ರೇಷ್ಮೆ ಮಾರುಕಟ್ಟೆ ರಾಮನಗರದಲ್ಲಿಯೇ ಉಳಿಯಲಿದೆ: ಇಕ್ಬಾಲ್ ಹುಸೇನ್

KannadaprabhaNewsNetwork | Published : Jan 31, 2025 12:46 AM

ಸಾರಾಂಶ

ರಾಮನಗರ: ಮಾರುಕಟ್ಟೆಯಲ್ಲಿಯೇ ರೇಷ್ಮೆ ಖರೀದಿಸುವ ವ್ಯವಸ್ಥೆ ಮಾಡಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರೇಷ್ಮೆ ಸಚಿವರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ರಾಮನಗರದಲ್ಲಿಯೇ ಉಳಿಯಲಿದೆ. ಈ ನಿಟ್ಟಿನಲ್ಲಿ ಮೂಲಸೌಕರ್ಯ ಕಲ್ಪಿಸಿ ಮಾರುಕಟ್ಟೆಗೆ ಮರುಜೀವ ನೀಡಲು ರಾಜ್ಯಸರ್ಕಾರ 1.60 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ನಡೆದ ರೀಲರ್ಸ್ ಗಳ ಹಾಗೂ ರೈತರ ಕುಂದು ಕೊರತೆ ಸ್ವೀಕರಿಸಿ ಮಾತನಾಡಿದ ಅವರು, ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕ್ಯಾಂಟೀನ್ , ಶೌಚಾಲಯ ನಿರ್ಮಾಣ ಸೇರಿದಂತೆ ನವೀಕರಣಕ್ಕಾಗಿ ಅಧಿಕಾರಿಗಳ ಮೂಲಕ ರಾಜ್ಯಸರ್ಕಾರಕ್ಕೆ 5 ಕೋಟಿ ರುಪಾಯಿಗಳ ಪ್ರಸ್ತಾವನೆ ಸಲ್ಲಿಸಿದ್ದೆ. ಆದರೆ, ಸರ್ಕಾರ 1 ಕೋಟಿ 60 ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದರು.

ಈಗ ಮಾರುಕಟ್ಟೆ ಪಕ್ಕದ ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಹೀಗಾಗಿ ಆ ಕಟ್ಟಡದೊಳಗಿನ ಪರಿಕರ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮುಂದುವರಿದ ಕಾಮಗಾರಿ ಎಂದು ಹೇಳಿ ಮತ್ತೊಂದು ಪ್ರಸ್ತಾವನೆ ಸಲ್ಲಿಸಲು ರೇಷ್ಮೆಗೂಡಿನ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಈ ಮಾರುಕಟ್ಟೆಯ ನವೀಕರಣಕ್ಕಾಗಿ 5 ರಿಂದ 10 ಕೋಟಿ ಮಾತ್ರವಲ್ಲ, ಎಷ್ಟು ಕೋಟಿ ವೆಚ್ಚ ತಗಲುತ್ತದೆಯೋ ಅಷ್ಟು ಅನುದಾನವನ್ನು ಸರ್ಕಾರದಿಂದ ನಾನು ತರುತ್ತೇನೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರೇಷ್ಮೆ ಸಚಿವರಿಗೆ ಮಾರುಕಟ್ಟೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಅತಿ ಹೆಚ್ಚು ರೇಷ್ಮೆ ಬೆಳೆಯುವ ಹಾಗೂ ರೇಷ್ಮೆ ಮಾರುಕಟ್ಟೆ ಇರುವ ಕಾರಣದಿಂದಲೇ ರಾಮನಗರಕ್ಕೆ ರೇಷ್ಮೆನಗರಿ ಎಂಬ ಹೆಸರು ಬಂದಿದೆ. ನೂರಾರು ವರ್ಷಗಳ ಮಾರುಕಟ್ಟೆಯನ್ನು ನಂಬಿ ಲಕ್ಷಾಂತರ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ.

ಆದ್ದರಿಂದ ರೇಷ್ಮೆಗೂಡು ಮಾರುಕಟ್ಟೆ ಇಲ್ಲೇ ಇರಬೇಕು. ಇದಕ್ಕೆ ರೇಷ್ಮೆ ಬೆಳೆಗಾರರು, ರೀಲರ್ಸ್ ಹಾಗೂ ವರ್ತಕರ ಬೆಂಬಲ ಬೇಕಾಗಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

200 ಕೋಟಿ ಭರವಸೆ ಸಿಕ್ಕಿದೆ:

ನಾನು 20 ರಿಂದ 25 ವರ್ಷಗಳಿಂದ ಶಾಸಕನಾಗಿಲ್ಲ. ನಾನು ಶಾಸಕನಾಗಿ ಕೇವಲ ಒಂದೂವರೆ ವರ್ಷವಷ್ಟೇ ಆಗಿದೆ. ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ರಾಮನಗರಕ್ಕೆ ಹೊಸ ರೂಪ ಕೊಡುವ ಉದ್ದೇಶ ಹೊಂದಿದ್ದೇನೆ ಎಂದರು.

ರಾಮನಗರ ಟೌನಿನ ಅಭಿವೃದ್ಧಿಗಾಗಿ 200 ಕೋಟಿ ರುಪಾಯಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಫೆ.2ರಂದು ಚನ್ನಪಟ್ಟಣದಲ್ಲಿ ಅನುದಾನ ಘೋಷಣೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಮಾರುಕಟ್ಟೆಯಲ್ಲಿಯೇ ರೇಷ್ಮೆ ಖರೀದಿಸುವ ವ್ಯವಸ್ಥೆ ಜಾರಿಗೆ ಚರ್ಚಿಸುವೆ:

ರಾಮನಗರ: ಮಾರುಕಟ್ಟೆಯಲ್ಲಿಯೇ ರೇಷ್ಮೆ ಖರೀದಿಸುವ ವ್ಯವಸ್ಥೆ ಮಾಡಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರೇಷ್ಮೆ ಸಚಿವರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ನಡೆದ ರೀಲರ್ಸ್ ಗಳ ಕುಂದು ಕೊರತೆ ಸ್ವೀಕರಿಸಿ ಮಾತನಾಡಿದ ಅವರು, ಈ ಮೊದಲು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾರುಕಟ್ಟೆಯಲ್ಲಿಯೇ ರೇಷ್ಮೆ ಖರೀದಿಸಲಾಗುತ್ತಿತ್ತು. ಆ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.

ರೀಲರ್ಸ್ ಗಳಿಗೆ ಸಬ್ಸಿಡಿ ಲಾಭ ಪಡೆಯಬೇಕೆಂದರೆ ಬಿಲ್ ಬೇಕು. ಬಿಲ್ ಇಲ್ಲದಿದ್ದರೆ ಸಬ್ಸಿಡಿ ಸಿಗುವುದಿಲ್ಲ. ರೇಷ್ಮೆಗೂಡನ್ನು ಯಾರಿಗೆ ಮಾರಾಟ ಮಾಡುತ್ತಾರೋ ಅವರಿಂದ ಬಿಲ್ ಪಡೆಯಬೇಕಾಗಿದೆ. ಹೀಗಾಗಿ ಟ್ರೇಡರ್ಸ್ ಗಳಿಗೆ ಕಮಿಷನ್ ಕೊಟ್ಟು ಬಿಲ್ ಪಡೆಯುತ್ತಿರುವ ರೀಲರ್ಸ್ ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಬ್ಸಿಡಿಗಾಗಿ ಬಿಲ್ ಸಲ್ಲಿಸುವುದೆಲ್ಲ ಸರ್ಕಾರದ ನಿಯಮಾವಳಿಗಳು. ಇದನ್ನು ಸರ್ಕಾರದ ಗಮನಕ್ಕೆ ತಂದು ಸರಳೀಕರಣ ಮಾಡಲು ಪ್ರಯತ್ನಿಸುತ್ತೇನೆ. ರೈತರು ರೇಷ್ಮೆ ಮತ್ತು ಕೃಷಿ ಇಲಾಖೆಯಿಂದ ಸಬ್ಸಿಡಿ ಪಡೆಯುತ್ತಾರೆ. ಹೀಗಾಗಿ ರೈತರಿಂದ ರೇಷ್ಮೆಗೂಡು ಖರೀದಿಸಿದ ಆಧಾರದ ಮೇಲೆ ರೀಲರ್ಸ್ ಗಳಿಗೆ ಸಬ್ಸಿಡಿ ಕೊಡಬೇಕೆಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.

ಲೈಸೆನ್ಸ್ ಹೋಲ್ಡರ್ ಗಳಿಗೆ ಗೂಡು ಖರೀದಿಗೆ ಮೊದಲ ಆದ್ಯತೆ ಕೊಡಬೇಕು.ಆಧುನಿಕ ಉಪಕರಣ ಘಟಕ ಸ್ಥಾಪನೆಗೆ 4 ಸಾವಿರ ಚದರ ಅಡಿ ಬೇಕೆಂಬ ನಿಯಮ ಇದೆ. ಅದನ್ನು 2 ಸಾವಿರ ಚದರ ಅಡಿಗೆ ಸೀಮಿತಗೊಳಿಸುವಂತೆ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕಿದೆ. ಇನ್ನು ಒಂದು ಘಟಕ ಸ್ಥಾಪನೆಗೆ 37 ಲಕ್ಷ ರುಪಾಯಿ ವೆಚ್ಚ ತಗಲುತ್ತಿದ್ದು, ಇದರಲ್ಲಿ 7 ಲಕ್ಷ ಜಿಎಸ್ ಟಿ ಸೇರಿದೆ. ಆ ಜಿಎಸ್ ಟಿ ತೆಗೆಯಬಹುದೆಂದು ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

ಖಾಸಗಿ ವ್ಯಕ್ತಿಗಳು ಅರ್ಜಿ ಹಾಕಿ ಘಟಕ ಸ್ಥಾಪನೆಗೆ ಸಬ್ಸಿಡಿ ಪಡೆದಿದ್ದಾರೆ. ರೀಲರ್ಸ್ ಅಸೋಸಿಯೇಷನ್ ಗೆ ತನ್ನದೇ ಆದ ಶಕ್ತಿಯಿದ್ದು, ಸರ್ಕಾರದ ಮಟ್ಟದಲ್ಲಿ ಸಲಹೆಗಳಿಗೆ ಮಾನ್ಯತೆಯೂ ಸಿಗುತ್ತದೆ. ಅಸೋಸಿಯೇಷನ್ ಕಡೆಯಿಂದ ಹೋದರೂ ಸಬ್ಸಿಡಿ ಪಡೆಯಬಹುದಾಗಿದೆ. ಆದ್ದರಿಂದ ಹಂತ ಹಂತವಾಗಿ ಘಟಕ ಸ್ಥಾಪನೆಗೆ ಆದ್ಯತೆ ನೀಡೋಣ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪರ್ವೇಜ್ ಪಾಷ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ರೇಷ್ಮೆ ಬೆಳೆಗಾರ ರವಿ, ರೀಲರ್ಸ್ ಗಳಾದ ಶಫಿ, ಮೋಸಿನ್, ಹಬಿಬ್ ಉಲ್ಲಾ ಹಾಜರಿದ್ದರು.

Share this article