ನಷ್ಟದಲ್ಲಿರುವ ಸಂಸ್ಥೆ ಮೇಲೆತ್ತಲು ಪ್ರಾಮಾಣಿಕ ಪ್ರಯತ್ನ: ಕಾಗೆ

KannadaprabhaNewsNetwork | Published : Feb 3, 2024 1:47 AM

ಸಾರಾಂಶ

ಸಂಸ್ಥೆಯಲ್ಲಿನ ನ್ಯೂನ್ಯತೆ ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ, ಶಾಸಕ ಭರಮಗೌಡ ಕಾಗೆ ಹೇಳಿದರು.

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕಾಗವಾಡ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಭರಮಗೌಡ ಕಾಗೆ ಶುಕ್ರವಾರ ಅಧಿಕಾರ ವಹಿಸಿಕೊಂಡರು.

ಸಂಸ್ಥೆಯನ್ನು ಲಾಭದ ಹಾದಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಂಸ್ಥೆಯಲ್ಲಿನ ನ್ಯೂನ್ಯತೆ ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.

ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಕಾಗದ ಪತ್ರಗಳಿಗೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕಾರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆ ನಷ್ಟದಲ್ಲಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಲಾಭದ ಹಾದಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಂಸ್ಥೆಯಲ್ಲಿನ ನೂನ್ಯತೆ ಹಾಗೂ ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೊಸ ಬಸ್ ಖರೀದಿ, ಸಿಬ್ಬಂದಿ ವೇತನ ಪರಿಷ್ಕರಣೆ, ಭ್ರಷ್ಟಾಚಾರ ತಡೆ ಸೇರಿದಂತೆ ಸಂಸ್ಥೆಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಲೋಪದೋಷ ಸರಿಪಡಿಸುವುದರ ಜೊತೆಗೆ ಎಲ್ಲರನ್ನು ಗಣನೆಗೆ ತೆಗೆದುಕೊಂಡು ಹೋಗುತ್ತೇನೆ ಎಂದರು.

ಶಕ್ತಿ ಯೋಜನೆಗೆ ₹740 ಕೋಟಿಗೂ ಅಧಿಕ ಖರ್ಚಾಗಿದೆ. ಪೈಕಿ ₹490 ಕೋಟಿ ಬಿಡುಗಡೆಯಾಗಿದ್ದು, ಬಾಕಿ ಇರುವ ₹250 ಕೋಟಿಗೂ ಅಧಿಕ ಹಣವನ್ನು ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಲಾಗುವುದು. ಡೀಸೆಲ್‌, ವೇತನ ಹಾಗೂ ನಿರ್ವಹಣೆಗೆ ದಿನಂಪ್ರತಿ ₹8 ಕೋಟಿ ಖರ್ಚಾಗುತ್ತಿದೆ. ಆದರೆ, ನಿತ್ಯ ₹7 ಕೋಟಿ ಆದಾಯ ಬರುತ್ತಿದೆ. ಹೀಗಾಗಿ ಸಂಸ್ಥೆ ದಿನಕ್ಕೆ ₹ 1 ಕೋಟಿ ನಷ್ಟ ಅನುಭವಿಸುತ್ತಿದೆ ಎಂದರು.

ಈ ವೇಳೆ ಶಾಸಕ ಎನ್‌.ಎಚ್‌.ಕೋನರಡ್ಡಿ ಸನ್ಮಾನ ಮಾಡಿ ಅಭಿನಂದಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ್‌ ಸೇರಿದಂತೆ ಅಧಿಕಾರಿ ವರ್ಗ ಉಪಸ್ಥಿತರಿದ್ದರು.

ಹೆಚ್ಚಿನ ಬಸ್ ಖರೀದಿ ಪ್ರಕ್ರಿಯೆ: ಭರತ್

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್‌. ಭರತ್‌ ಮಾತನಾಡಿ, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಸಾವಿರ ಟ್ರಿಪ್ ಹೆಚ್ಚಳವಾಗಿರುತ್ತವೆ. ಸಂಸ್ಥೆಯಲ್ಲಿ 4855 ಬಸ್‌ ಇವೆ. ಇನ್ನೂ 1000 ಬಸ್‌ಗಳ ಅಗತ್ಯವಿದೆ. ಸೆಪ್ಟೆಂಬರ್ ತಿಂಗಳಲ್ಲಿ 50 ಬಸ್‌ಗಳು ಗ್ರಾಮಾಂತರ ವಿಭಾಗಕ್ಕೆ ನೀಡಲಾಗಿದೆ. 20 ಹೊಸ ಪಲ್ಲಕ್ಕಿ ಬಸ್‌ಗಳಲ್ಲಿ 10 ಬಸ್‌ಗಳು ಬಂದಿವೆ. ಉಳಿದ 10 ಬಸ್‌ ಮುಂದಿನ ದಿನಗಳಲ್ಲಿ ಸಂಸ್ಥೆಗೆ ಸೇರ್ಪಡೆಯಾಗಲಿವೆ. 325 ಹೊಸ ಬಸ್‌ ಖರೀದಿಗೆ ಕಾರ್ಯಾದೇಶವಾಗಿದೆ. ಅವು ಏಪ್ರಿಲ್‌ ಅಂತ್ಯಕ್ಕೆ ಬರಬಹುದು. ಇನ್ನು 250 ಬಸ್‌ ಖರೀದಿಗೆ ಟೆಂಡರ್‌ ಕರೆಯಲಾಗಿದೆ. 100 ನಗರ ಸಾರಿಗೆ ಬಸ್‌ ಖರೀದಿಗೂ ಟೆಂಡರ್‌ ಕರೆಯಲಾಗಿದೆ. ಎಲೆಕ್ಟ್ರಿಕ್ ಬಸ್‌ ಬರಲಿವೆ. ಹುಬ್ಬಳ್ಳಿ -ಧಾರವಾಡ ಮತ್ತು ಬೆಳಗಾವಿಯಲ್ಲಿ ಓಡಲಿವೆ. 15 ವರ್ಷಕ್ಕೂ ಹೆಚ್ಚಿನ ಹಳೆಯ ಬಸ್‌ಗಳನ್ನು ಗುಜರಿಗೆ ಹಾಕಲಾಗುತ್ತದೆ. ಅಂಥ 30 ಬಸ್‌ಗಳನ್ನು ಮಾರ್ಚ್‌ನಲ್ಲಿ ಗುಜರಿಗೆ ಹಾಕಲಾಗುವುದು. 2025ರ ಮಾರ್ಚ್‌ ಅಂತ್ಯದವರೆಗೆ 365 ಬಸ್‌ಗಳು ಗುಜರಿಗೆ ಹೋಗಲಿವೆ. ಯಾವ ಬಸ್‌ಗಳನ್ನು 15 ವರ್ಷದ ಮೇಲ್ಪಟ್ಟು ಬಳಸುತ್ತಿಲ್ಲ ಎಂದು ತಿಳಿಸಿದರು.

Share this article