ಕನ್ನಡಪ್ರಭ ವಾರ್ತೆ ರಾಮನಗರಸಾಗುವಳಿ ಆಧಾರದ ಮೇಲೆ ಸರ್ಕಾರ ಕಾಲ ಕಾಲಕ್ಕೆ ಮಂಜೂರಾತಿ ಮಾಡಿದ್ದ ಜಮೀನಿಗೆ ಅಧಿಕೃತ ದಾಖಲೆಗಳಿಲ್ಲದೆ ಪರದಾಡುತ್ತಿದ್ದ ರೈತರಿಗೆ ದರಖಾಸ್ತು ಪೋಡಿ ದುರಸ್ತಿ ಸರಳೀರಣದಿಂದಾಗಿ ಪೋಡಿ ದುರಸ್ತಿ ಮಾಡಿಕೊಳ್ಳುವುದು ಇದೀಗ ಸರಳವಾಗಿದೆ.ರಾಜ್ಯ ಸರ್ಕಾರ ಬಡವರು, ಭೂರಹಿತರು ದುರ್ಬಲ ವರ್ಗದ ಕುಟುಂಬಗಳು ಆರ್ಥಿಕವಾಗಿ ಮೇಲೆತ್ತುವ ಉದ್ದೇಶದಿಂದ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಆಧಾರದ ಮೇಲೆ ಭೂಮಿ ಮಂಜೂರಾತಿ ಮಾಡಿ ಸಾಗುವಳಿ ಚೀಟಿಯನ್ನು ವಿತರಣೆ ಮಾಡಿತ್ತು. ಹತ್ತಾರು ವರ್ಷಗಳಿಂದ ಸರ್ಕಾರ ಮಂಜೂರು ಮಾಡಿದ್ದ ಭೂಮಿಯಲ್ಲೆ ಕೃಷಿ ಮಾಡಿಕೊಂಡು ಬಂದಿರುವ ಕುಟುಂಬಗಳಿಗೆ ಭೂ ಒಡೆತನದ ಅಧಿಕೃತ ದಾಖಲೆಗಳಿಲ್ಲದೆ ರೈತರು ಪರದಾಡುತ್ತಿದ್ದರು.ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಚೀಟಿ ನೀಡಿದ ಮೇಲೆ ನಮೂನೆ 1ರಿಂದ ನಮೂನೆ 5 ಆಗಬೇಕು. ಕೆಲವು ಸರ್ವೆ ನಂಬರ್‌ನಲ್ಲಿರುವ ಜಮೀನು ವಿಸ್ತೀರ್ಣಕ್ಕಿಂತ ಹೆಚ್ಚು ಭೂಮಿಯನ್ನು ಸಾಗುವಳಿ ನೀಡಿದ್ದರಿಂದ ಅದನ್ನು ಪರಿಷ್ಕರಣೆ ಮಾಡಲು ನಮೂನೆ 6 ರಿಂದ ನಮೂನೆ 10 ಮಾಡಬೇಕಿತ್ತು. ಈ ಪ್ರಕ್ರಿಯೇ ಕ್ಲಿಷ್ಟಕರವಾಗಿತ್ತು. ಜೊತೆಗೆ ಪೋಡಿ ದುರಸ್ತಿ ಮಾಡುವ ನಿಯಮಗಳು, ಷರತ್ತುಗಳಿಂದ ಪೋಡಿ ದುರಸ್ತಿಗೆ ತೊಡಕಾಗಿತ್ತು. ಈ ಕಾರಣದಿಂದಾಗಿ ಪೋಡಿ ದುರಸ್ತಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸಾಕಾಗಿದ್ದ ರೈತರಿಗೆ ಪೋಡಿ ದುರಸ್ತಿ ಸರಳೀಕರಣ ವರದಾನವಾದ್ದಂತಾಗಿದೆ. ಹಲವಾರು ವರ್ಷಗಳಿಂದ ಪೋಡಿ ದುರಸ್ತಿಗಾಗಿ ಅಲೆದಾಡುತ್ತಿರುವ ರೈತರಿಗೆ ಶಾಶ್ವತವಾದ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಸಾಗುವಳಿದಾರರಿಗೆ ಉಚಿತವಾಗಿ, ಸುಲಭವಾಗಿ ಸರ್ಕಾರದಿಂದಲೇ ಪೋಡಿ ದುರಸ್ತಿ ಮಾಡಿಕೊಡಲು, ದುರಸ್ತಿ ಕಾರ್ಯವನ್ನು ಸರಳಿಕರಿಸಿ, ರಾಜ್ಯಾದ್ಯಂತ ಪೋಡಿ ದುರಸ್ತಿ ಅಭಿಯಾನಕ್ಕೆ ರಾಮನಗರ ಜಿಲ್ಲೆಯ ಕನಕಪುರದಿಂದಲೇ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ಕೊಟ್ಟಿದ್ದಾರೆ.ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಸರ್ಕಾರವೂ 2024 - 25 ನೇ ಸಾಲಿನ ಘೋಷಣೆಯಂತೆ ನಮೂನೆ-1ರಿಂದ ನಮೂನೆ- 5 ಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಸರಳೀಕರಿಸಿದ್ದು ಇದಕ್ಕಾಗಿ ಹೊಸದಾಗಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ.ಸರ್ಕಾರದ ಹೊಸ ಆದೇಶದಂತೆ ರಾಮನಗರ ಜಿಲ್ಲೆಯಲ್ಲಿ ಒಟ್ಟು 1773 ಸರ್ಕಾರಿ ಸರ್ವೆ ನಂಬರ್‌ಗಳಲ್ಲಿ ನಮೂನೆ - 1 ರಿಂದ ನಮೂನೆ - 5 ಗಳನ್ನು ಗಣಕೀಕರಣಗೊಳಿಸಲಾಗಿದೆ. ಈ ಪೈಕಿ ಕನಕಪುರ ಮತ್ತು ಹಾರೋಹಳ್ಳಿ ತಾಲೂಕುಗಳಲ್ಲಿ ಒಟ್ಟು 36 ಮಂಜೂರಿದಾರರಿಗೆ ಪೋಡಿ ದುರಸ್ತಿ ಅಂತಿಮಗೊಳಿಸಿ ಪಹಣಿಗಳನ್ನು ಸೃಜನೆ ಮಾಡಲಾಗಿದ್ದು ವಿತರಣೆ ಮಾಡಲಾಗುತ್ತಿದೆ.ಸರಳೀಕರಣದಿಂದಾಗುವ ಅನುಕೂಲಗಳೇನು?;