ಅಯೋಧ್ಯೆಯ ಶ್ರೀ ರಾಮ ಮಂದಿರದ ಹುಂಡಿಯ ಭಕ್ತರ ಹಣ ಲೂಟಿ ಮಾಡಿದವರು ಹಾಗೂ ದಾವಣಗೆರೆಯಲ್ಲಿ ಬೆಳ್ಳಿ ಇಟ್ಟಿಗೆ ಕಾಣೆ ಮಾಡಿದ ಭ್ರಷ್ಟರ ವಿರುದ್ಧ ಎಸ್ಐಟಿ ತನಿಖೆ, ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ನಗರದಲ್ಲಿ ಶನಿವಾರ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟಿಸಲಾಯಿತು.
- ಶ್ರೀ ರಾಮ ಮಂದಿರ ಹುಂಡಿ ಹಣ ಲೂಟಿ ವಿರುದ್ಧವೂ ಎಸ್ಐಟಿ ತನಿಖೆ ನಡೆಯಲಿ: ದಿನೇಶ ಶೆಟ್ಟಿ ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಅಯೋಧ್ಯೆಯ ಶ್ರೀ ರಾಮ ಮಂದಿರದ ಹುಂಡಿಯ ಭಕ್ತರ ಹಣ ಲೂಟಿ ಮಾಡಿದವರು ಹಾಗೂ ದಾವಣಗೆರೆಯಲ್ಲಿ ಬೆಳ್ಳಿ ಇಟ್ಟಿಗೆ ಕಾಣೆ ಮಾಡಿದ ಭ್ರಷ್ಟರ ವಿರುದ್ಧ ಎಸ್ಐಟಿ ತನಿಖೆ, ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ನಗರದಲ್ಲಿ ಶನಿವಾರ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟಿಸಲಾಯಿತು.
ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಿಂದ ಪಂಜಿನ ಮೆರವಣಿಗೆಯ ಪ್ರತಿಭಟನಾ ಮೆರವಣಿಗೆ ಹೊರಟು ಪಿಜಿ ಬಡಾವಣೆಯ ಶ್ರೀರಾಮ ಮಂದಿರದವರೆಗೆ ಸಾಗಿ, ಬೆಳ್ಳಿ ಇಟ್ಟಿಗೆ ಕಾಣೆಯಾಗಿದ್ದನ್ನು ಎಸ್ಐಟಿ ತನಿಖೆಗೆ ಒಪ್ಪಿಸುವಂತೆ ಘೋಷಣೆ ಕೂಗಲಾಯಿತು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ದೇಶದಲ್ಲಿ ಶ್ರೀ ರಾಮನ ಹೆಸರು ಹೇಳಿ ಕೋಟ್ಯಂತರ ಹಣ ವಸೂಲಿ ಮಾಡಿದ್ದಲ್ಲದೇ, ರಾಮ ಮಂದಿರದ ಹುಂಡಿಯನ್ನೂ ಬಿಡದೇ ಭಕ್ತರ ಕಾಣಿಕೆ ಹಣ ಲೂಟಿ ಮಾಡಿದ ಭ್ರಷ್ಟರ ವಿರುದ್ಧ ಎಸ್ಐಟಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ದಾವಣಗೆರೆ ಚಂಪತ್ ರಾಯ್ ಆದ ಬಿಜೆಪಿ ಭ್ರಷ್ಟ ನಾಯಕ ಯಶವಂತ ರಾವ್ ಜಾಧವ್ ಶ್ರೀ ರಾಮನ ಹೆಸರನ್ನು ಹೇಳಿ ಹಣ ವಸೂಲಿ ಮಾಡಿ, ರಾಮ ಮಂದಿರಕ್ಕೆ ನೀಡುತ್ತೇವೆಂದು ಬೆಳ್ಳಿ ಇಟ್ಟಿಗೆಯನ್ನು ಮಾಡಿಸಿ, ದಾವಣಗೆರೆಯಲ್ಲಿ ಮೆರವಣಿಗೆ ಮಾಡಿದ್ದರು. ಅನಂತರ ಅದನ್ನು ದೇವಸ್ಥಾನಕ್ಕೆ ನೀಡದೇ ನುಂಗಿ ನೀರು ಕುಡಿದಿದ್ದಾರೆ. ಈ ಮೂಲಕ ರಾಮ ಭಕ್ತರ ಭಕ್ತಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಯಶವಂತ ರಾವ್ ಹಿಂದುತ್ವವನ್ನೇ ಕೊಲೆ ಮಾಡಿದ್ದಾರೆ. ದಾವಣಗೆರೆ ಜನರಿಗೆ ಬೆಳ್ಳಿ ಇಟ್ಟಿಗೆ ಹೆಸರಲ್ಲಿ ಮೋಸ ಮಾಡಿದ್ದಾರೆ. ಇಂತಹವರ ವಿರುದ್ಧ ಎಸ್ಐಟಿ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸಲಾಗುವುದು. ಯಾವುದೇ ಕಾರಣಕ್ಕೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ದಿನೇಶ ಕೆ.ಶೆಟ್ಟಿ ಎಚ್ಚರಿಸಿದರು.
ಪಕ್ಷದ ಹಿರಿಯ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎ.ನಾಗಭೂಷಣ ಮಾತನಾಡಿ, ಭಕ್ತರ ಭಾವನೆಗಳೊಂದಿಗೆ ಆಟವಾಡಿ, ದೇವರ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು, ಶ್ರೀರಾಮ ಮಂದಿರದ ಹುಂಡಿ ಹಣವನ್ನು ಕಳವು ಮಾಡಿರುವುದು ಖಂಡನೀಯ. ಅಂತಹವರ ವಿರುದ್ಧ ಯಾವುದೇ ಮುಲಾಜಿಲ್ಲದೇ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು
ಯುವ ಕಾಂಗ್ರೆಸ್ ಅಧ್ಯಕ್ಷ ವರುಣ್ ಬೆಣ್ಣೆಹಳ್ಳಿ ಮಾತನಾಡಿ, ದೇಶದಲ್ಲಿ ಬಿಜೆಪಿಯವರು ರಾಮನ ಹೆಸರಲ್ಲಿ ಅಧಿಕಾರಕ್ಕೆ ರಾಮನಿಗೆ ಮೋಸ ಮಾಡಿ, ಹಿಂದುತ್ವವನ್ನೇ ದಾರಿ ತಪ್ಪಿಸುತ್ತಿದ್ದಾರೆ. ಯುವಕರಿಗೆ ಅಂಧ ಭಕ್ತಿಯನ್ನು ತೋರಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಇಂತಹ ಭ್ರಷ್ಟ ರಾಜಕಾರಣಿಗಳು ತಕ್ಷಣ ರಾಜೀನಾಮೆ ನೀಡಿ, ಇಲ್ಲವಾದರೆ ರಾಷ್ಟ್ರದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದರು.
ಪಕ್ಷದ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ. ಉಮೇಶ, ಶ್ರೀಕಾಂತ ಬಗೆರೆ, ಪಾಲಿಕೆ ಮಾಜಿ ಸದಸ್ಯ ಎಲ್.ಡಿ.ಗೋಣೆಪ್ಪ, ದೂಡಾ ಸದಸ್ಯೆ ವಾಣಿ ಬಕೇಶ ನ್ಯಾಮತಿ, ಸುರೇಶ್ ಜಾಧವ್, ಪ್ರವೀಣ್ ಪವಾರ್, ಕೆ.ಪಿ.ರಾಜೇಶ್ವರಿ, ಟಿ.ಎಂ.ಕಾವೇರಿ, ರಾಜೇಶ್ವರಿ, ಜಮ್ನಳ್ಳಿ ನಾಗರಾಜ, ಪ್ರವೀಣ, ವೀರಭದ್ರಸ್ವಾಮಿ, ಇನ್ನು ಮುಂತಾದವರಿದ್ದರು.
- - -
-25ಕೆಡಿವಿಜಿ11, 12:
ದಾವಣಗೆರೆಯಲ್ಲಿ ಶ್ರೀರಾಮ ಮಂದಿರದ ಹುಂಡಿ ಕಳವು ಹಾಗೂ ದಾವಣಗೆರೆಯಲ್ಲಿ ಬೆಳ್ಳಿ ಇಟ್ಟಿಗೆ ಕಾಣೆ ಪ್ರಕರಣ ಎಸ್ಐಟಿಗೆ ಒಪ್ಪಿಸುವಂತೆ ಕಾಂಗ್ರೆಸ್‌ನಿಂದ ದಿನೇಶ ಕೆ. ಶೆಟ್ಟಿ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.