ನ.೩೦ರಿಂದ ಡಿ.೨ರವರೆಗೆ ಸರಳೀಕೃತ ಕೃಷಿ ಮೇಳ: ಡಾ.ಕೆ.ಸಿ.ನಾರಾಯಣಸ್ವಾಮಿ

KannadaprabhaNewsNetwork |  
Published : Nov 12, 2026, 01:30 AM IST
11ಕೆಎಂಎನ್‌ಡಿ-6ಡಾ.ಕೆ.ಸಿ.ನಾರಾಯಣಸ್ವಾಮಿ | Kannada Prabha

ಸಾರಾಂಶ

ರಾಜ್ಯದಲ್ಲಿ ಎದುರಾಗಿರುವ ಬರಗಾಲದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಬರ ನಿರ್ವಹಣೆ, ನೈಸರ್ಗಿಕ ಕೃಷಿ, ಒಣಭೂಮಿ ಬೇಸಾಯ ಹಾಗೂ ಪರ್ಯಾಯ ಬೆಳೆ ಪದ್ಧತಿಗಳ ಕುರಿತು ಸಮಗ್ರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ಒದಗಿಸುವ ಉದ್ದೇಶದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನ.೩೦ರಿಂದ ಡಿಸೆಂಬರ್ ೨ರವರೆಗೆ ಮೂರು ದಿನಗಳ ಸರಳೀಕೃತ ಕೃಷಿಮೇಳ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಎದುರಾಗಿರುವ ಬರಗಾಲದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಬರ ನಿರ್ವಹಣೆ, ನೈಸರ್ಗಿಕ ಕೃಷಿ, ಒಣಭೂಮಿ ಬೇಸಾಯ ಹಾಗೂ ಪರ್ಯಾಯ ಬೆಳೆ ಪದ್ಧತಿಗಳ ಕುರಿತು ಸಮಗ್ರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ಒದಗಿಸುವ ಉದ್ದೇಶದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನ.೩೦ರಿಂದ ಡಿಸೆಂಬರ್ ೨ರವರೆಗೆ ಮೂರು ದಿನಗಳ ಸರಳೀಕೃತ ಕೃಷಿಮೇಳ ನಡೆಯಲಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಕೆ.ಸಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.

ತಾಲೂಕಿನ ವಿ.ಸಿ.ಫಾರಂ ಆವರಣದಲ್ಲಿ ನಡೆಯಲಿರುವ ಕೃಷಿ ಮೇಳದಲ್ಲಿ ಪ್ರಸ್ತುತ ಕೃಷಿ ಸನ್ನಿವೇಶಕ್ಕೆ ಅನುಗುಣವಾದ ಬರ ನಿರ್ವಹಣಾ ತಂತ್ರಜ್ಞಾನಗಳು, ನೈಸರ್ಗಿಕ ಕೃಷಿ ಪದ್ಧತಿಗಳು, ಒಣಭೂಮಿ ಬೇಸಾಯ, ಸೂಕ್ತ ಪರ್ಯಾಯ ಬೆಳೆಗಳು ಹಾಗೂ ನೂತನ ಬೆಳೆ ತಳಿಗಳ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೃಷಿ ಮೇಳದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿವಿಧ ಘಟಕಗಳು, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು, ಸರ್ಕಾರಿ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಹಾಗೂ ಸಹಕಾರ ಸಂಸ್ಥೆಗಳಿಂದ ತಂತ್ರಜ್ಞಾನ ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಒಟ್ಟು ೧೦೦ ಕೃಷಿ ವಸ್ತುಪ್ರದರ್ಶನ ಮಳಿಗೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಎಲ್‌ನಿನೋ ಪರಿಣಾಮ, ಬರ ನಿರ್ವಹಣೆ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದರು.

ಕೃಷಿ ಮೇಳದ ಅಂಗವಾಗಿ ನುರಿತ ತಜ್ಞರಿಂದ ರಾಜ್ಯದಲ್ಲಿ ಕಂಡುಬರುತ್ತಿರುವ ಎಲ್‌ನಿನೋ ಪರಿಣಾಮಗಳು, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕೃಷಿ ಸವಾಲುಗಳು, ಒಣಭೂಮಿ ಕೃಷಿ ತಂತ್ರಜ್ಞಾನಗಳು, ಪರ್ಯಾಯ ಬೆಳೆ ಯೋಜನೆ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸದ್ಬಳಕೆ ಹಾಗೂ ಹಿಂಗಾರು ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.

ರೈತರ ಕೃಷಿ ಸಂಬಂತ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಮತ್ತು ಮಾರ್ಗದರ್ಶನ ನೀಡಲು ನುರಿತ ಕೃಷಿ ವಿಜ್ಞಾನಿಗಳ ಸಲಹಾ ಕೇಂದ್ರವನ್ನೂ ತೆರೆಯಲಾಗುವುದು. ಅಲ್ಲದೆ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಗತಿಪರ ರೈತರು ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬೆಳೆ ತಳಿಗಳು, ತಂತ್ರಜ್ಞಾನಗಳ ಬಿಡುಗಡೆ:

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ವತಿಯಿಂದ ೨೦೨೫-೨೬ನೇ ಸಾಲಿನಲ್ಲಿ ಅಭಿವೃದ್ಧಿಪಡಿಸಲಾದ ಮೂರು ನೂತನ ಬೆಳೆ ತಳಿಗಳನ್ನು ಕೃಷಿಮೇಳದಲ್ಲಿ ಬಿಡುಗಡೆಗೊಳಿಸಲಾಗುವುದು. ಅವುಗಳೆಂದರೆ ಭತ್ತದ ಎಂ.ಎಸ್.ಎನ್.-೧೧೩, ಮುಸುಕಿನ ಜೋಳದ ಎಂ.ಎ.ಎಚ್.-೨೦-೪೫ ಹಾಗೂ ಮೇವಿನ ಅಲಸಂದೆಯ ಎಂ.ಎಫ್.ಸಿ.-೧೮-೧೦ ತಳಿಗಳು. ಇದರೊಂದಿಗೆ ರೈತರಿಗೆ ಉಪಯುಕ್ತವಾಗುವ ಒಂಬತ್ತು ನೂತನ ಕೃಷಿ ತಂತ್ರಜ್ಞಾನಗಳನ್ನೂ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೃಷಿ ಸಚಿವರಿಂದ ಉದ್ಘಾಟನೆ:

ನ.೩೦ರಂದು ನಡೆಯುವ ಕೃಷಿಮೇಳವನ್ನು ಕೃಷಿ ಸಚಿವರು, ಸಹ ಕುಲಾಪತಿಗಳು ಆದ ಪಿ.ಎಂ. ನರೇಂದ್ರಸ್ವಾಮಿ ಅವರು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.

ರೈತರು, ರೈತ ಮಹಿಳೆಯರು, ಕೃಷಿ ಆಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಮೇಳದಲ್ಲಿ ಭಾಗವಹಿಸಿ ನೂತನ ಕೃಷಿ ತಂತ್ರಜ್ಞಾನಗಳು, ಸುಧಾರಿತ ಬೆಳೆ ತಳಿಗಳು, ಬರ ನಿರ್ವಹಣಾ ಕ್ರಮಗಳು, ನೈಸರ್ಗಿಕ ಕೃಷಿ ಪದ್ಧತಿಗಳು ಹಾಗೂ ನೀರಿನ ಸಮರ್ಪಕ ಬಳಕೆಯ ಕುರಿತು ಮಾಹಿತಿ ಪಡೆದು ಕೃಷಿಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌