ಕುಷ್ಟಗಿ: ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಕುಷ್ಟಗಿ ಪ್ರಜ್ಞಾವಂತ ಪ್ರಗತಿಪರ ಪ್ರಜಾಪ್ರಭುಗಳ ಹೋರಾಟ ವೇದಿಕೆ ವತಿಯಿಂದ ಶನಿವಾರ ತಹಸೀಲ್ದಾರ್ ಕಚೇರಿ ಸಮೀಪದ ಅಂಬೇಡ್ಕರ್ ವೃತ್ತದಲ್ಲಿ ಮೌನ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಳ ಸ್ಥಿತಿಗತಿ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿರುವುದು ರೈತರಿಗೆ ಮಾಡಿದ ಅನ್ಯಾಯ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸೆಟಲೈಟ್ ಮೂಲಕ ನಡೆಸುವ ಬೆಳೆ ಸಮೀಕ್ಷೆಯಿಂದ ತಾಲೂಕಿನ ನೈಜ ಪರಿಸ್ಥಿತಿ ತಿಳಿಯಲು ಸಾಧ್ಯವಿಲ್ಲ. ಅಧಿಕಾರಿಗಳು ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸಿದರೆ ಮಾತ್ರ ಬೆಳೆ ಹಾನಿಯ ವಾಸ್ತವ ಚಿತ್ರಣ ತಿಳಿಯಲಿದೆ ಎಂದು ಹೋರಾಟಗಾರರು ಹೇಳಿದರು.ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ಬೇಡಿಕೆ ಈಡೇರುವ ವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ ಹೋರಾಟಗಾರರು, ಉಪವಾಸ ಸತ್ಯಾಗ್ರಹ ಮುಂದುವರಿಸಿದರು.
ಹೋರಾಟದ ಮುಖ್ಯಸ್ಥರಾದ ಬಸವರಾಜ ಗಾಣಿಗೇರ, ಮಲ್ಲಿಕಾರ್ಜುನ ದೋಟಿಹಾಳ, ರಮೇಶ ಮೇಲಿನಮನಿ, ಕಿರಣ ಜ್ಯೋತಿ, ಕಾಶೀಂ ಶ್ರೀಶಾಲ, ಅಕ್ಕಮ್ಮ ಮರೇಗೌಡರ್, ಸಂಗಮ್ಮ ಗುಳಗೌಡ್ರ ಭಾಗವಹಿಸಿದ್ದರು.