸುವ ''ಪ್ರಾಜೆಕ್ಟ್ ಉಷಸ್'' (USHAS - Urban Self-Harm Study) ಯೋಜನೆಯನ್ನು ರಾಜ್ಯದ 37 ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಿಸಲಾಗುತ್ತಿದೆ. ನಿಮ್ಹಾನ್ಸ್, ಕರ್ನಾಟಕ ಸರ್ಕಾರ ಹಾಗೂ ''ಹಿಮಾಲಯ ವೆಲ್ನೆಸ್'' ಕಂಪನಿ ಜಂಟಿಯಾಗಿ ಈ ಮಹತ್ವದ ಹೆಜ್ಜೆಯನ್ನಿಟ್ಟಿವೆ.ಸದ್ಯ 10 ಜಿಲ್ಲೆಗಳ 16 ಆಸ್ಪತ್ರೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿರುವ ''ಉಷಸ್'' ಯೋಜನೆ, ಇದೀಗ ಹಿಮಾಲಯ ವೆಲ್ನೆಸ್ ಕಂಪನಿಯ ಆರ್ಥಿಕ ಬೆಂಬಲದೊಂದಿಗೆ ರಾಜ್ಯದ ಎಲ್ಲಾ 31 ಜಿಲ್ಲಾ ಆಸ್ಪತ್ರೆಗಳು ಹಾಗೂ ಬೆಂಗಳೂರಿನ 6 ಪ್ರಮುಖ ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಣೆಯಾಗುತ್ತಿದೆ. ಮುಂದಿನ ಒಂದು ವರ್ಷದ ಅವಧಿಗೆ ಈ ವಿಸ್ತೃತ ಯೋಜನೆ ಜಾರಿಯಲ್ಲಿರಲಿದೆ. ಆಸ್ಪತ್ರೆಯ ತುರ್ತು ನಿಗಾ ಘಟಕಗಳಿಂದ ಹಿಡಿದು ರೋಗಿ ಡಿಸ್ಚಾರ್ಜ್ ಆದ ಬಳಿಕವೂ ನಿರಂತರ ಆರೈಕೆ (Post-attempt care) ಒದಗಿಸುವ ವ್ಯವಸ್ಥಿತ ಮಾರ್ಗಸೂಚಿಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದೆನಿಸಿಕೊಂಡಿದೆ.ಸಚಿವ ಯು.ಟಿ. ಖಾದರ್ ಮೆಚ್ಚುಗೆ: ‘ಈ ಉಪಕ್ರಮಕ್ಕಾಗಿ ನಿಮ್ಹಾನ್ಸ್, ಆರೋಗ್ಯ ಇಲಾಖೆ ಹಾಗೂ ಹಿಮಾಲಯ ವೆಲ್ನೆಸ್ ಕಂಪನಿಯನ್ನು ನಾನು ಅಭಿನಂದಿಸುತ್ತೇನೆ. 37 ಆಸ್ಪತ್ರೆಗಳಿಗೆ ''ಉಷಸ್'' ವಿಸ್ತರಣೆಯಾಗುತ್ತಿರುವುದರಿಂದ, ಆತ್ಮಹತ್ಯೆ ಯತ್ನದಿಂದ ಬದುಕುಳಿದವರಿಗೆ ಸಕಾಲಿಕವಾಗಿ ಸೈಕೋ-ಸೋಷಿಯಲ್ ಬೆಂಬಲ ಸಿಗಲಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ರೋಗಿಗಳಿಗೆ ಅಗತ್ಯ ಆರೈಕೆ ಮುಂದುವರಿಯುವುದನ್ನು ಇದು ಖಚಿತಪಡಿಸುತ್ತದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ ಪ್ರಕಾರ, 2024ರಲ್ಲಿ ಭಾರತದಲ್ಲಿ 1,70,746 ಆತ್ಮಹತ್ಯೆ ಸಾವುಗಳು ದಾಖಲಾಗಿದ್ದು, ಅತಿ ಹೆಚ್ಚು ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಇದೆ. ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರಿಗೆ ಸರ್ಕಾರಿ ಆಸ್ಪತ್ರೆಗಳ ತುರ್ತು ನಿಗಾ ಘಟಕಗಳೇ ಮೊದಲ ಆಸರೆ. ಆದರೆ, ಅಲ್ಲಿ ಕೇವಲ ದೈಹಿಕ ಗಾಯಗಳಿಗೆ ಮಾತ್ರ ಚಿಕಿತ್ಸೆ ನೀಡಿ ಕಳುಹಿಸಲಾಗುತ್ತಿದೆ. ರೋಗಿಯ ಮಾನಸಿಕ ಸ್ಥಿತಿಯ ಮೌಲ್ಯಮಾಪನ, ಕೌನ್ಸೆಲಿಂಗ್, ಸೇಫ್ಟಿ ಪ್ಲಾನಿಂಗ್ ಹಾಗೂ ಮುಂದಿನ ದಿನಗಳಲ್ಲಿ ಬೇಕಾಗುವ ನೈತಿಕ ಬೆಂಬಲವಿಲ್ಲದೆಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿದೆ. ಆ ನಿರ್ಣಾಯಕ ಹಂತದಲ್ಲಿ ರೋಗಿಗಳು ಅತ್ಯಂತ ಸೂಕ್ಷ್ಮ ಸ್ಥಿತಿಯಲ್ಲಿರುತ್ತಾರೆ. ಈ ಗಂಭೀರ ಕೊರತೆಯನ್ನು ''ಉಷಸ್'' ಯೋಜನೆ ನೀಗಿಸಲಿದೆ.2022ರಿಂದ ಈವರೆಗೆ ಉಷಸ್ ಯೋಜನೆಯಡಿ 35,436 ಆತ್ಮಹತ್ಯೆ ಯತ್ನ ಹಾಗೂ ಸ್ವಯಂ-ಹಾನಿ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 26,385 ಜನರಿಗೆ ಕೌನ್ಸೆಲಿಂಗ್, ರಿಸ್ಕ್ ಅಸೆಸ್‌ಮೆಂಟ್ (ಅಪಾಯದ ಮೌಲ್ಯಮಾಪನ) ಮತ್ತು ವ್ಯವಸ್ಥಿತ ಫಾಲೋ-ಅಪ್ ಒದಗಿಸಲಾಗಿದೆ. ಅಲ್ಲದೆ, 31,002 ಕುಟುಂಬಗಳಿಗೂ ಆಪ್ತಸಮಾಲೋಚನೆ ನಡೆಸಲಾಗಿದೆ. ಇದರ ಪರಿಣಾಮವಾಗಿ, ಕೌನ್ಸೆಲಿಂಗ್ ಪಡೆದವರ ಪೈಕಿ ಕೇವಲ ಶೇ. 1.3ರಷ್ಟು ಮಂದಿ ಮಾತ್ರ ಮರು-ಯತ್ನ ಮಾಡಿದ್ದಾರೆ ಹಾಗೂ ಶೇ. 0.3ರಷ್ಟು ಮಂದಿ ಸಾವನ್ನಪ್ಪಿದ್ದಾರೆ. ಜಾಗತಿಕವಾಗಿ ಮರು-ಯತ್ನದ ಸಾವಿನ ಪ್ರಮಾಣ ಶೇ. 3ರಿಂದ 4ರಷ್ಟಿದ್ದು, ಅದಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಈ ಪ್ರಮಾಣ ಗಣನೀಯವಾಗಿ ತಗ್ಗಿದೆ.ಹಿಮಾಲಯ ವೆಲ್ನೆಸ್ ಕಂಪನಿಯ ಹೇಳವುದೇನು?

ಹಿಮಾಲಯ ವೆಲ್ನೆಸ್ ಕಂಪನಿಯ ಮಾನವ ಸಂಪನ್ಮೂಲ ನಿರ್ದೇಶಕ ಕೆ.ಜಿ. ಉಮೇಶ್ ಅವರು ಈ ಕುರಿತು ಮಾತನಾಡಿ, "ರೋಗಿಯ ಆರೈಕೆ ಕೇವಲ ಆಸ್ಪತ್ರೆಯ ಬಾಗಿಲಿಗೆ ಸೀಮಿತವಾಗಬಾರದು. ಡಿಸ್ಚಾರ್ಜ್ ಆದ ಬಳಿಕದ ದಿನಗಳು ಅತ್ಯಂತ ಕಷ್ಟಕರವಾಗಿದ್ದು, ರೋಗಿಯು ಕಳಂಕ, ಭಯ ಮತ್ತು ಒಂಟಿತನವನ್ನು ಅನುಭವಿಸುತ್ತಾನೆ. ಉಷಸ್ ಯೋಜನೆಯು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಕೌನ್ಸೆಲಿಂಗ್, ಕುಟುಂಬದ ಬೆಂಬಲ ಮತ್ತು ನಿಯಮಿತ ಫಾಲೋ-ಅಪ್‌ಗಳನ್ನು ಬೆಸೆಯುವ ಸೇತುವೆಯಾಗಿದೆ. ತರಬೇತಿ ಪಡೆದ ವೃತ್ತಿಪರರ ಮೂಲಕ ವ್ಯವಸ್ಥಿತ ಸೈಕೋ-ಸೋಷಿಯಲ್ ಮೂಲಸೌಕರ್ಯ ನಿರ್ಮಿಸುವ ನಿಮ್ಹಾನ್ಸ್ ಕಾರ್ಯಕ್ಕೆ ಬೆಂಬಲ ನೀಡುವುದು ಹಿಮಾಲಯದ ಉದ್ದೇಶ. ಕರ್ನಾಟಕದಲ್ಲಿ ಈ ಮಾದರಿ ಯಶಸ್ವಿಯಾದರೆ, ಇತರೆ ರಾಜ್ಯಗಳಿಗೂ ಇದು ದಾರಿದೀಪವಾಗಲಿದೆ " ಎಂದು ಹೇಳಿದರು.ನಿಮ್ಹಾನ್ಸ್ ನಿರ್ದೇಶಕ ಡಾ. ವೈ.ಸಿ. ಜನಾರ್ದನ್ ರೆಡ್ಡಿ ಮಾತನಾಡಿ, ''''ಒಂದು ಬಾರಿಯ ಕೌನ್ಸೆಲಿಂಗ್ ಕೇವಲ ಆ ಕ್ಷಣಕ್ಕೆ ಮಾತ್ರ ನೆರವಾಗುತ್ತದೆ. ಆದರೆ, ಎರಡನೇ ಬಾರಿಗೆ ರೋಗಿ ಆತ್ಮಹತ್ಯೆಗೆ ಯತ್ನಿಸದಂತೆ ತಡೆಯುವುದು, ಆತನೊಂದಿಗೆ ತಿಂಗಳುಗಳ ಕಾಲ ನಿರಂತರ ಸಂಪರ್ಕದಲ್ಲಿರುವ ತರಬೇತಿ ಪಡೆದ ವೃತ್ತಿಪರರು. ಉಷಸ್ ಯೋಜನೆಯನ್ನು 37 ಆಸ್ಪತ್ರೆಗಳಿಗೆ ವಿಸ್ತರಿಸುವುದೆಂದರೆ, ಇಡೀ ರಾಜ್ಯದಾದ್ಯಂತ ಅಂತಹದೊಂದು ವೃತ್ತಿಪರ ಜಾಲವನ್ನು ಬೆಳೆಸುವುದು ಎಂದರ್ಥ. ಇದು ಕೇವಲ ಕರ್ನಾಟಕದ ಯಶಸ್ಸಿನ ಕಥೆಯಾಗದೆ, ಇತರ ರಾಜ್ಯಗಳು ವಾಸ್ತವಿಕವಾಗಿ ಅಳವಡಿಸಿಕೊಳ್ಳಬಹುದಾದ ಅತ್ಯುತ್ತಮ ಮಾದರಿಯಾಗಲಿದೆ " ಎಂದು ಹೇಳಿದರು.ಈ ವಿಸ್ತರಣಾ ಯೋಜನೆಯಲ್ಲಿ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ತರಬೇತಿ ಪಡೆದ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ಸ್ ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳು ಆಸ್ಪತ್ರೆಯಲ್ಲೇ ಪ್ರಾಥಮಿಕ ಹಂತದ ಕೌನ್ಸೆಲಿಂಗ್ ನಡೆಸಲಿದ್ದಾರೆ. ಜೊತೆಗೆ ರೋಗಿಯ ಕುಟುಂಬದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, 12 ತಿಂಗಳ ಕಾಲ ನಿರಂತರ ಫಾಲೋ-ಅಪ್ ಮಾಡಲಿದ್ದಾರೆ. ಈ ಕಾರ್ಯಕ್ರಮವು ಸ್ಥಳೀಯ ಆಸ್ಪತ್ರೆ ಮಟ್ಟದ ನಿಖರ ಡೇಟಾ ಹಾಗೂ ಅನುಷ್ಠಾನದ ಒಳನೋಟಗಳನ್ನು ಒದಗಿಸಲಿದ್ದು, ಮುಂದಿನ ದಿನಗಳಲ್ಲಿ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ನೆರವಾಗಲಿದೆ.ಯೋಜನೆಯಡಿ ಆಸ್ಪತ್ರೆಯಲ್ಲಿ 45 ರಿಂದ 75 ನಿಮಿಷಗಳ ಸೈಕೋ-ಸೋಷಿಯಲ್ ಸೆಷನ್, 12 ತಿಂಗಳ ಕಾಲ ನಿಗದಿತ ಫಾಲೋ-ಅಪ್ ಕರೆಗಳು ಮತ್ತು ರೋಗಿಗಳಿಗಾಗಿ ಪ್ರತ್ಯೇಕ ಸಹಾಯವಾಣಿಯ ವ್ಯವಸ್ಥೆ ಇರಲಿದೆ. ಮೊದಲ ವರ್ಷದ ವರದಿಗಳನ್ನು ಆಧರಿಸಿ ಕಾರ್ಯಕ್ರಮದ ಮುಂದಿನ ಹಂತದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತದೆ ಹಾಗೂ ಇದನ್ನು ಕರ್ನಾಟಕದ ಆಚೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದತ್ತಾತ್ರೇಯನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್‌
ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ; ಬೆಳಗ್ಗೆ ತೆರವು