ಉದ್ಯಮ ಸ್ಥಾಪನೆ ಸರಳೀಕರಿಸಿ : ಉದ್ಯಮಿಗಳು

KannadaprabhaNewsNetwork |  
Published : Feb 17, 2026, 02:00 AM ISTUpdated : Feb 17, 2026, 12:28 PM IST
Siddaramaiah

ಸಾರಾಂಶ

ರಾಜ್ಯದಲ್ಲಿ ಉದ್ಯಮ ಸ್ಥಾಪನೆ ಪ್ರಕ್ರಿಯೆ, ತೆರಿಗೆ ಸಂಬಂಧಿತ ನಿಯಮ ಮತ್ತು ಕಾರ್ಯವಿಧಾನ ಸರಳೀಕರಿಸಬೇಕು. ಬೆಂಗಳೂರಿನ ಹೊರಗೂ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೈಗಾರಿಕಾ ವಲಯಕ್ಕೆ ಸಾಲದ ಹರಿವು ಹೆಚ್ಚಿಸಬೇಕು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ

  ಬೆಂಗಳೂರು :  ರಾಜ್ಯದಲ್ಲಿ ಉದ್ಯಮ ಸ್ಥಾಪನೆ ಪ್ರಕ್ರಿಯೆ, ತೆರಿಗೆ ಸಂಬಂಧಿತ ನಿಯಮ ಮತ್ತು ಕಾರ್ಯವಿಧಾನ ಸರಳೀಕರಿಸಬೇಕು. ಬೆಂಗಳೂರಿನ ಹೊರಗೂ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೈಗಾರಿಕಾ ವಲಯಕ್ಕೆ ಸಾಲದ ಹರಿವು ಹೆಚ್ಚಿಸಬೇಕು ಎಂದು ರಾಜ್ಯದ ಅನೇಕ ವಾಣಿಜ್ಯ ಉದ್ದಿಮೆದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

2026-27ನೇ ಸಾಲಿನ ಬಜೆಟ್‌ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಸೋಮವಾರ ವಿಧಾನಸೌಧದಲ್ಲಿ ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಲಹೆ ಪಡೆದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‌ಕೆಸಿಸಿಐ) ಅಧ್ಯಕ್ಷೆ ಉಮಾರೆಡ್ಡಿ ನೇತೃತ್ವದಲ್ಲಿ ಅನೇಕ ಉದ್ದಿಮೆದಾರರು ಸಭೆಯಲ್ಲಿ ಭಾಗವಹಿಸಿ ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ದಿಗೆ ಪೂರಕವಾದ ಬೇಡಿಕೆ ಸಲ್ಲಿಸಿದರು.

ಪ್ರಮುಖವಾಗಿ ಬೆಂಗಳೂರಿಗೆ ಕೇಂದ್ರೀಕೃತವಾಗಿರುವ ಕೈಗಾರಿಕೆಗಳನ್ನು ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಿಸಲು ಬಜೆಟ್‌ನಲ್ಲಿ ಉತ್ತೇಜಕ ಕಾರ್ಯಕ್ರಮಗಳನ್ನು ನೀಡಬೇಕು. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ಉದ್ಯಮ ಸ್ಥಾಪನೆ, ತೆರಿಗೆ ಸಂಬಂಧಿತ ನಿಯಮ ಹಾಗೂ ಕಾರ್ಯವಿಧಾನಗಳನ್ನು ಸರಳೀಕರಿಸಬೇಕು. ಈ ನಿಟ್ಟಿನಲ್ಲಿ ಎಫ್‌ಕೆಸಿಸಿಐ ನೀಡಿರುವ ಶಿಫಾರಸುಗಳ ಅನುಷ್ಠಾನ ಮಾಡುವುದಾಗಿ ಬಜೆಟ್‌ನಲ್ಲಿ ಭರವಸೆ ನೀಡಬೇಕೆಂದು ಕೋರಿದ್ದಾರೆ.

ಅಲ್ಲದೆ, ಕೈಗಾರಿಕಾ ಕ್ಷೇತ್ರಗಳ ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕಾ ಎಸ್ಟೇಟ್‌ಗಳನ್ನು ಮೇಲ್ದರ್ಜೆಗೆ ಏರಿಸುವುದು, ಕೈಗಾರಿಕಾ ಟೌನ್‌ಶಿಪ್‌ಗಳ ಸ್ಥಾಪನೆ, ರಾಜ್ಯಕ್ಕೆ ಪ್ರತ್ಯೇಕ ಎಂಎಸ್‌ಎಂಇ ನೀತಿ ಮತ್ತು ವಿಶೇಷ ಉತ್ತೇಜಕ ಕ್ರಮಗಳ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಕೌಶಲ್ಯಾಭಿವೃದ್ಧಿ ಚಟುವಟಿಕೆ, ಪ್ರವಾಸೋದ್ಯಮ ವಲಯದ ಬೆಳವಣಿಗೆಗೆ ಉತ್ತೇಜನ ನೀಡಬೇಕು. ಇಂಧನ ವಲಯ ಮತ್ತು ಹಸಿರು ಇಂಧನಕ್ಕೆ ನೆರವು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವೇಗ ನೀಡುವುದು, ಉತ್ಪಾದನಾ ವಲಯ ಬೆಳವಣಿಗೆಗೆ ಪ್ರೋತ್ಸಾಹ, ಕೈಗಾರಿಕಾ ವಲಯಕ್ಕೆ ಸಾಲದ ಹರಿವನ್ನು ಹೆಚ್ಚಿಸಬೇಕೆಂದು ಕೋರಲಾಗಿದೆ.

ವಾಣಿಜ್ಯ ಬಳಕೆ ಚಾಲಕರಿಗೆ ತಂಗುದಾಣ ಸ್ಥಾಪನೆ ಬೇಡಿಕೆ

ವಾಣಿಜ್ಯ ಬಳಕೆ ಚಾಲಕರಿಗೆ ಪ್ರತಿ 100 ಕಿ.ಮೀ.ಗೆ ಚಾಲಕರ ತಂಗುದಾಣ ಸ್ಥಾಪಿಸಿ ಅಲ್ಲಿ ಶೌಚಾಲಯ, ವಿಶ್ರಾಂತಿ ಕೊಠಡಿ ಸೇರಿ ಅಗತ್ಯ ಸೌಲಭ್ಯ ಒದಗಿಸಬೇಕು ಎಂಬುದು ಸೇರಿ ಮುಂದಿನ ಬಜೆಟ್‌ನಲ್ಲಿ ತಮ್ಮ ಹಲವು ಬೇಡಿಕೆಗಳಿಗೆ ಅನುದಾನ ಒದಗಿಸುವಂತೆ ಇಂಡಿಯನ್‌ ವೆಹಿಕಲ್ಸ್‌ ಡ್ರೈವರ್ಸ್‌ ಟ್ರೇಡ್‌ ಯೂನಿಯನ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.

ಯೂನಿಯನ್‌ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಸ್ನೇಹಜೀವಿ ಚಾಲಕರ ಟ್ರೇಡ್‌ ಯೂನಿಯನ್‌ ಅಧ್ಯಕ್ಷ ಸ್ನೇಹಜೀವಿ ಸಂತೋಷ್ ಕುಮಾರ್ ಹಾಗೂ ವಿವಿಧ ಚಾಲಕ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಅವರು ಆಹ್ವಾನಿಸಿದ್ದ ಬಜೆಟ್‌ ಪೂವಭಾವಿ ಚರ್ಚಾ ಸಭೆಯಲ್ಲಿ ಅಹವಾಲು ಸಲ್ಲಿಸಿದರು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಅವರು ವಿವಿಧ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಶೌಚಾಲಯ, ಕುಡಿಯುವ ನೀರು, ಪಾರ್ಕಿಂಗ್, ವಿಶ್ರಾಂತಿ ಕೊಠಡಿಯುಳ್ಳ ಸೌಲಭ್ಯಗಳ ಕೊರತೆಯಿಂದ ಚಾಲಕರು ರಸ್ತೆ ಬದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಹಾಗಾಗಿ ಹೆದ್ದಾರಿಗಳಲ್ಲಿ ಪ್ರತಿ 100 ಕಿ.ಮೀ.ಗೆ ಕನಿಷ್ಠ ಒಂದು ಚಾಲಕರ ತಂಗುದಾಣ ನಿರ್ಮಿಸಬೇಕು. ಅದೇ ರೀತಿ ಚಾಲಕರ ಸುರಕ್ಷತೆಗಾಗಿ ಹೆದ್ದಾರಿಗಳಲ್ಲಿ ಪೊಲೀಸ್ ಪೆಟ್ರೋಲಿಂಗ್ ಹೆಚ್ಚಿಸಬೇಕು. ಸಿಸಿಟಿವಿ ಮತ್ತು ತುರ್ತು ಸಹಾಯವಾಣಿ ವ್ಯವಸ್ಥೆ ಬಲಪಡಿಸಲು ಬಜೆಟ್‌ನಲ್ಲಿ ಅನುದಾನ ನೀಡಬೇಕೆಂದು ಮನವಿ ಮಾಡಿದ್ದಾರೆ.

ಅಸಂಘಟಿತ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂಗೆ ಮನವಿ

ಇನ್ನು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘವು ಆಟೋ, ಟ್ಯಾಕ್ಸಿ ಖಾಸಗಿ ಬಸ್ ಲಾರಿ, ಮ್ಯಾಕ್ಸಿ ಕ್ಯಾಬ್, ಗೂಡ್ಸ್ ಚಾಲಕರ ವರ್ಗಕ್ಕೆ ಅಸಂಘಟಿತ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸಿ ಬಜೆಟ್‌ನಲ್ಲಿ ಸೂಕ್ತ ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದೆ.

ಜೊತೆಗೆ ಅಕ್ರಮ ಬೈಕ್ ಟ್ಯಾಕ್ಸಿ ನಿಷೇಧಿಸಿ, ಸರ್ಕಾರ ಸುಗ್ರೀವಾಜ್ಞೆ ತರಬೇಕು. ನಿರುದ್ಯೋಗಿ ಬಾಡಿಗೆ ಆಟೋರಿಕ್ಷಾ ಚಾಲನೆ ಮಾಡುವ ಚಾಲಕರು ಸಾಲ ಯೋಜನೆ ನೀಡಬೇಕು. ಜಾತಿವಾರು ನಿಗಮಗಳಿಂದ ನೇರ ಸಾಲ ಯೋಜನೆಯಲ್ಲಿ ಹೊಸ ಆಟೋರಿಕ್ಷಾ ಕೊಳ್ಳಲು ಶೇ.95 ಸಾಲವನ್ನು ಹೈಪೋಥಿಕೇಷನ್ ಆಧಾರದ ಮೇಲೆ ನೀಡಬೇಕು. ಹೊಸ ಎಲೆಕ್ಟಿಕ್ ಆಟೋರಿಕ್ಷಾ ಬೆಲೆ ₹3,85,000 ಇದ್ದು ಹೊಸ ಎಲೆಕ್ಟಿಕ್ ಆಟೋರಿಕ್ಷಾ ಕೊಳ್ಳುವ ಚಾಲಕರಿಗೆ ಶೇಕಡ 50% ಸಹಾಯಧನ ಘೋಷಣೆ ಮಾಡಬೇಕು ಎಂಬುದು ಸೇರಿ ಹಲವು ಬೇಡಿಕೆ ಇಟ್ಟಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ