ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ: ಎ.ಎಸ್.ಪೊನ್ನಣ್ಣ

KannadaprabhaNewsNetwork | Published : Jun 2, 2024 1:46 AM

ಸಾರಾಂಶ

ಕೊಡಗು ಜಿಲ್ಲೆಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಪದಾಧಿಕಾರಿಗಳು ಶಾಸಕ ಎ.ಎಸ್‌. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು. ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಎ.ಎಸ್‌. ಪೊನ್ನಣ್ಣ ಈ ಸಂದರ್ಭ ಹೇಳಿದರು.

ಕನ್ನಡಪ್ರಭವಾರ್ತೆ ವಿರಾಜಪೇಟೆ

ಪಟ್ಟಣದ ಸಂತ ಅನ್ನಮ್ಮ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಪದಾಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು, ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಹಿಂದೆ ನೀಡಿದ ಭರವಸೆಯಂತೆ ಹೊಸ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ಸರ್ಕಾರ ಖಂಡಿತವಾಗಿ ಕ್ರಮ ವಹಿಸಲಿದೆ. ಸಂಘದ ಕೆಲವು ಬೇಡಿಕೆಗಳನ್ನು ಶಿಕ್ಷಣ ಸಚಿವರ ಹಂತದಲ್ಲೆ ಬಗೆಹರಿಸಬಹುದಾಗಿದ್ದು, ಈ ಬಗ್ಗೆ ಶೀಘ್ರದಲ್ಲೆ ಶಿಕ್ಷಣ ಸಚಿವರ ಭೇಟಿಗೆ ದಿನ ನಿಗದಿಪಡಿಸಲಾಗುವುದು. ಕೆಲವು ಬೇಡಿಕೆಗಳನ್ನು ಸರ್ಕಾರದ ಹಂತದಲ್ಲಿ ಕ್ರಮಕೈಗೊಳ್ಳಬೇಕಿರುವುದರಿಂದ ಈ ಬಗೆಯೂ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಮದೆನಾಡಿದ ಮಲೈ ಮಹಾದೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅವರು ಮಾತನಾಡಿ, ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಹಾಗೂ ಜನಸಂಖ್ಯೆಯೂ ಕಡಿಮೆಯಿರುವುದರಿಂದ ಅನುದಾನಿತ ವಿದ್ಯಾಸಂಸ್ಥೆಗಳಿಗೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಥಿಗಳ ಸಂಖ್ಯಾಬಲವನ್ನು 20 ಕ್ಕೆ ನಿಗದಿಗೊಳಿಸಬೇಕು. 2006 ನಂತರ ನೇಮಕಾತಿ ವೇತನಾನುದಾನಕ್ಕೆ ಒಳಪಟ್ಟ ಎಲ್ಲ ಅನುದಾನಿತ ವಿದ್ಯಾಸಂಸ್ಥೆಗಳ ಸಿಬ್ಬಂದಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಕಾರ‍್ಯಭಾರ ಕೊರತೆಯಿರುವ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಕಾರ‍್ಯಭಾರವನ್ನು ಸರಿದೂಗಿಸಲು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜಿಸಬೇಕು. ವೇತನಾನುದಾನಕ್ಕೆ ಒಳಪಟ್ಟ ವಿದ್ಯಾಸಂಸ್ಥೆಗಳಲ್ಲಿ 2015 ಹಾಗೂ ಅದಕ್ಕೂ ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿಯಾದ ಹುದ್ದೆಗಳನ್ನು ಮಾತ್ರ ತುಂಬಿಕೊಳ್ಳಲು ಅನುಮತಿಯಿದ್ದು, ಇದನ್ನು ಕನಿಷ್ಠ 2020 ರವರೆಗೆ ವಿಸ್ತರಿಸಬೇಕು ಎಂದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈ ಮುತ್ತು ಮಾತನಾಡಿದರು. ಕಾರ‍್ಯಕ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕೊಡಗು ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಹಾಗೂ ಮರ‍್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ, ಭಾಗಮಂಡಲದ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿವಾಕರ್ ಉಪಸ್ಥಿತರಿದ್ದರು.

ಕಾರ‍್ಯಕ್ರಮದಲ್ಲಿ ಮಾದಪುರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂದಪ್ಪ, ಚೇರಂಬಾಣೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ, ಉಪಸ್ಥಿತರಿದ್ದರು.

Share this article