ಮುಂಡರಗಿ: ಕಪ್ಪತ್ತಗಿರಿಯ ಸಾಲಿನಲ್ಲಿರುವ ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನವು ಕಳೆದ 7-8 ವರ್ಷಗಳಿಂದ ಹೆಚ್ಚಿನ ಅಭಿವೃದ್ಧಿಗೊಳ್ಳುವ ಮೂಲಕ ಇಡೀ ಉತ್ತರ ಕರ್ನಾಟಕದಲ್ಲಿಯೇ ಸುಪ್ರಸಿದ್ಧಿ ಪಡೆದುಕೊಳ್ಳುತ್ತಿದೆ ಎಂದು ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಜಿ ಹೇಳಿದರು. ಅವರು ಗುರುವಾರ ಸಂಜೆ ಸಿಂಗಟಾಲೂರಿನಲ್ಲಿ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧಾರ್ಮಿಕ ಸಭೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದ ಸನಿಧ್ಯವಹಿಸಿ ಮಾತನಾಡಿದರು.
ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿ, ವೀರಭದ್ರಸ್ವಾಮಿ ಹುಟ್ಟು ಹಾಗೂ ಪವಾಡಗಳ ಕುರಿತು ವಿವರಿಸಿ, ಉತ್ತರ ಕರ್ನಾಟಕ ಜಾತ್ರೆಗಳಲ್ಲಿ ಸಿಂಗಟಾಲೂರು ವೀರಭದ್ರೇಶ್ವರ ಜಾತ್ರೆಯೂ ಒಂದು. ಈ ದೇವಸ್ಥಾನದ ಹತ್ತಿರ ಬೋಟಿಂಗ್ ವ್ಯವಸ್ಥೆ ಹಾಗೂ ಟ್ರ್ಯಾಕಿಂಗ್ ವ್ಯವಸ್ಥೆ ಮಾಡಿದರೆ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಲಿದೆ. ಜತೆಗೆ ಜಾತ್ರಾ ಮಹೋತ್ಸವದಲ್ಲಿ ರೈತರಿಗಾಗಿ ಕೃಷಿ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರಭದ್ರೇಶ್ವರ ದೇವಸ್ಥಾನಕ್ಕೆ ನಾಡಿನಾದ್ಯಂತ ಭಕ್ತರಿದ್ದು, ಎಲ್ಲ ಭಕ್ತರು ತನು, ಮನ ಧನದಿಂದ ಸಹಾಯ ಸಹಕಾರ ಮಾಡುತ್ತಾ ಬಂದಿದ್ದರಿಂದಾಗಿ ಇಂದು ಇಷ್ಟೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುಕೂಲವಾಗಿದೆ. ಇದೀಗ ಸುಮಾರು 5 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ಇದಕ್ಕೂ ಸಹ ಭಕ್ತರ ಸಹಾಯ, ಸಹಕಾರದೊರೆಯುವ ಭರವಸೆ ಇದೆ ಎಂದರು.ಸೋಗಿ ಪುರವರ್ಗದ ಅಭಿನವ ಸಿದ್ದವೀರ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಂಗಟಾಲೂರು ಗ್ರಾ.ಪಂ.ಅಧ್ಯಕ್ಷ ಸುನಿಲ್ ರಡ್ಡಿ ನೀರಲಗಿ, ಮಾಜಿ ಅಧ್ಯಕ್ಷ ಮಂಜುನಾಥ ಮುಂಡವಾಡ, ಕಲವೀರಪ್ಪ ಭಜಂತ್ರಿ, ಶೇಖರಪ್ಪ ಬಾಲೆ ಹೊಸೂರ, ಕೊಟ್ರೇಶ ಬಳ್ಳೊಳ್ಳಿ, ಸುಭಾಸಪ್ಪ ಬಾಗೇವಾಡಿ, ಕಾಶಯ್ಯ ಬೆಂತೂರಮಠ, ಅಂದಪ್ಪ ಗೋಡಿ, ಬಸವರಾಜ ಉಮನಾಬಾದಿ, ಮುತ್ತಯ್ಯ ಹಿರೇಮಠ, ಡಾ.ಉಮೇಶ ಪುರದ, ನಾಗೇಶ ಹುಬ್ಬಳ್ಳಿ, ವೀರನಗೌಡ ಗುಡದಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದಾನಿಗಳಿಗೆ ಸನ್ಮಾನಿಸಲಾಯಿತು. ಸಂಗೀತಾ ಅಬ್ಬೀಗೇರಿಮಠ ಅವರಿಂದ ಸಂಗೀತ ಕಾರ್ಯಕ್ರಮ, ಮುದಿಯಪ್ಪ ಭಜಂತ್ರಿ ಅವರಿಂದ ಕ್ಲ್ಯಾರಿನೆಟ್ ವಾದನ ಜರುಗಿದವು. ನಂತರ ಅಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಕ್ರೀಡಾ ಯುವ ಸಂಘ ಕಬನೂರ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಿ.ಕೆ.ಎಂ.ಬಸವಲಿಂಗಯ್ಯಸ್ವಾಮಿ ಸ್ವಾಗತಿಸಿ, ಶಿಕ್ಷಕ ಮಹೇಶ ಮೇಟಿ ನಿರೂಪಿಸಿದರು.