ಮೌನದಲ್ಲಿ ದುಷ್ಟಶಕ್ತಿಗಳನ್ನು ನಿಗ್ರಹಿಸುವ ಶಕ್ತಿಯಿದೆ: ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ

KannadaprabhaNewsNetwork |  
Published : Jan 07, 2025, 12:15 AM IST
ಹೊನ್ನಾಳಿ ಫೋಟೋ 4ಎಚ್.ಎಲ್.ಐ2 ಹಳ್ಳೂರು ಗ್ರಾಮದ ಶ್ರೀ ನಿಜಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಮೌನ ಇಷ್ಟಲಿಂಗ ಪೂಜಾನುಷ್ಠಾನ ಸಮಾರೋಪ ಕಾರ್ಯಕ್ರಮದಲ್ಲಿ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ ಮಾತನಾಡಿದರು | Kannada Prabha

ಸಾರಾಂಶ

ಮಾತಿಗಿಂತ ಮೌನದಲ್ಲಿ ದುಷ್ಟಶಕ್ತಿಗಳನ್ನು ನಿಗ್ರಹಿಸುವ ಶಕ್ತಿ ಇದೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಹೊನ್ನಾಳಿಯಲ್ಲಿ ಮೂರು ದಿನಗಳ ಮೌನ ಇಷ್ಟಲಿಂಗ ಪೂಜಾನುಷ್ಠಾನ ಕಾರ್ಯಕ್ರಮದಲ್ಲಿ ಗುರುವಾರ ತಡ ರಾತ್ರಿ ಮೌನ ಮುರಿದು ಮಾತನಾಡಿದರು.

ಮೌನ ಇಷ್ಟಲಿಂಗ ಪೂಜಾನುಷ್ಠಾನ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಾತಿಗಿಂತ ಮೌನದಲ್ಲಿ ದುಷ್ಟಶಕ್ತಿಗಳನ್ನು ನಿಗ್ರಹಿಸುವ ಶಕ್ತಿ ಇದೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹಳ್ಳೂರು ಗ್ರಾಮದ ಶ್ರೀ ನಿಜಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಮೌನ ಇಷ್ಟಲಿಂಗ ಪೂಜಾನುಷ್ಠಾನ ಕಾರ್ಯಕ್ರಮದಲ್ಲಿ ಗುರುವಾರ ತಡ ರಾತ್ರಿ ಮೌನ ಮುರಿದು ಮಾತನಾಡಿದರು.

ಮನುಷ್ಯ ಶಾಂತಚಿತ್ತನಾಗಿ ಬದುಕಲು ಮೌನ ಹೆಚ್ಚು ಸಹಾಯ ಮಾಡುತ್ತದೆ. ಮೌನಕ್ಕೆ ಇರುವ ಬೆಲೆ ಮಾತಿಗಿಲ್ಲ ಅದಕ್ಕೆಂದು ನಮ್ಮ ಹಿರಿಯರು ಮಾತು ಬೆಳ್ಳಿ, ಮೌನ ಬಂಗಾರ ಎಂದು ಹೇಳಿದ್ದಾರೆ. ಪ್ರತಿ ವರ್ಷ ಮೌನ ಇಷ್ಟಲಿಂಗ ಪೂಜಾನುಷ್ಠಾನ ಕಾರ್ಯಕ್ರಮ ಹಮ್ಮಿಕೊಂಡು ಭಕ್ತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಒಂದು ಮಾತು ಎನೆಲ್ಲಾ ಹಾಗೂ ಎಷ್ಟೆಲ್ಲಾ ಅವಾಂತರ ಸೃಷ್ಟಿ ಮಾಡುತ್ತಿದೆ ಎನ್ನುವುದನ್ನು ಇಂದಿನ ದಿನಗಳಲ್ಲಿ ರಾಜಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ನಾವು ಕಾಣುತ್ತಿದ್ದೇವೆ. ಜಗಳ ಬಂದಾಗ ಯಾರಾದರೊಬ್ಬರು ಮೌನವಾಗಿದ್ದರೆ ಸಫಲತೆ ಕಾಣಲು ಸಾಧ್ಯ ಎಂದು ಹೇಳಿದರು.

ಮಾನವನನ್ನು ಹೊರತುಪಡಿಸಿ ಪ್ರಕೃತಿಯಲ್ಲಿರುವ ಜೀವ ಸಂಕುಲಗಳು ತಮ್ಮ ಕರ್ತವ್ಯವನ್ನು ಮೌನದಿಂದಲೇ ಮಾಡಿ ಮುಗಿಸುತ್ತವೆ. ಇದನ್ನು ನಾವುಗಳ ಅರಿತುಕೊಳ್ಳಬೇಕು ಎಂದು ನುಡಿದರು.

ಸಮಾರಂಭದ ನೇತೃತ್ವ ವಹಿಸಿದ್ದ ರಟ್ಟೇಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯಸ್ವಾಮೀಜಿ ಮಾತನಾಡಿ, ಬೇರೆಯವರಿಗೆ ಹಿಂಸೆ ಕೊಟ್ಟು ಬದುಕುವುದು ಮಾನವೀಯತೆಯ ಲಕ್ಷಣವಲ್ಲ, ಮನುಷ್ಯರು ಒಬ್ಬರನ್ನೊಬ್ಬರು ಅರಿತು, ಪ್ರೀತಿಯಿಂದ ಬಾಳಬೇಕು ಎಂದು ಹೇಳಿದರು.

ಧ್ಯಾನ ಮತ್ತು ಮೌನದಿಂದ ಮುಕ್ತಿ ಲಭಿಸಿ ನಮ್ಮ ಬದುಕು ಸಾರ್ಥಕತೆ ಪಡೆದುಕೊಳ್ಳುತ್ತದೆ. ಭಗಂತನಿಗೆ ಭಕ್ತಿ ಸಮರ್ಪಣೆಯಾಗಲು ಏಕಾಗೃತೆಯಿಂದ ಪೂಜಾ ಕೈಂಕರ್ಯಗಳನ್ನು ನಡೆಸಬೇಕು ಎಂದರು.

ಹಿರೇಕಲ್ಮಠ ಶಿವಾಚಾರ್ಯ ರತ್ನ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾನವ ಕಲ್ಯಾಣಕ್ಕಾಗಿ ಮೌನ ಇಷ್ಟಲಿಂಗ ಪೂಜಾ ಕಾರ್ಯಮಗಳನ್ನು ಸೇರಿದಂತೆ ಅನೇಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದರು, ಎಲ್ಲಾ ಕಾರ್ಯಕ್ರಮಗಳನ್ನು ಇಂದಿನ ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ರೇವಣಸಿದ್ದಯ್ಯ ಹಿರೇಮಠ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ,ಉಮಾಪತಿ, ರವೀಶ, ವಿಶ್ವನಾಥಯ್ಯ ಹಿರೇಮಠ ಇತರರು ಹಾಜರಿದ್ದರು.

ಪ್ರಕಾಶ ಶಾಸ್ತ್ರಿ ಸ್ವಾಗತಿಸಿದರು. ದಯಾನಂದಸ್ವಾಮಿ ನಿರೂಪಿಸಿದರು. ಮಠದ ವ್ಯವಸ್ಥಾಪಕ ಚನ್ನಬಸಯ್ಯ ಪ್ರಾಸ್ತಾವಿಕ ಮಾತನಾಡಿದರು.

PREV

Recommended Stories

ಸಂಜೆ ಕೋರ್ಟ್‌ಗೆ ವಕೀಲರ ಸಂಘಗಳ ವಿರೋಧ
ಕಾರ್ಯಕ್ರಮಕ್ಕೆ ಸಾರಿಗೆ ಬಸ್ಸಲ್ಲಿ ಬಂದ ಹೈಕೋರ್ಟ್‌ ನ್ಯಾಯಾಧೀಶರು!