- ಪರಿಸರ ಸಂರಕ್ಷಣೆ- ಪ್ಲಾಸ್ಟಿಕ್ ನಿಷೇಧ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ನಗರ, ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರಸ್ನೇಹಿ ಜಿಲ್ಲೆಯಾಗಿಸಲು ಇಲಾಖಾವಾರು ವಿವಿಧ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ನಿಷೇಧ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾದ್ಯಂತ ಪರಿಸರ ಸಂರಕ್ಷಿಸಿ, ಉಳಿಸಲು ಪ್ರತಿ ಶಾಲೆಗೆ ದೊಡ್ಡ ಬ್ಯಾಗ್ ನೀಡಬೇಕು. ಅವುಗಳಲ್ಲಿ ಕಸ, ತ್ಯಾಜ್ಯ ಸಂಗ್ರಹಿಸಿ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು. ಪರಿಸರ ದಿನಾಚರಣೆ ಅಂಗವಾಗಿ ಸಂರಕ್ಷಣೆಗೆ ಮತ್ತು ರಕ್ಷಣೆಗೆ ಪ್ರತಿಯೊಂದು ಮಗುವು ಎರಡು ಸಸಿ ನೆಟ್ಟು ಪೋಷಣೆ ಮಾಡಬೇಕು ಎಂದರು.
ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಲು ದಾವಣಗೆರೆ ನಗರದಲ್ಲಿ ಮಾದರಿ ವಾರ್ಡ್ ಆಯ್ಕೆ ಮಾಡಿಕೊಳ್ಳುವ ಮೂಲಕ ಇಲ್ಲಿ ಪ್ಲಾಸ್ಟಿಕ್ ಬಳಕೆ ಶೂನ್ಯಕ್ಕೆ ತರುವುದು ಮತ್ತು ಪರಿಸರ ಸಂರಕ್ಷಣೆ ಮಾಡಲು ಕ್ರಮ ವಹಿಸಲಾಗುತ್ತದೆ. ಪ್ರತಿ ಮನೆಯಿಂದ ವೈಜ್ಞಾನಿಕವಾಗಿ ಕಸ ಸಂಗ್ರಹ ಮಾಡಲಾಗುತ್ತದೆ ಎಂದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಇನ್ನಿತರೇ ಮಾರುಕಟ್ಟೆಗಳಲ್ಲಿ ಏಕಬಳಕೆ ಹಾಗೂ ಪರಿಸರಕ್ಕೆ ಹಾನಿ ಮಾಡುವಂಥ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿರ್ಬಂಧಿಸಿ ನಿಷೇಧಿಸುವಂತೆ ಮಾರುಕಟ್ಟೆ ಸಮಿತಿ ಜಂಟಿ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡಿ ಆಯಾ ಇಲಾಖೆವಾರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪೂರ್ಣ ವರದಿ ನೀಡಲು ಪರಿಸರ ಅಧಿಕಾರಿಗೆ ಸೂಚನೆ ನೀಡಿದರು.
- - -
- - -
ದಾವಣಗೆರೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ನಿಷೇಧ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿದರು.