ಎಸ್‌ಐಆರ್‌: ಧಾರವಾಡ ಜಿಲ್ಲೆಯಲ್ಲಿ 2.73 ಮತದಾರರು ಔಟ್‌!

KannadaprabhaNewsNetwork |  
Published : Aug 09, 2026, 02:15 AM IST
ಮತದಾರರ ಪಟ್ಟಿ ಪರಿಷ್ಕರಣೆ | Kannada Prabha

ಸಾರಾಂಶ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ಧಾರವಾಡ ಜಿಲ್ಲೆಯಲ್ಲೇ 2.73 ಲಕ್ಷಕ್ಕೂ ಅಧಿಕ ಮತದಾರರು ಕರಡು ಪಟ್ಟಿಯಿಂದ ಹೊರಕ್ಕುಳಿಯುವ ಸಾಧ್ಯತೆ ದಟ್ಟವಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ಧಾರವಾಡ ಜಿಲ್ಲೆಯಲ್ಲೇ 2.73 ಲಕ್ಷಕ್ಕೂ ಅಧಿಕ ಮತದಾರರು ಕರಡು ಪಟ್ಟಿಯಿಂದ ಹೊರಕ್ಕುಳಿಯುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಬಿಜೆಪಿ ಕ್ಷೇತ್ರವಾಗಿರುವ ಸೆಂಟ್ರಲ್‌ ಹಾಗೂ ಪಶ್ಚಿಮ ಮತಕ್ಷೇತ್ರದಿಂದಲೇ ಅತ್ಯಧಿಕ ಮತದಾರರು ಔಟ್‌ ಆಗುವ ಸಾಧ್ಯತೆಯುಂಟು.

ಹಾಗೆ ನೋಡಿದರೆ ಆ. 8ಕ್ಕೆ ಎಸ್‌ಐಆರ್‌ ಪ್ರಕ್ರಿಯೆ ಮುಕ್ತಾಯವಾಗಬೇಕಿತ್ತು. ಆದರೆ ರಾಜ್ಯದಲ್ಲಿ ಪೂರ್ಣವಾಗಿಲ್ಲ ಎಂಬ ಕಾರಣಕ್ಕೆ ಆ.17ರ ವರೆಗೆ ವಿಸ್ತರಣೆಯಾಗಿದೆ. ಆ. 8ರ ಸಂಜೆ ವರೆಗಿನ ಎಸ್‌ಐಆರ್‌ ಪ್ರಕ್ರಿಯೆಯ ಚುನಾವಣಾ ವರದಿ ಅವಲೋಕಿಸಿದರೆ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಎಎಸ್‌ಡಿಡಿಒ (ಎ- ಅಬ್ಸೆಂಟ್‌, ಎಸ್‌- ಶಿಫ್ಟೆಡ್‌, ಡಿ- ಡೆತ್‌, ಡಿ- ಡುಪ್ಲಿಕೇಟ್‌ ಹಾಗೂ ಒ- ಅದರ್ಸ್‌) ವರ್ಗೀಕರಣದಲ್ಲಿ ಬರೋಬ್ಬರಿ 2,73,728 ಮತದಾರರು ಹೊರಗುಳಿಯುವ ಸಾಧ್ಯತೆ ಇದೆ. ಆ.17ರ ವರೆಗೆ ಅವಧಿ ವಿಸ್ತರಿಸಿರುವುದರಿಂದ ಇದರ ಪ್ರಮಾಣ ಕಡಿಮೆಯಾಗುವ ಲಕ್ಷಣವೂ ಇದೆ.

ಶೇ. 83ರಷ್ಟು ಗಣಕೀಕರಣ: ಏಳು ಕ್ಷೇತ್ರಗಳಲ್ಲಿ ಸೇರಿ ಒಟ್ಟು 16,21,961 ಮತದಾರರಿದ್ದಾರೆ. ಎಲ್ಲರಿಗೂ ಎನ್ಯುಮೆರೇಷನ್‌ ಫಾರ್ಮ್‌ ವಿತರಿಸಲಾಗಿದ್ದು, ಅದರಲ್ಲಿ 13,48,233 (ಶೇ. 83.12) ಗಣಕೀಕರಣ ಕೂಡ ಆಗಿದೆ ಎಂದು ಜಿಲ್ಲಾಡಳಿತದ ಅಂಕಿ- ಅಂಶಗಳು ತಿಳಿಸುತ್ತವೆ.

ಯಾವ್ಯಾವ ಕ್ಷೇತ್ರದಲ್ಲೆಷ್ಟು?: ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಎಎಸ್‌ಡಿಡಿಒ ಪಟ್ಟಿಯಲ್ಲಿ 2,73,728 ಜನ ಮತದಾರರಿದ್ದಾರೆ. ಈ ಪೈಕಿ ಪತ್ತೆಯಾಗದವರು (ಎ- ಅಬ್ಸೆಂಟ್‌) - 64,899, ಶಾಶ್ವತವಾಗಿ ಸ್ಥಳಾಂತರವಾದವರು (ಎಸ್‌- ಶಿಫ್ಟೆಡ್‌)- 1,28,164, ಮೃತಪಟ್ಟವರು (ಡಿ- ಡೆತ್‌)- 52,502, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾದವರು (ಡಿ- ಡುಪ್ಲಿಕೇಟ್‌)- 26,528, ಇತರ (ಒ- ಅದರ್ಸ್‌) 1,635 ಜನ ಮತದಾರರಿದ್ದಾರೆ. ಇವರೆಲ್ಲರೂ ಕರಡುಪಟ್ಟಿಯಿಂದ ಹೊರಕ್ಕೆ ಹೋಗುವ ಲಕ್ಷಣಗಳಿವೆ.

ಈ ಏಳು ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಅಂದರೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ 67,509 ಜನ ಮತದಾರರಿದ್ದಾರೆ. ಸೆಂಟ್ರಲ್‌ನಲ್ಲಿ ಡೆತ್‌- 8,906, ಸ್ಥಳಾಂತರ- 33,854, ಎರಡು ಕಡೆಗಳಲ್ಲಿ ಗುರುತಿನ ಚೀಟಿ - 3,101, ಅಬ್ಸೆಂಟ್‌- 21,418 ಇತರೆ 230 ಜನರಿದ್ದಾರೆ. ಇನ್ನು ಪಶ್ಚಿಮದಲ್ಲಿ ಡೆತ್‌- 8,924, ಸ್ಥಳಾಂತರ- 42,111, ಡುಪ್ಲಿಕೇಟ್‌- 5,109, ಅಬ್ಸೆಂಟ್‌- 9,768, ಇತರ- 910 ಜನರಿದ್ದಾರೆ. ಇನ್ನುಳಿದಂತೆ ನವಲಗುಂದದಲ್ಲಿ 22,501 ಮತದಾರರು, ಕುಂದಗೋಳ- 18,979, ಧಾರವಾಡ- 32,859, ಹು-ಧಾ ಪೂರ್ವ- 48,190, ಕಲಘಟಗಿ- 16,868 ಮತದಾರರು ಹೊರಗುಳಿಯುವ ಸಾಧ್ಯತೆಯುಂಟು.

ಇದೀಗ ಎಸ್‌ಐಆರ್‌ ಪ್ರಕ್ರಿಯೆಯನ್ನು ಆ. 17ರ ವರೆಗೆ ವಿಸ್ತರಿಸಿರುವುದರಿಂದ ಎನ್ಯುಮೆರೇಷನ್‌ ಫಾರ್ಮ್‌ ಭರ್ತಿ ಮಾಡಿ ಕೊಡದೇ ಇರುವ ಮತದಾರರು ತಕ್ಷಣವೇ ತಮ್ಮ ಬಿಎಲ್‌ಒಗಳನ್ನು ಸಂಪರ್ಕಿಸಿ ನೀಡಬೇಕು. ಒಂದು ವೇಳೆ ಎನ್ಯುಮೆರೇಷನ್‌ ಫಾರ್ಮ್‌ ಪಡೆಯದೇ ಇರುವವರು ಸಂಪರ್ಕಿಸಿ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ಜಿಲ್ಲಾಡಳಿತದ ಕೋರಿಕೆ.

ಒಟ್ಟಿನಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಮುಕ್ತಾಯ ಹಂತಕ್ಕೆ ಬಂದಿದ್ದರೂ ಗೊಂದಲ ಬಗೆಹರಿಯುತ್ತಿಲ್ಲ. ಮತದಾರರು ಹೊರಗುಳಿಯುವ ಆತಂಕ ಎದುರಿಸುವಂತಾಗಿರುವುದಂತೂ ಸತ್ಯ.ಇದು ಹೇಗೆ ಸಾಧ್ಯ?: ಜಿಲ್ಲೆಯಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆ ನೋಡಿದರೆ ಸಾಕಷ್ಟು ಅನುಮಾನಗಳು ಬರುತ್ತಿವೆ. ಎಲ್ಲರಿಗೂ ನಮೂನೆಗಳನ್ನು ನೀಡಲಾಗಿದೆ. ನಮೂನೆ ನೀಡಿದ್ದರೆ ಅದೇ ಮತದಾರರು ಸ್ಥಳಾಂತರಗೊಂಡಿದ್ದಾರೆ ಎಂದು ದಾಖಲಿಸಲಾಗಿದೆ. ಇದು ಹೇಗೆ ಸಾಧ್ಯ? ಇದೀಗ ಎಸ್‌ಐಆರ್‌ ಪ್ರಕ್ರಿಯೆಯ ಅವಧಿಯನ್ನು ಆ.17ರ ವರೆಗೆ ವಿಸ್ತರಿಸಲಾಗಿದೆ. ಇದರ ಸದುಪಯೋಗ ಮತದಾರರು ಪಡೆಯಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ವಸ್ತು ಸಂಗ್ರಹಾಲಯ ಈ ನೆಲದ ಜೀವನ ಮೀಮಾಂಸೆ ಹೇಳುವ ಪಠ್ಯ
ಹಡಪದ ಅಪ್ಪಣ್ಣನವರು ಬಸವಣ್ಣನವರ ಬಲಗೈ ಬಂಟರಾಗಿದ್ದರು-ಸ್ವಾಮೀಜಿ