ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

KannadaprabhaNewsNetwork | Published : Mar 24, 2025 12:32 AM

ಸಾರಾಂಶ

ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ ಮನೆಗೂ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಾವಿರಾರು ಕೋಟಿ ರು.ಗಳನ್ನು ಮಂಜೂರು ಮಾಡಿಸಿಕೊಂಡು ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ತಾಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿ 1.52 ಕೋಟಿ ರು. ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ ಮನೆಗೂ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿಗೆ ಭಾನುವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. ನಾನು ಆಡಳಿತ ಪಕ್ಷದ ಶಾಸಕನಲ್ಲ. ವಿರೋಧ ಪಕ್ಷದಲ್ಲಿದ್ದರು ಹಣ ತಂದು ಕೆಲಸ ಮಾಡುವ ಯೋಗ್ಯತೆಯಿಟ್ಟುಕೊಂಡಿದ್ದೇನೆ ಎನ್ನುವುದನ್ನು ನೀವುಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ರೈತರ ತೋಟಗಳು ಒಣಗಬಾರದೆಂದು ತಾಲೂಕಿನಾದ್ಯಂತ 15 ಕಡೆ ಪವರ್ ಸ್ಟೇಷನ್‍ಗಳನ್ನು ಕಟ್ಟಿಸುತ್ತಿದ್ದೇನೆ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯುವುದಕ್ಕಾಗಿ ಚೆಕ್‍ಡ್ಯಾಂ ಗಳನ್ನು ಕಟ್ಟಿಸಿರುವುದರಿಂದ ಬೋರ್‌ವೆಲ್‍ಗಳಲ್ಲಿ ನೀರಿನ ಮಟ್ಟ ಜಾಸ್ತಿಯಾಗಿದೆ. ಇನ್ನು ಏಳೆಂಟು ತಿಂಗಳಲ್ಲಿ ಅಪ್ಪರ್‌ ಭದ್ರಾ ಯೋಜನೆಯಿಂದ ಎಲ್ಲಾ ಕೆರೆಗಳಿಗೂ ನೀರು ತುಂಬಿಸುತ್ತೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.

ತಾಳಿಕಟ್ಟೆಯಲ್ಲಿ 2 ಸಾವಿರ ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ. ಚುನಾವಣೆಯಲ್ಲಿ ನನಗೆ ಮತ ಹಾಕಿಲ್ಲವೆಂದು ನಿರ್ಲಕ್ಷಿಸುವುದಿಲ್ಲ. ಆಸ್ಪತ್ರೆ, ಸಮುದಾಯ ಭವನ ಕಟ್ಟಿಸಿದ್ದೇನೆ. ಹೆಣ್ಣು ಮಕ್ಕಳು ಶೌಚಕ್ಕೆ ಹೊರಗಡೆ ಹೋಗಬಾರದೆಂದು ಪೂನಾದಿಂದ ಮೊಬೈಲ್ ಟಾಯ್ಲೆಟ್‍ಗಳನ್ನು ತರಿಸಿದ್ದೇನೆ. ಆಕಸ್ಮಿಕವಾಗಿ ಬೆಂಕಿ ಬಿದ್ದರೆ ಗುಡಿಸಲು ಸುಟ್ಟು ಹೋಗುತ್ತದೆಂದು ಫೈರ್ ಎಂಜಿನ್‍ಗಳನ್ನು ಇರಿಸಿದ್ದೇನೆ. ಅಂಬ್ಯುಲೆನ್ಸ್ ವ್ಯವಸ್ಥೆಯಿದೆ. ತಾಲೂಕಿನಾದ್ಯಂತ ಉತ್ತಮ ಗುಣಮಟ್ಟದ ಸಿಸಿ ರಸ್ತೆ, ಶಾಲಾ-ಕಾಲೇಜು ಹೈಟೆಕ್ ಆಸ್ಪತ್ರೆ, ಕೆರೆ ಕಟ್ಟೆ, ಚೆಕ್‍ ಡ್ಯಾಂಗಳನ್ನು ಕಟ್ಟಿಸಿದ್ದೇನೆ.

ಬಯಲು ಸೀಮೆ ವರ್ಷಕ್ಕೊಂದು ಮಳೆ ಬರುವುದರಿಂದ ಬ್ರಿಡ್ಜ್‌ ಕಂ ಬ್ಯಾರೇಜ್, ಚೆಕ್‍ ಡ್ಯಾಂಗಳನ್ನು ಕಟ್ಟಿಸಿರುವುದರಿಂದ ರೈತರು ಸಂತೋಷವಾಗಿದ್ದಾರೆ. ರಂಗಾಪುರದ ಬಳಿ ಹರಿದು ಹೋಗುವ ನೀರಿಗೆ ಚೆಕ್‍ಡ್ಯಾಂ ಕಟ್ಟಿಸಿದ್ದೇನೆ. ಒಟ್ಟಾರೆ ತಾಲೂಕಿನಾದ್ಯಂತ ಎಲ್ಲೆಲ್ಲಿ ಏನೇನು ಕೆಲಸ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆನ್ನುವುದನ್ನು ಮನದಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುವ ರಾಜಕಾರಣಿ ನಾನು ಎಂದು ಡಾ.ಎಂ.ಚಂದ್ರಪ್ಪ ಹೇಳಿದರು.

ಜಿಪಂ ಮಾಜಿ ಸದಸ್ಯ ಮಹೇಶಣ್ಣ, ಗ್ರಾಪಂ ಸದಸ್ಯರಾದ ಧನಂಜಯ್, ಲೋಕೇಶ್, ಉಮಾಪತಿ, ಮಲ್ಲಿಕಾರ್ಜುನ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

Share this article