- 4 ದಶಕಗಳ ನಿಸ್ವಾರ್ಥ ಸೇವೆ ಗುರುತಿಸಬೇಕು: ಕಾಂಗ್ರೆಸ್ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಮಾದಿಗ ಸಮುದಾಯ ಆಗ್ರಹ - - -
ಕನ್ನಡಪ್ರಭ ವಾರ್ತೆ ದಾವಣಗೆರೆಮಾದಿಗ ಸಮುದಾಯದ ಹಿರಿಯ ನಾಯಕ ಬಿ.ಎಚ್. ವೀರಭದ್ರಪ್ಪ ಅವರಿಗೆ ವಿಧಾನ ಪರಿಷತ್ತು ಸದಸ್ಯರಾಗಿ ನೇಮಿಸುವಂತೆ ಕಾಂಗ್ರೆಸ್ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಒತ್ತಾಯಿಸಿ ಮಾದಿಗ ಸಮುದಾಯದಿಂದ ನಗರದಲ್ಲಿ ಭಾನುವಾರ ಮೌನ ಮೆರವಣಿಗೆ ನಡೆಸಲಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನಿವಾಸದವರೆಗೆ ಹಿರಿಯ ಮುಖಂಡ, ಆಕಾಂಕ್ಷಿ ಬಿ.ಎಚ್. ವೀರಭದ್ರಪ್ಪ, ಎಲ್.ಎಂ. ಹನುಮಂತಪ್ಪ, ಹೆಗ್ಗೆರೆ ರಂಗಪ್ಪ, ಬಿ.ಪಿ.ಸುರೇಶ, ಡಿ.ಆರ್. ಮಂಜುನಾಥ ಸೇರಿದಂತೆ ಅನೇಕ ಮುಖಂಡರ ನೇತೃತ್ವದಲ್ಲಿ ಮೌನ ಮೆರವಣಿಗೆಯಲ್ಲಿ ಸಾಗಿ, ಸಂಸದರಿಗೆ ಮನವಿ ಅರ್ಪಿಸಲಾಯಿತು.ಹೆಗ್ಗೆರೆ ರಂಗಪ್ಪ ಮಾತನಾಡಿ, 4 ದಶಕದಿಂದಲೂ ಕಾಂಗ್ರೆಸ್ಸಿನಲ್ಲಿ ನಿಸ್ವಾರ್ಥ ಸೇವೆ ಮಾಡಿಕೊಂಡು ಬಂದ, ಸರ್ವ ಜಾತಿ-ಧರ್ಮೀಯರ ಸೇವೆ ಮಾಡಿದ ನಮ್ಮ ಸಮುದಾಯದ ಹಿರಿಯ ಬಿ.ಎಚ್. ವೀರಭದ್ರಪ್ಪ ಅವರಿಗೆ ಎಂಎಲ್‌ಸಿ ಆಗಿ ನೇಮಿಸಲು ಪಕ್ಷದ ವರಿಷ್ಠರಿಗೆ ಸಚಿವರು, ಶಾಸಕರು, ಸಂಸದರು ಒತ್ತಡ ಹೇರಬೇಕು. ಈಗಾಗಲೇ ಎಸ್.ಎಸ್. ಮಲ್ಲಿಕಾರ್ಜುನ, ಡಾ.ಶಾಮನೂರು ಶಿವಶಂಕರಪ್ಪ, ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರಿಗೆ ಬಿ.ಎಚ್. ವೀರಭದ್ರಪ್ಪ ಅವರ ಹೆಸರನ್ನು ವಿಪ ಸದಸ್ಯ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ ಹೀಗೆ ಎಲ್ಲ ನಾಯಕರು ವೀರಭದ್ರಪ್ಪ ಪರ ಒಲವು ತೋರಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರ ಮೇಲೆ ಶಾಮನೂರು ಕುಟುಂಬವೂ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ವೀರಭದ್ರಪ್ಪ ಸೇವೆ ಗುರುತಿಸಿದವರು. ಈ ಸಲ ಎಂಎಲ್‌ಸಿ ಮಾಡುವ ಭರವಸೆ ಖರ್ಗೆ ನೀಡಿದ್ದಾರೆ. ವೀರಭದ್ರಪ್ಪಗೆ ಎಂಎಲ್‌ಸಿ ಆಗುವ ಅವಕಾಶ ತಪ್ಪಬಾರದು. ಜನತಾ ಪಕ್ಷದ ಸರ್ಕಾರವು 1978ರಲ್ಲಿ ಇಂದಿರಾ ಗಾಂಧಿಗೆ ಬಂಧಿಸಿದ್ದಾಗ ದಾವಣಗೆರೆ ಬಂದ್ ಮಾಡಿ, ರೈಲು ತಡೆ ಮಾಡಿ, ಹೋರಾಟ ನಡೆಸಿದ್ದದ್ದಾರೆ. ಅಂದಿನ ಸರ್ಕಾರ ವೀರಭದ್ರಪ್ಪ ಅವರನ್ನು ಬಂಧಿಸಿ, 6 ತಿಂಗಳು ಜೈಲಲ್ಲಿಟ್ಟಿತ್ತು. ರೈಲ್ ಇಲಾಖೆ ಮಾತ್ರವಲ್ಲದೇ ದಾವಣಗೆರೆಯಲ್ಲಿ ಸುಮಾರು 30 ಕೇಸ್ ಸಹ 40 ಜನರ ಮೇಲೆ ಹೂಡಲಾಗಿತ್ತು. ಎಂಥದ್ದೇ ಪರಿಸ್ಥಿತಿಯಲ್ಲಿ ಬಿ.ಎಚ್. ವೀರಭದ್ರಪ್ಪ ಹೋರಾಟದಿಂದ ಹಿಂದೆ ಸರಿಯುವ ವ್ಯಕ್ತಿಯಲ್ಲ ಎಂದರು.ದಾವಣಗೆರೆ ರುದ್ರಭೂಮಿಯಲ್ಲಿ ಕೆಲವರು ಗಲೀಜು ಮಾಡಿ, ಅಮಂಗಲ ಮಾಡುತ್ತಿದ್ದರು. ಅಂತ್ಯಕ್ರಿಯೆಗೆ ಪಾರ್ಥೀವ ಶರೀರ ತಂದಾಗ ಕಲ್ಲು ತೂರಿ, ಗಲಭೆಗೂ ಕಾರಣರಾಗುತ್ತಿದ್ದರು. ಅದನ್ನೆಲ್ಲಾ ಮನಗಂಡ ವೀರಭದ್ರಪ್ಪ ದೂಡಾದಿಂದ ಆಗಿನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಆದೇಶದಂತೆ 42 ಎಕರೆಗೂ ಅಧಿಕ ವಿಸ್ತಾರದ ಸ್ಮಶಾನದ ಸುತ್ತ 12 ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಲು ಕಾರಣರಾಗಿದ್ದರು. ಇದು ವೀರಭದ್ರಪ್ಪ ಸೇರಿದಂತೆ ಮಾದಿಗ ಸಮುದಾಯದವರ ಹೋರಾಟದ ಫಲವಾಗಿದೆ. 35 ವರ್ಷದಿಂದ ಇದುವರೆಗೆ 1350 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸಿದ ಪುಣ್ಯಕಾರ್ಯ ಬಿ.ಎಚ್.ವೀರಭದ್ರಪ್ಪ ಇತರರು ಮಾಡಿದ್ದಾರೆ ಎಂದು ವಿವರಿಸಿದರು.
ಸಮಾಜ ಸೇವೆಯಲ್ಲೂ ವೀರಭದ್ರಪ್ಪ ಹಿಂದೆ ಬಿದ್ದಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿರುವ ವೀರಭದ್ರಪ್ಪಗೆ ನಗರಸಭೆ, ಪಾಲಿಕೆ, ಜಿಪಂ, ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರ ಟಿಕೆಟ್ ಸಹ ಕೊಡಲಿಲ್ಲ. 2008ರಲ್ಲಿ ಬಿಜೆಪಿಯಿಂದ ಆಹ್ವಾನ ಬಂದರೂ ವೀರಭದ್ರಪ್ಪ ಕಾಂಗ್ರೆಸ್ ನಿಷ್ಟರಾಗಿದ್ದವರು. ಇಂಥವರಿಗೆ ಎಂಎಲ್‌ಸಿ ಮಾಡಿ, ಪಕ್ಷ ಸ್ಪಂದಿಸಲಿ. ಈಗ ನಾಲ್ವರನ್ನು ಎಂಎಲ್‌ಸಿ ಮಾಡಲು ಅವಕಾಶವಿದೆ. ದಾವಣಗೆರೆಯ ಹಿರಿಯ ಬಿ.ಎಚ್. ವೀರಭದ್ರಪ್ಪಗೆ ಎಂಎಲ್‌ಸಿ ಮಾಡಬೇಕು ಎಂದು ಆಗ್ರಹಿಸಿದರು.ಮುಂಬರುವ ತಾಪಂ, ಜಿಪಂ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮಾದಿಗ ಸಮುದಾಯಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ವೀರಭದ್ರಪ್ಪಗೆ ಅವಕಾಶ ನೀಡಬೇಕು. ಮಧ್ಯ ಕರ್ನಾಟಕದಿಂದ ಇದುವರೆಗೂ ಮಾದಿಗ ಸಮುದಾಯಕ್ಕೆ ಎಂಎಲ್‌ಸಿ ಮಾಡಿಲ್ಲ. ಈಗ ಅಂಥದ್ದೊಂದು ಅವಕಾಶ ಕಾಂಗ್ರೆಸ್ ಪಕ್ಷದ ಮುಂದಿದೆ. ವೀರಭದ್ರಪ್ಪ ಹಾಗೂ ಸಮುದಾಯದ ಕೂಗಿಗೆ ಪಕ್ಷ ಸ್ಪಂದಿಸಬೇಕೆಂದು ಹೆಗ್ಗೆರೆ ರಂಗಪ್ಪ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ನಿಮ್ಮ ಮನವಿ ಬಗ್ಗೆ ವರಿಷ್ಠರ ಗಮನಕ್ಕೆ ತರುವ ಭರವಸೆ ನೀಡಿದರು.- - -
-9ಕೆಡಿವಿಜಿ4, 5.ಜೆಪಿಜಿ:ದಾವಣಗೆರೆಯಲ್ಲಿ ಮಾದಿಗ ಸಮುದಾಯದ ಬಿ.ಎಚ್. ವೀರಭದ್ರಪ್ಪಗೆ ಎಂಎಲ್ಸಿ ಮಾಡುವಂತೆ ಒತ್ತಾಯಿಸಿ ಮಾದಿಗ ಸಮುದಾಯ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮೌನ ಮೆರವಣಿಗೆ ನಡೆಸಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿ ಅರ್ಪಿಸಿದರು.