ಗದಗ: ಜಿಲ್ಲೆಯಲ್ಲಿ ಏ. 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ಜರುಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತು ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷಾ ಸಮಯದಲ್ಲಿ ಯಾವುದೇ ಅಕ್ರಮ, ಅವ್ಯವಹಾರ, ಲೋಪ-ದೋಷಗಳಾಗದಂತೆ ಅಚ್ಚುಕಟ್ಟಾಗಿ ಪರೀಕ್ಷಾ ಕಾರ್ಯ ನಿರ್ವಹಿಸಬೇಕು. ಪರೀಕ್ಷಾ ಕಾರ್ಯಗಳಿಗೆ ನಿಯೋಜಿಸಿದ ಅಧಿಕಾರಿಗಳು ತಮಗೆ ನಿಗದಿಪಡಿಸಿದ ಕರ್ತವ್ಯಗಳನ್ನು ಶಿಸ್ತು ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.ಪ್ರತಿಬಂಧಕಾಜ್ಞೆ ಜಾರಿ: ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀ. ಪರಿಮಿತಿಯೊಳಗೆ ಏ. 16 ಮತ್ತು 17ರಂದು ಬೆಳಗ್ಗೆ 8.30ರಿಂದ ಸಂಜೆ 5ರ ವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ ಐದು ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು ಅಥವಾ ವ್ಯಕ್ತಿಗಳ ಗುಂಪುಗಳ ಪ್ರವೇಶವನ್ನು ಹಾಗೂ ಅನಧಿಕೃತ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರಗಳ ಪ್ರವೇಶವನ್ನು ನಿರ್ಬಂಧಿಸಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಬುಕ್‌ಸ್ಟಾಲ್, ಫೋಟೋ ಕಾಫಿಯರ್‌ಗಳನ್ನು ಬಂದ್ ಮಾಡಲು ಆದೇಶಿಸಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಮತ್ತು ಇತರ ಸಂಪರ್ಕ ಸಲಕರಣೆಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಕೈಗಡಿಯಾರ ಕಟ್ಟಿಕೊಂಡು ಹೋಗುವಂತಿಲ್ಲ. ಅಭ್ಯರ್ಥಿಗಳು ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಎಲೆಕ್ಟ್ರಾನಿಕ್ಸ್ ಉಪಕರಣಗಳು, ಮೊಬೈಲ್ ಫೋನ್ , ಬ್ಲೂಟೂಥ್, ಸೈಡ್ ರೂಲ್ಸ್, ಕ್ಯಾಲ್‌ಕ್ಯುಲೇಟರ್ , ವೈಟ್ ಪ್ಲುಯಿಡ್ , ವೈರ್‌ಲೆಸ್ ಸೆಟ್ಸ್ , ಪೇಪರ್ ಚೀಟಿ, ಬುಕ್, ಪುಸ್ತಕ ಇತ್ಯಾದಿಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.ಜಿಪಂ ಸಿಇಒ ಭರತ್ ಎಸ್. ಮಾತನಾಡಿ, ಜಿಲ್ಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಯಾವುದೇ ಅಕ್ರಮಕ್ಕೆ ಆಸ್ಪದ ನೀಡದೇ ಪಾರದರ್ಶಕವಾಗಿ ಜರುಗಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ. ಮಾತನಾಡಿ, ಪರೀಕ್ಷೆಯಲ್ಲಿ ಸಮಯ ಪರಿಪಾಲನೆ ಬಹಳ ಮುಖ್ಯವಾಗಿದ್ದು ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಗೋಡೆ ಗಡಿಯಾರಗಳು ಇರುವಂತೆ ನೋಡಿಕೊಳ್ಳಬೇಕು ಎಂದರು.ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ ಮಾತನಾಡಿ, ಜಿಲ್ಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು 13 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿವೆ. 3615 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಸುಗಮವಾಗಿ ಜರುಗಲು ಸಕಲ ಸಿದ್ಧತೆಗೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಪರೀಕ್ಷಾ ಕೇಂದ್ರಗಳ ಸ್ವಚ್ಛತೆ, ಸಿಸಿ ಕ್ಯಾಮೆರಾ ಅಳವಡಿಕೆ, ಸೂಕ್ತ ಬಂದೋಬಸ್ತ್ ಕುರಿತು ಚರ್ಚಿಸಲಾಯಿತು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಡಯಟ್ ಪ್ರಾಂಶುಪಾಲ ಜಿ.ಎಲ್. ಬಾರಾಟಕ್ಕೆ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.