ರಾಮನಗರ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಶೇ.99.94ರಷ್ಟು ಪೂರ್ಣಗೊಂಡಿದ್ದು, ಬಾಕಿ ಉಳಿದ 518 ಮತದಾರರು ತಮ್ಮ ಎನ್ಯುಮರೇಷನ್ ಅರ್ಜಿ ನಮೂನೆಯನ್ನು ಆ.8ರೊಳಗೆ ವಾಪಸ್ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು.
ಬಾಕಿ ಉಳಿದಿರುವ 1,11,448 ಅಂದರೆ ಶೇ.11.87ರಷ್ಟು ಮತದಾರರು ಎಎಸ್‌ಡಿಡಿಓ (ASDDO-Absent, Shifted, Duplicate, Dead, and Others) ಪಟ್ಟಿಯಲ್ಲಿ ಗುರುತಿಸಿ ಕೊಂಡಿದ್ದಾರೆ. ಅಂದರೆ ಆ ಮತದಾರರು ಮೃತಪಟ್ಟವರು, ಗೈರಾದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಎರಡು ಕಡೆ ಮತದಾರರ ಹೆಸರಿದೆ ಎಂದು ತಿಳಿಸಿದವರಾಗಿದ್ದಾರೆ. ಜಿಲ್ಲೆಯಲ್ಲಿ 518 ಮತದಾರರ ಎನ್ಯುಮರೇಷನ್ ಅರ್ಜಿ ನಮೂನೆಗಳು ವಾಪಸ್ ಬರಬೇಕಿದೆ. ಇನ್ನೆರಡು ದಿನದಲ್ಲಿ ಅವರೆಲ್ಲರೂ ನಮೂನೆಯನ್ನು ಹಿಂತಿರುಗಿಸುವಂತೆ ಕೋರಿದರು.
ಎಎಸ್‌ಡಿಡಿಒ ಪಟ್ಟಿಯಲ್ಲಿ ಮೃತರಾದವರು 33,000, ಶಾಶ್ವತವಾಗಿ ಸ್ಥಳಾಂತರಗೊಂಡವರು 47,000, ಎರಡು ಕಡೆ ಹೆಸರಿದೆ ಎಂದವರು 15,000 ಹಾಗೂ ಗೈರಾದವರು 13,000 ಸೇರಿದಂತೆ ಒಟ್ಟು 1,11,448 ಜನರಿದ್ದಾರೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ 518 ವಾಪಸ್ ಬರಬೇಕಾದ ಅರ್ಜಿಗಳನ್ನು ಕೂಡಲೇ ಸ್ಥಳೀಯ ಬಿಎಲ್ಒಗಳಿಗೆ ನೀಡಬಹುದಾಗಿದೆ. ಆ ಬಿಎಲ್‌ಓಗಳು ಅವರ ಮೊಬೈಲ್ ನಂಬರನ್ನು ನೀಡಿದ್ದು ಅವರನ್ನು ಸಂಪರ್ಕಿಸಿ ಅರ್ಜಿ ನಮೂನೆ ನೀಡಬಹುದು ಅಥವಾ ಬಿಎಲ್‌ಎ ಅವರಿಗಾದರೂ ನೀಡಬಹುದಾಗಿದೆ, ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಯಾರೊಬ್ಬರೂ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗೂಳಿಯಬಾರದು ಎಂಬುದೇ ಜಿಲ್ಲಾಡಳಿತದ ಆಶಯ ಎಂದು ಹೇಳಿದರು.
ಈ ಹಂತದಲ್ಲಿ ಮತದಾರರ ಹೆಸರು ಸೇರ್ಪಡೆಗೊಳಿಸಲು ಅಥವಾ ತೆಗೆದುಹಾಕಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಿದವರಿಗೆ ನೋಟಿಸ್ ನೀಡಿ ಮುಂದಿನ ಪ್ರಕ್ರಿಯೆ ಜರುಗಿಸಲಾಗುವುದು. ಅಕ್ಟೋಬರ್ 19ಕ್ಕೆ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಯಶವಂತ್ ವಿ.ಗುರುಕರ್ ತಿಳಿಸಿದರು.
ರಾಮನಗರದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.