ಮಳವಳ್ಳಿ:
ಪಟ್ಟಣದ ಶಾಂತಿ ಕಾಲೇಜು ಮುಂಭಾಗದಲ್ಲಿ ನಿರ್ಮಿಸಲಾಗಿರುವ ಅನುಭವ ಮಂಟಪದಿಂದ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಸಾವಿರಾರು ಭಕ್ತರ ನಡುವೆ ಪಲ್ಲಕ್ಕಿ ಉತ್ಸವಕ್ಕೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಚಾಲನೆ ನೀಡಿದರು. ಮಂಗಳವಾದ್ಯ ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಪಲ್ಲಕ್ಕಿ ಉತ್ಸವಕ್ಕೆ ಭಕ್ತರು ಪೂಜೆ ಸಲ್ಲಿಸಿ ಧನ್ಯತೆ ಮರೆದರು.
ಮಳವಳ್ಳಿ ಮೈಸೂರು, ಕೊಳ್ಳೇಗಾಲ ಮದ್ದೂರು ಮುಖ್ಯ ರಸ್ತೆಗಳಲ್ಲಿ ಶ್ರೀಗಳ ಪಲ್ಲಕ್ಕಿ ಉತ್ಸವ ಬರುವ ಹಿನ್ನೆಲೆಯಲ್ಲಿ ರಸ್ತೆಗೆ ನೀರು ಹಾಕುವುದರ ಜೊತೆಗೆ ತಳಿರು ತೋರಣಗಳಿಂದ ಶೃಂಗರಿಸಿ ಭಕ್ತರು ಹೂಮಳೆ ಸುರಿಸಿ ಸ್ವಾಗತಿಸಿಕೊಂಡರು. ರಸ್ತೆ ಉದ್ದಕ್ಕೂ ಭಕ್ತರಿಗೆ ಮಠದ ವತಿಯಿಂದ ಪ್ರಸಾದವನ್ನು ವಿತರಿಸಲಾಯಿತು.ಅದ್ಧೂರಿಯಾಗಿ ನಡೆದ ಭಾವೈಕ್ಯತಾ ಯಾತ್ರೆ
ಪಟ್ಟಣದ ಪೇಟೆ ಗಂಗಾ ಮತಬೀದಿಯಲ್ಲಿ ಶಿವರಾತ್ರೀಶ್ವರ ಶಿವಯೋಗಿಯವರ ಜಯಂತ್ಯುತ್ಸವದ ಭಾವೈಕ್ಯತಾ ಯಾತ್ರೆಯು ಅದ್ಧೂರಿಯಾಗಿ ಸಾಗಿತು.
ಗಂಗಾಮತ ಬೀದಿಯ ಎಲ್ಲ ಬಡಾವಣೆಗಳಲ್ಲೂ ಯಾತ್ರೆ ಸಾಗಿ ಅಂತಿಮವಾಗಿ ಗಂಗಾಪರಮೇಶ್ವರಿ ಸಹಕಾರ ಸಂಘದ ಆವರಣದಲ್ಲಿ ಸಾತನೂರು ವಿರಕ್ತಮಠದ ನಿಜಗುಣ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ನಮ್ಮ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂಥ ಯಾತ್ರೆಗಳು ಯುವ ಜನರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಸಂದೇಶ ನೀಡಿದರು.
ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ವಿವಿಧ ಮಠಗಳ ಸ್ವಾಮೀಜಿಗಳು, ಮಾಜಿ ಶಾಸಕ ಕೆ.ಅನ್ನದಾನಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪುತ್ರ ಯುವರಾಜ್ ನರೇಂದ್ರಸ್ವಾಮಿ, ಸಮಿತಿಯ ಆರ್.ಎನ್.ವಿಶ್ವಾಸ್ ಪಾಲ್ಗೊಂಡಿದ್ದರು.