2 ವಾಹನಗಳಿಗೆ ಒಂದೇ ನೋಂದಣಿ : ಇಬ್ಬರ ಬಂಧನ, 12 ವಾಹನ ಜಪ್ತಿ

KannadaprabhaNewsNetwork |  
Published : Jun 29, 2026, 03:45 AM IST
Arrest

ಸಾರಾಂಶ

ಒಂದೇ ನೋಂದಣಿ ಸಂಖ್ಯೆಯನ್ನು ಎರಡು ವಾಹನಗಳಿಗೆ ಬಳಸಿ ಓಡಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು 12 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಸುಭಾಷ್‌ನಗರದ ನಿವಾಸಿ ಹಾಗೂ ಮೆಕ್ಯಾನಿಕ್‌ ಸಯ್ಯದ್‌ ನಜೀರ್‌ (40) ಮತ್ತು ಆಂಧ್ರಪ್ರದೇಶ ಮೂಲದ ಹಾಗೂ ಆನೇಕಲ್‌ ನಿವಾಸಿ ನಾಗರಾಜ್‌ (52) ಬಂಧಿತ ಆರೋಪಿಗಳಾಗಿದ್ದಾರೆ.

 ಬೆಂಗಳೂರು :  ಒಂದೇ ನೋಂದಣಿ ಸಂಖ್ಯೆಯನ್ನು ಎರಡು ವಾಹನಗಳಿಗೆ ಬಳಸಿ ಓಡಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು 12 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿಯ ಸುಭಾಷ್‌ನಗರದ ನಿವಾಸಿ ಹಾಗೂ ಮೆಕ್ಯಾನಿಕ್‌ ಸಯ್ಯದ್‌ ನಜೀರ್‌ (40) ಮತ್ತು ಆಂಧ್ರಪ್ರದೇಶ ಮೂಲದ ಹಾಗೂ ಆನೇಕಲ್‌ ನಿವಾಸಿ ನಾಗರಾಜ್‌ (52) ಬಂಧಿತ ಆರೋಪಿಗಳಾಗಿದ್ದಾರೆ.

ಎರಡೂ ವಾಹನಗಳ ನೋಂದಣಿ ಸಂಖ್ಯೆ ಒಂದೇ

ಎಲೆಕ್ಟ್ರಾನಿಕ್ ಸಿಟಿ ಠಾಣೆ ಹೆಡ್ ಕಾನ್‌ಸ್ಟೇಟೇಬಲ್ ಮತ್ತು ಕಾನ್‌ಸ್ಟೇಬಲ್‌ಗಳು ಇತ್ತೀಚೆಗೆ ಮಣಿಪಾಲ್ ಕೌಂಟಿ ರಸ್ತೆಯಲ್ಲಿ ಬೈಕ್‌ನಲ್ಲಿ ಗಸ್ತಿನಲ್ಲಿದ್ದ ವೇಳೆ ವೇಗವಾಗಿ ಬಂದ ಸ್ವರಾಜ್ ಮಜ್ಡಾ ಮಿನಿ ಬಸ್ ಅವರ ಬೈಕ್‌ ಅನ್ನು ಓವರ್‌ ಟೇಕ್ ಮಾಡಿಕೊಂಡು ಹೋಗಿದ್ದು, ಆಗ ಅದರ ನಂಬರ್ ಪ್ಲೇಟನ್ನು ಗಮನಿಸಿದರು. ಕೆಲವೇ ನಿಮಿಷಗಳಲ್ಲಿ ಅದೇ ಮಾರ್ಗವಾಗಿ ಹಾದು ಹೋದ ಮತ್ತೊಂದು ಮಿನಿ ಬಸ್ ನೋಂದಣಿ ಸಂಖ್ಯೆಯನ್ನು ಗಮನಿಸಿದಾಗ ಪೊಲೀಸರಿಗೆ ಎರಡೂ ವಾಹನಗಳ ನೋಂದಣಿ ಸಂಖ್ಯೆ ಒಂದೇ ಆಗಿದ್ದು ಕಂಡು ಬಂದಿತು

ತಕ್ಷಣ ಪೊಲೀಸರು ವಾಹನಗಳನ್ನು ಬೆನ್ನಟ್ಟಿ ಬೇಗೂರು ಕೆರೆ ರಸ್ತೆ ಬಳ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಒಂದೇ ನೋಂದಣಿ ಸಂಖ್ಯೆಯನ್ನು ಎರಡು ವಾಹನಗಳಿಗೆ ಬಳಸಿರುವುದು ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಎಲೆಕ್ಟ್ರಾನಿಕ್‌ ಸಿಟಿ ಠಾಣೆಯ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡ ಹೆಚ್ಚಿನ ತನಿಖೆ ಕೈಗೊಂಡು ಮೆಕ್ಯಾನಿಕ್‌ ಆಗಿರುವ ಸಯ್ಯದ್‌ ನಜೀರ್‌ ಅವರ ಶಾಪ್‌ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾಗ ಇನ್ನಷ್ಟು ವಾಹನಗಳು ಇದೇ ರೀತಿ ಒಂದೇ ನೋಂದಣಿ ಸಂಖ್ಯೆಯನ್ನು ಹಾಕಿಕೊಂಡಿರುವುದು ಗೊತ್ತಾಗಿದೆ. ಒಟ್ಟು 12 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 6 ವಾಹನಗಳ ನಂಬರ್‌ ಪ್ಲೇಟ್‌ಗಳು ಅಸಲಿಯಾಗಿದ್ದು, ಇನ್ನು ಉಳಿದ ಆರು ವಾಹನಗಳ ನಂಬರ್‌ ಪ್ಲೇಟ್‌ಗಳು ನಕಲಿಯಾಗಿರುವುದು ಪತ್ತೆಯಾಗಿದೆ. ಪತ್ತೆಯಾಗಿರುವ 12 ವಾಹನಗಳ ಚಾಸಿ ನಂಬರ್‌ಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಕ್ಕೆ ತೆರಿಗೆ ವಂಚನೆ:

ಆರೋಪಿಗಳು ರಸ್ತೆ ತೆರಿಗೆ, ನೋಂದಣಿ ಶುಲ್ಕ, ಪ್ರಯಾಣಿಕರ ವಾಹನ ತೆರಿಗೆ, ಫಿಟ್‌ನೆಸ್ ಪ್ರಮಾಣಪತ್ರದ ಶುಲ್ಕಗಳನ್ನು ಸಂಪೂರ್ಣವಾಗಿ ವಂಚಿಸಲು ಒಂದೇ ನಂಬರ್‌ ಪ್ಲೇಟ್‌ ಅನ್ನು ಎರಡೆರಡು ವಾಹನಗಳಿಗೆ ಬಳಕೆ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಜೆಡಿಎಸ್‌ ಕಾರ್ಯಕರ್ತರಿಗಾಗಿ ಎಸ್‌ಐಆರ್‌ ಕಾರ್ಯಾಗಾರ: ದೇವಾನಂದ ಚವ್ಹಾಣ
ವರುಣನ ಕೃಪೆಗಾಗಿ ಇಂದ್ರ ಹೋಮ ವಿಶೇಷ ಪೂಜೆ