ತುಮಕೂರು: ಜನತಾದಳ ಸಂಯುಕ್ತ(ಜೆಡಿಯು) ಪಕ್ಷ ಉದಯವಾಗಿ 25 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೊಟೇಲ್‌ನಲ್ಲಿ ಜೆಡಿಯು ಪಕ್ಷದ ನಗರ ಅಧ್ಯಕ್ಷರಾದ ಪರಮೇಶ್ವರಯ್ಯ ಅಧ್ಯಕ್ಷತೆಯಲ್ಲಿ ಬೆಳ್ಳಿ ಮಹೋತ್ಸವದ ಸವಿನೆನಪು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪಕ್ಷದ ಮುಖಂಡರು ಹಾಗೂ ಹಿತೈಷಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಜೆಡಿಯು ಪಕ್ಷದ ಉದಯ ಮತ್ತು ಇದುವರೆಗೂ ನಡೆದುಕೊಂಡು ಬಂದಿರುವ ದಾರಿಯ ಕುರಿತು ಮಾತನಾಡಿದ ಕೆ.ಆರ್.ರಂಗನಾಥ್,ಮಾಜಿ ಮುಖ್ಯಮಂತ್ರಿ ಗಳಾದ ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ,ಮಾಜಿ ಶಾಸಕರಾದ ಎಂ.ಪಿ.ನಾಡಗೌಡ, ಮಹಿಮಾ ಪಟೇಲ್ ಅವರಂತಹ ಹಿರಿಯರು ಜೆಡಿಯು ಪಕ್ಷವನ್ನು ಬಲವಾಗಿ ಕಟ್ಟಿದ್ದಾರೆ. ಒಂದು ಪ್ರಾದೇಶಿಕ ಪಕ್ಷವಾಗಿ 25 ವಸಂತಗಳನ್ನು ಕಂಡಿರುವುದು ವಿಶೇಷವಾಗಿದೆ. ಸೇವೆಯನ್ನು ಮುಖ್ಯ ಗುರಿಯಾಗಿಸಿಕೊಂಡು, ನೈತಿಕ ರಾಜಕಾರಣವನ್ನು ನಾಡಿನೆಲ್ಲೆಡೆ ಪಸರಿಸಬೇಕು ಎಂಬ ಕಾರಣಕ್ಕೆ ಜೆಡಿಯು ಕೆಲಸ ಮಾಡುತ್ತಿದೆ. ಮುಂಬರುವ ಆಗ್ನೇಯ ಪದವಿಧರರ ಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಿ ಆಯುರ್ವೇದ ವೈದ್ಯರಾದ ಡಾ.ಕೆ.ನಾಗರಾಜು ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ಮುಂದಿನ ದಿನಗಳಲ್ಲಿ ಅವರು ಕ್ಷೇತ್ರದಾದ್ಯಂತ ಪ್ರವಾಸ ಮಾಡಿ, ಮತದಾರರನ್ನು ಭೇಟಿಯಾಗಲಿದ್ದಾರೆ ಎಂದರು.ಜೆಡಿಯು ಪಕ್ಷದ ತುಮಕೂರು ನಗರ ಘಟಕದ ಅಧ್ಯಕ್ಷ ಪರಮೇಶಯ್ಯ ಮಾತನಾಡಿ, ಹಿರಿಯರ ಮಾರ್ಗದರ್ಶನದಂತೆ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಪ್ರಯತ್ನಿಸಲಾಗುತ್ತಿದೆ. ಮುಂಬರುವ ಪದವಿಧರರ ಕ್ಷೇತ್ರದ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷವನ್ನು ಮತ್ತಷ್ಟು ಜನರ ಬಳಿಗೆ ತೆಗೆದುಕೊಂಡು ಹೋಗಲು ಶ್ರಮಿಸಲಾಗುವುದು. ಇಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು, ನೀವು ಜೆಡಿಯು ಕುಟುಂಬದ ಭಾಗವಾಗಿ, ಪಕ್ಷವನ್ನು ಮುನ್ನೆಡೆಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಮುಖಂಡರಾದ ಕೋಮುಲ ವೀರಭದ್ರಯ್ಯ,ಶಂಕರ್,ರತ್ನಾಕರ, ಮಂಜುನಾಥ್, ನಾಯಕ್ ಹಾಗೂ ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್ ಉಪಸ್ಥಿತರಿದ್ದರು.