ಹೊಸ ವರ್ಷಾಚರಣೆಗೆ ಸಿಲಿಕಾನ್‌ ಸಿಟಿ ಸಜ್ಜು- ಸಂಚಾರಕ್ಕೆ ಪರ್ಯಾಯ ಮಾರ್ಗ

KannadaprabhaNewsNetwork |  
Published : Dec 31, 2025, 04:00 AM ISTUpdated : Dec 31, 2025, 07:55 AM IST
New Year

ಸಾರಾಂಶ

ಹೊಸ ವರ್ಷಾಚರಣೆಯ ಪ್ರಮುಖ ಜನಾಕರ್ಷಣೆ ಕೇಂದ್ರ ಬಿಂದುವಾದ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

 ಬೆಂಗಳೂರು :  ಹೊಸ ವರ್ಷಾಚರಣೆಯ ಪ್ರಮುಖ ಜನಾಕರ್ಷಣೆ ಕೇಂದ್ರ ಬಿಂದುವಾದ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

ಈ ಎರಡು ರಸ್ತೆಗಳ ಮೇಲಿನ ಕಣ್ಗಾವಲಿಗೆ ಪ್ರತ್ಯೇಕ ಸಿಸಿಟಿವಿ ನಿಯಂತ್ರಣ ಕೊಠಡಿ ತೆರೆಯಲಾಗಿದ್ದು, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ಗಳಲ್ಲಿ ಸುಮಾರು 3,400 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾ ಬಳಸಿ ಕಣ್ಣಿಡಲಾಗುತ್ತದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚ್ಚಿಂದ್ರ ಹಾಕೆ ತಿಳಿಸಿದ್ದಾರೆ.

ಈ ಕ್ಯಾಮೆರಾಗಳ ಪೈಕಿ 400 ಪೊಲೀಸರು ಹಾಗೂ 3 ಸಾವಿರ ಖಾಸಗಿಯವರಿಗೆ ಸೇರಿದ ಕ್ಯಾಮೆರಾಗಳಾಗಿವೆ. ಹೊಸ ವರ್ಷಾಚರಣೆ ವೇಳೆ ಗುಂಪಿನಲ್ಲಿ ಸಣ್ಣ ಗಲಭೆ ನಡೆದರೂ ಮಾಹಿತಿ ಪಡೆಯಬಹುದು. ಪ್ರತಿ 50 ಮೀಟರ್‌ಗೂ ಕ್ಯಾಮೆರಾಗಳಿದ್ದು ಸಂಪೂರ್ಣ ಕಣ್ಗಾವಲಿರುತ್ತದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಕೇಂದ್ರ ವಿಭಾಗಕ್ಕೆ ಮಾತ್ರವಲ್ಲದೆ ಈ ಕ್ಯಾಮೆರಾಗಳನ್ನು ಪೊಲೀಸ್ ಆಯುಕ್ತರ ಕಚೇರಿಗೆ ಸಹ ಸಂಪರ್ಕ ಕಲ್ಪಿಸಲಾಗಿದೆ. ಪ್ರತಿ ಕ್ಷಣದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

20 ಸಾವಿರ ಪೊಲೀಸರ ನಿಯೋಜನೆ:  

ಹೊಸ ಸಂಭ್ರಮಾಚರಣೆಯ ದಿನದಂದು ಕಾನೂನು ಸುವ್ಯವಸ್ಥೆಯ 14 ಸಾವಿರ ಪೊಲೀಸರು, 2500 ಸಂಚಾರ ಪೊಲೀಸರು, 88 ಕೆಎಸ್ಆರ್‌ಪಿ ತುಕಡಿ , 21 ಸಿಎಆರ್, 266 ಹೊಯ್ಸಳ ವಾಹನ, 250 ಕೋಬ್ರಾ ವಾಹನಗಳನ್ನು ನಿಯೋಜಿಸಲಾಗುತ್ತಿದೆ. 400 ಟ್ರಾಫಿಕ್ ವಾರ್ಡನ್‌ಗಳನ್ನು ನಿಯೋಜಿಸಲಾಗಿದೆ. ಜನ ದಟ್ಟಣೆ ನಿಯಂತ್ರಿಸಲು ವಾಟರ್ ಜೆಟ್ಸ್, ಸಿವಿಲ್ ಡಿಫೆನ್ಸ್, ಹೋಮ್ ಗಾರ್ಡ್ಸ್ ಸೇರಿದಂತೆ ಒಟ್ಟು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಸಂಭ್ರಮಾಚರಣೆ ನಡೆಯುವ ಸ್ಥಳಗಳಲ್ಲಿ 400 ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸೇಫ್ಟಿ ಶೆಲ್ಟರ್‌ಗಳು, ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಜನದಟ್ಟಣೆ ಇರುವ ಕಡೆ ಡ್ರೋನ್ ಕ್ಯಾಮೆರಾಗಳಿಂದ ಪೊಲೀಸರು ನಿಗಾ ವಹಿಸಲಿದ್ದಾರೆ. ಈಗಾಗಲೇ ಬಾರ್, ರೆಸ್ಟೋರೆಂಟ್, ಮಾಲ್‌ಗಳ ಮಾಲೀಕರುಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಎಂ.ಜಿ ರಸ್ತೆ, ಬ್ರೀಗೆಡ್‌ ರಸ್ತೆಗಳಲ್ಲಿ, ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿಯ ಸೇರಿದಂತೆ ಇತರೆ ಕಡೆಗಳಲ್ಲಿ ಇರುವ ಬಾರ್, ಪಬ್‌, ಹೋಟೆಲ್, ಲಾಡ್ಜ್‌ಗಳಿಗೆ ಪೊಲೀಸರು ಭೇಟಿ ನೀಡಿ ಕೈಗೊಂಡಿರುವ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಎಐ ಕ್ಯಾಮೆರಾಗಳ ಹದ್ದಿನ ಕಣ್ಣು :  

ಮುಖಚರ್ಯೆ ಗುರುತಿಸುವ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.‌ ಅಪರಾಧ ಚಟುವಟಿಕೆ ಹಿನ್ನೆಲೆಯುಳ್ಳವರ ಮಾಹಿತಿ ಎಐ ಕ್ಯಾಮೆರಾದಿಂದ ಗೊತ್ತಾಗಲಿದೆ. ಅಂಥವರು ಕಂಡು ಬಂದರೆ ಕೂಡಲೇ ಎಐ ಕ್ಯಾಮೆರಾ ಎಚ್ಚರಿಕೆ ನೀಡಲಿದೆ.

ಹೀಟ್ ಮ್ಯಾಪ್: 

 ಆಂಬ್ಯುಲೆನ್ಸ್, ವಾಹನಗಳು, ಟ್ರಾಫಿಕ್ ಸಮಸ್ಯೆ ಸೇರಿದಂತೆ ಜನಗಳಿಗೆ ಮಾಹಿತಿ ಸಿಗಲು ಕ್ಯೂಆರ್ ಕೋಡ್ ಮೂಲಕ ಮಾಹಿತಿ ಪಡೆಯಬಹುದು‌. ಇದೇ ಮೊದಲ ಬಾರಿಗೆ ‘ಹೀಟ್ ಮ್ಯಾಪ್’ ಮಾಡಲಾಗಿದೆ. ಅತೀ ಹೆಚ್ಚು ಜನ ಸೇರಿರುವ ಸ್ಥಳಗಳನ್ನು ಕೆಂಪು ಬಣ್ಣದಿಂದ ಗುರುತಿಸಲಾಗುತ್ತದೆ‌. ಹಳದಿ ಬಣ್ಣದಿಂದ ಗುರುತಿಸುವ ಸ್ಥಳಗಳನ್ನು ಹೆಚ್ಚಿನ ಜನ ಸೇರುತ್ತಿರುವುದನ್ನು ಸೂಚಿಸುತ್ತದೆ‌. ಹಸಿರು ಬಣ್ಣ ಇರುವುದು ಕಡಿಮೆ ಜನ ಇರುವುದನ್ನು ಗುರುತಿಸಬಹುದು. ಇದನ್ನು ಕಮಾಂಡ್ ಸೆಂಟರ್‌ನಿಂದ ನಿಗಾ ವಹಿಸಲಾಗುತ್ತದೆ.

ಪ್ಲೈಓವರ್‌ಗಳು ಬಂದ್‌:

ನಗರದ ಕೆ.ಆರ್. ಮಾರುಕಟ್ಟೆ, ಯಶವಂತಪುರ, ಹೆಬ್ಬಾಳ, ಪೀಣ್ಯ, ಜಯನಗರ ಸೇರಿದಂತೆ ಪ್ರಮುಖ ಪ್ಲೈಓವರ್ ಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬುಧವಾರ ರಾತ್ರಿ ಬಂದ್‌ ಮಾಡಲಾಗುತ್ತದೆ.

ಸಮೂಹ ಸಾರಿಗೆ ಬಳಸಿ: ಹೊಸವರ್ಷಾಚರಣೆಗೆ ಬರುವವರು ಸಾಧ್ಯವಾದಷ್ಟು ಸಮೂಹ ಸಾರಿಗೆಯನ್ನು ಬಳಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಮೂರು ಮಾರ್ಗಗಳಲ್ಲಿಯೂ ನಸುಕಿನ 3 ಗಂಟೆವರೆಗೂ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ. ಬಿಎಂಟಿಸಿ ಕೂಡ ತಡರಾತ್ರಿ 2 ಗಂಟೆವರೆಗೂ ಕಾರ್ಯನಿರ್ವಹಿಸಲಿದೆ. ಹೀಗಾಗಿ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದು. ಸಾರ್ವಜನಿಕರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು ನಗರದ ಎಂಟು ಕಡೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. 

ಸಂಚಾರಕ್ಕೆ ಪರ್ಯಾಯ ಮಾರ್ಗ:

*ಕ್ವೀನ್ಸ್‌ ವೃತ್ತದ ಕಡೆಯಿಂದ ಹಲಸೂರು ತೆರಳುವ ವಾಹನಗಳು ಅನಿಲ್‌ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್‌ ಸ್ಟ್ರೀಟ್‌-ಬಿ.ಆರ್‌.ವಿ.ಜಂಕ್ಷನ್‌ ಮೂಲಕ ಸಾಗಬೇಕು.

*ಹಲಸೂರು ಕಡೆಯಿಂದ ಕಂಟೋನ್ಮೆಂಟ್‌ ಕಡೆಗೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ -ಡಿಕನ್ಸನ್‌ ರಸ್ತೆ ಮಾರ್ಗವಾಗಿ ಸಂಚರಿಸಬೇಕು.

*ಈಜಿಪುರ ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್‌ ಬಳಿ ಬಲತಿರುವು ಪಡೆದು ಸಾಗಬೇಕು.

*ಎಚ್‌ಎಎಲ್‌ನಿಂದ ಬರುವ ವಾಹನಗಳು ಎಎಸ್‌ಸಿ ಸೆಂಟರ್‌ನಲ್ಲಿ ಬಲತಿರುವು ಪಡೆದು ಟ್ರಿನಿಟಿ ಮೂಲಕ ಸಂಚರಿಸಬೇಕು.

ವಾಹನಗಳ ಪಾರ್ಕಿಂಗ್‌ ಎಲ್ಲಿ?

ಶಿವಾಜಿನಗರ ಬಿ.ಎಂ.ಟಿ.ಸಿ ಶಾಪಿಂಗ್‌ ಕಾಂಪ್ಲೆಕ್ಸ್‌ನ 1ನೇ ಮಹಡಿ, ಯುಬಿ ಸಿಟಿ, ಗರುಡಾ ಮಾಲ್‌, ಕಾಮರಾಜ್‌ ರಸ್ತೆ (ಕಬ್ಬನ್‌ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್‌ ಸ್ಟ್ರೀಟ್‌ ಜಂಕ್ಷನ್‌ ವರೆಗೆ).

ಬಸ್, ಟಿಟಿ ಲಭ್ಯತೆ:

ಅನಿಲ್‌ ಕುಂಬ್ಳೆ ಸರ್ಕಲ್‌, ಮೆಯೋ ಹಾಲ್‌ ಜಂಕ್ಷನ್‌. ಡೆಕಥ್ಲಾನ್‌ (ಬ್ರಿಗೇಡ್‌ ರಸ್ತೆ), ಟ್ರಿನಿಟಿ ಸರ್ಕಲ್‌, ಹಾಸ್ಮಟ್‌ ಆಸ್ಪತ್ರೆ ಆಶೀರ್ವಾದಮ್‌ ಜಂಕ್ಷನ್‌ ಸಿಗಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ