ಶಿವಾನಂದ ಗೊಂಬಿ
ಇದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಮರ್ಯಾದೆಗೇಡು ಹತ್ಯೆಗೀಡಾದ ಯುವತಿ ಮಾನ್ಯಾ ಪಾಟೀಲ್ (19) ಮನದಲ್ಲಿದ್ದ ಆಸೆ. ಅದಕ್ಕಾಗಿಯೇ ಮದುವೆಯಾಗಿ ಏಳೆಂಟು ತಿಂಗಳಾದರೂ ಊರಿನತ್ತ ಹೆಜ್ಜೆ ಇಡದ ಪತಿಯನ್ನು ಒತ್ತಾಯಿಸಿ ಊರಿಗೆ ಕರೆದುಕೊಂಡು ಬಂದಿದ್ದಳಂತೆ. ಆದರೆ ಸೀಮಂತ ಮಾಡಿಸಿಕೊಂಡು ತವರುಮನೆ ಉಡುಗೊರೆ ಉಡಿತುಂಬಿಕೊಳ್ಳುವ ಆಸೆ ಹೊತ್ತಿದ್ದ ಮಗಳನ್ನೇ ಹೆತ್ತ ತಂದೆಯೇ ದಾರುಣವಾಗಿ ಕೊಚ್ಚಿ ಕೊಲೆಗೈದು ಮಸಣಕ್ಕೆ ಕಳುಹಿಸಿದ್ದಾನೆ.
ಇನಾಂವೀರಾಪುರ ಹುಬ್ಬಳ್ಳಿಯಿಂದ 15 ಕಿಲೋ ಮೀಟರ್ ದೂರವಿರುವ ಪುಟ್ಟ ಗ್ರಾಮ. ಇಲ್ಲಿ ಬರೀ 90- 100 ಮನೆಗಳಿವೆ. ಅಬ್ಬಬ್ಬಾ ಎಂದರೆ 500ರ ಆಸುಪಾಸಿನಲ್ಲೇ ಇಲ್ಲಿನ ಜನಸಂಖ್ಯೆ. ಆದರೆ ಜಾತಿ- ಜಾತಿ ನಡುವೆ ಅಷ್ಟೇ ದೊಡ್ಡ ಕಂದಕ ಇಲ್ಲಿರುವುದು ಮರ್ಯಾದೆಗೇಡು ಹತ್ಯೆಯಿಂದ ಬೆಳಕಿಗೆ ಬಂದಿದೆ.ಮಾನ್ಯಾ ಹಾಗೂ ವಿವೇಕಾನಂದ ಇಬ್ಬರು ಇದೇ ಊರಿನವರು. ಕೂಗಳತೆಯಲ್ಲೇ ಇಬ್ಬರದು ಮನೆ. ಚಿಕ್ಕವಯಸ್ಸಿನಿಂದಲೇ ಒಬ್ಬರಿಗೊಬ್ಬರು ನೋಡಿಕೊಂಡು, ಒಟ್ಟಿಗೆ ಆಡಿಕೊಂಡೇ ಬೆಳೆದವರು. ದೊಡ್ಡವರಲ್ಲಿ ಇದ್ದ ಜಾತಿ ಭಾವನೆ ಈ ಮಕ್ಕಳಲ್ಲಿ ಕಂಡಿರಲಿಲ್ಲ. ಹೀಗಾಗಿ ಬೆಳೆದು ದೊಡ್ಡವರಾದ ಬಳಿಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.
ಇವರ ಪ್ರೀತಿಗೆ ಜಾತಿ ಅಡ್ಡ ಬಂದಿದೆ. ಯುವಕನ ಕುಟುಂಬಸ್ಥರು ಒಂದು ಹಂತಕ್ಕೆ ಒಪ್ಪಿದರೂ ಯುವತಿಯ ಕಡೆಯವರು ಮಾತ್ರ ಸುತಾರಾಂ ಒಪ್ಪಿರಲೇ ಇಲ್ಲ.ಯುವತಿಯ ಪಾಲಕರ ವಿರೋಧದಿಂದಾಗಿ ಯುವಪ್ರೇಮಿಗಳಿಬ್ಬರೂ ಓಡಿ ಹೋಗಿ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ಕೆಲ ದಿನ ಹಾವೇರಿಯಲ್ಲಿ ಉಳಿದಿದ್ದರು. ಕಳೆದ ಏಳೆಂಟು ತಿಂಗಳ ಹಿಂದೆಯೇ ಮದುವೆಯಾಗಿದ್ದರಿಂದ ಮಾನ್ಯ ಇದೀಗ ಆರೇಳು ತಿಂಗಳ ಗರ್ಭಿಣಿ. ತಾನು ಗರ್ಭಿಣಿ ಎಂಬ ವಿಷಯ ತಿಳಿದರೆ ನನ್ನ ಮೇಲಿರುವ ದ್ವೇಷವನ್ನು ತವರು ಮನೆಯವರು ಮರೆಯುತ್ತಾರೆ. ಮತ್ತೆ ನನ್ನನ್ನು ಮಗಳೆಂದು ಸ್ವೀಕರಿಸುತ್ತಾರೆ. ಅತ್ತ ಗಂಡನ ಮನೆ, ಇತ್ತ ತವರು ಮನೆ ಎರಡೂ ಕುಟುಂಬಗಳು ಒಂದಾಗಿ ನನ್ನ ಸೀಮಂತ ಮಾಡುತ್ತಾರೆ ಎಂಬ ಭಾವನೆ ಯುವತಿಯಲ್ಲಿತ್ತು. ಅದಕ್ಕಾಗಿ ಗಂಡನಿಗೆ ಕಾಡಿಬೇಡಿದ್ದಳಂತೆ. ಪತ್ನಿಯ ಆಸೆ ಎಂದುಕೊಂಡು ಪತಿ ವಿವೇಕಾನಂದ ಕೂಡ ಹಾವೇರಿಯಿಂದ ಮರಳಿ ಊರಿಗೆ ಡಿಸೆಂಬರ್ 8ಕ್ಕೆ ಕರೆದುಕೊಂಡು ಬಂದಿದ್ದನಂತೆ. ಬಂದು ಹತ್ತು ದಿನಗಳಿಗೂ ಅಧಿಕ ಕಾಲ ಗತಿಸಿತ್ತು. ಅದರೆ ತವರು ಮನೆಯವರೇನೂ ಮಗಳು ಬಂದಿದ್ದಾಳೆ, ಗರ್ಭೀಣಿ ಆಗಿದ್ದಾಳೆ, ಏನೋ ತಿಳಿಯದೇ ತಪ್ಪು ಮಾಡಿದ್ದಾಳೆ ಎಂದು ಭಾವಿಸಿ ಕರೆದುಕೊಳ್ಳುವ ಯೋಚನೆಗೂ ಹೋಗದೇ ಗುಂಪು ಕಟ್ಟಿಕೊಂಡು ಬಂದು ಇಬ್ಬರ ಮೇಲೆ ದಾಳಿ ಮಾಡಿದ್ದಾರೆ. ಜನ್ಮದಾತನೇ ಕೊಲೆಗೆ ಕಾರಣನಾಗಿದ್ದಾನೆ. ಈ ಮೂಲಕ ತವರುಮನೆಯಿಂದ ಸೀಮಂತ ಕಾರ್ಯ ಮಾಡಿಸಿಕೊಳ್ಳಬೇಕೆಂಬ ಆಸೆಯಿಂದ ಬಂದಿದ್ದ ಮಗಳ ಕನಸು ನುಚ್ಚು ನೂರು ಮಾಡಿದ್ದಾನೆ.
ಈ ವಿಷಯವನ್ನೆಲ್ಲ ಅಂತ್ಯಸಂಸ್ಕಾರದ ವೇಳೆ ಪತಿಯ ಕಡೆಯವರೆಲ್ಲ ಹೇಳಿ ರೋದಿಸುತ್ತಿದ್ದರೆ, ಪತಿ ವಿವೇಕಾನಂದ, ಊರಿಗೆ ಕರ್ಕೊಂಡು ಹೋಗು ಎಂದೆ. ನಿನ್ನನ್ನು ನಾನೇ ದೇವರ ಬಳಿ ಕಳುಹಿಸಿದಂತಾತು. ಹೀಂಗ ಆಗುತ್ತೆ ಅಂತ ಗೊತ್ತಿದ್ದರೆ ನಾ ಊರಿಗೆ ಕರಕೊಂಡು ಬರುತ್ತಲೇ ಇರಲಿಲ್ಲ... ಎಂದು ಕಣ್ಣೀರಾದ.ಬಿಇ ಓದ್ತಾ ಇದ್ದಳು..!ತಂದೆಯ ಮುದ್ದಿನ ಮಗಳು. ಯುವತಿ ಓದಿನಲ್ಲಿ ಅಷ್ಟೇ ಜಾಣೆ. ಪಿಯುಸಿಯಲ್ಲಿ ಉತ್ತಮ ಅಂಕ ಪಡೆದಿದ್ದ ಈಕೆ, ಹುಬ್ಬಳ್ಲಿಯ ವರೂರ ಎಜಿಎಂ ಕಾಲೇಜ್‌ನಲ್ಲಿ ಬಿಇ ವ್ಯಾಸಾಂಗ ಮಾಡುತ್ತಿದ್ದಳು. ಬಿಇ ಓದಿಸಿ ಸಾಫ್ಟ್‌ವೇರ್ ಎಂಜಿನಿಯರ್ ಮಾಡಿಸಿ ವಿದೇಶಕ್ಕೆ ಕಳುಹಿಸಬೇಕೆಂಬ ಹಂಬಲ ತವರು ಮನೆಯವರದಾಗಿತ್ತಂತೆ. ವಿವೇಕಾನಂದ ಬಿಎ ಓದುತ್ತಿದ್ದ. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ಬಳಿಕ ಹಾವೇರಿಗೆ ಹೋಗಿದ್ದಾರೆ. ಹೀಗಾಗಿ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದರು.ಸೈರಾಟ್ ಸಿನೇಮಾ ನೆನಪಿಸಿತು...!ಮರಾಠಿ ಚಲನಚಿತ್ರ ಸೈರಾಟ್ ಮೂವಿಯನ್ನು ನೆನಪಿಸುವಂತಿದೆ ಈ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ..!ಇದನ್ನು ಅಂತ್ಯಸಂಸ್ಕಾರದ ವೇಳೆ ದಲಿತ ಮುಖಂಡರೊಬ್ಬರು ನೆನಪಿಸಿದರು. ಸೈರಾಟ್ ಪಿಚ್ಚರ್‌ನಲ್ಲಿ ಓಡಿ ಹೋಗಿ ಮದುವೆಯಾದ ಯುವಜೋಡಿಯನ್ನು ಯುವತಿಯ ಕುಟುಂಬಸ್ಥರು ಇದೇ ರೀತಿ ಕೊಲೆ ಮಾಡಿರುತ್ತಾರೆ. ಯುವಜೋಡಿಯನ್ನು ಕೊಂದು ಮಗುವನ್ನು ಬಿಟ್ಟು ಹೋಗಿರುವ ದೃಶ್ಯ ಕ್ಲೈಮ್ಯಾಕ್ಸ್ ಇತ್ತು. ಇಲ್ಲಿ ಯುವತಿ ಹಾಗೂ ಆಕೆಯ ಗರ್ಭದಲ್ಲಿನ ಮಗುವನ್ನು ಕೊಂದಿದ್ದಾರೆ. ಪತಿ ತಪ್ಪಿಸಿಕೊಂಡಿದ್ದರಿಂದ ಆತ ಬದುಕುಳಿದಿದ್ದಾನೆ. ಆದರೆ ಇಷ್ಟೊಂದು ಕ್ರೂರತ್ವ ಸರಿಯಲ್ಲ ಎಂಬ ಮಾತು ಕೇಳಿ ಬರುತ್ತಿದ್ದವು.ಕ್ರಾರ್ಯಕ್ಕೆ ರಕ್ತದ ಕಲೆಗಳೇ ಸಾಕ್ಷಿ
ಯುವಕನ ಕುಟುಂಬಸ್ಥರು ಎಲ್ಲಿ ಸಿಗುತ್ತಾರೋ ಅಲ್ಲಿಯೇ ಹಲ್ಲೆ ನಡೆದಿದೆ. ಮಾರಕಾಸ್ತ್ರಗಳಿಂದ ಯರ್ರಾಬಿರ್ರಿಯಾಗಿ ಹಲ್ಲೆ ನಡೆಸಿದ್ದಾರೆ. ಮನೆಯೊಳಗೆ, ಮನೆಯಂಗಳ ಹಾಗೂ ಗ್ರಾಮದ ರಸ್ತೆ ತುಂಬೆಲ್ಲಾ ಕಾಣಿಸುತ್ತಿದ್ದ ರಕ್ತದ ಕಲೆಗಳೆ ಕೌರ್ಯತೆಗೆ ಸಾಕ್ಷಿಯಾಗಿದ್ದವು. ಇವು ಇನಾಂವೀರಾಪುರ ಗ್ರಾಮದಲ್ಲಿ ಕಂಡು ಬರುತ್ತಿದ್ದ ದೃಶ್ಯ. ಗ್ರಾಮದಲ್ಲಿ ಅಕ್ಷರಶಃ ಸಶ್ಮಾನ ಮೌನ ಆವರಿಸಿದೆ.ಮಾನ್ಯಾಳ ಪತಿಯ ಕುಟುಂಬಸ್ಥರ ಅಳುವ ಕೂಗು. ಗ್ರಾಮದಲ್ಲಿ ಬಿಗು ಭದ್ರತೆಯಲ್ಲಿದ್ದ ಪೊಲೀಸರ ಬೂಟಿನ ಸದ್ದು ಬಿಟ್ಟರೆ ಬೇರೆನೂ ಕೇಳುತ್ತಿರಲಿಲ್ಲ. ಮನೆಯ ಮಹಡಿ ಮೇಲೆ ಮತ್ತು ದೂರದಿಂದಲೇ ಎಲ್ಲವನ್ನೂ ಗ್ರಾಮಸ್ಥರು ನೋಡುತ್ತಿದ್ದರು.ತಂದೆ ಜೈಲಲ್ಲಿ; ಉಳಿದವರು ಎಲ್ಲಿ?
ಇನ್ನು ಮೃತಪಟ್ಟ ಯುವತಿಯ ತವರು ಮನೆಯವರು ಯಾರೂ ಅಂತ್ಯಸಂಸ್ಕಾರದ ವೇಳೆ ಅತ್ತ ಸುಳಿಯಲಿಲ್ಲ. ತಂದೆ, ಚಿಕ್ಕಪ್ಪ ಸೇರಿದಂತೆ ಮೂವರು ಜೈಲಲ್ಲಿದ್ದರೆ, ತಾಯಿ ಸೇರಿದಂತೆ ಉಳಿದವರ ಬಗ್ಗೆ ಯಾರು ಉತ್ತರಿಸುವವರಿರಲಿಲ್ಲ. ಹೀಗಾಗಿ, ಅಂತ್ಯಸಂಸ್ಕಾರದ ವೇಳೆ ತವರು ಮನೆಯವರು ಕಾಣಿಸಲಿಲ್ಲ. ದಲಿತ ಮುಖಂಡರು, ಪತಿಯ ಕುಟುಂಬಸ್ಥರು, ಕೆಲ ಗ್ರಾಮಸ್ಥರು ಮಾತ್ರ ಪಾಲ್ಗೊಂಡಿದ್ದರು.