ರಾಜ್ಯದ ವಿವಿಧೆಡೆ ಎಸ್‌ಐಆರ್‌ ಜಾಗೃತಿ ಸಮಾವೇಶ: ಬಿ.ಕೆ. ಹರಿಪ್ರಸಾದ

KannadaprabhaNewsNetwork |  
Published : Jun 26, 2026, 02:00 AM IST
ಬಿ.ಕೆ. ಹರಿಪ್ರಸಾದ | Kannada Prabha

ಸಾರಾಂಶ

ಎಸ್‌ಐಆರ್ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದ ವಿವಿಧ ವಿಭಾಗಗಳಲ್ಲಿ ಜಾಗೃತಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು

ಹುಬ್ಬಳ್ಳಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದ ವಿವಿಧ ವಿಭಾಗಗಳಲ್ಲಿ ಜಾಗೃತಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ಕಾರ್ಯಕ್ರಮಗಳು ನಡೆದಿದ್ದು, ಜೂ. 28ರಂದು ಮೈಸೂರು ಹಾಗೂ ಜೂ. 30ರಂದು ಬೆಂಗಳೂರಿನಲ್ಲಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಜೆಪಿ ಶ್ರೀಮಂತ ಪಕ್ಷ

ಖರ್ಗೆ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಖರ್ಗೆ ಕುಟುಂಬದ ಮೇಲೆ ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅತೀ ಹೆಚ್ಚು ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 12 ವರ್ಷಗಳಲ್ಲಿ ₹4 ಸಾವಿರ ಕೋಟಿ ಖಜಾನೆ ಹೊಂದಿದೆ. ಆದರೆ, 70 ವರ್ಷ ಅಧಿಕಾರ ನಡೆಸಿದ ನಮ್ಮ ಪಕ್ಷದ ಖಜಾನೆಯಲ್ಲಿ ₹700 ಕೋಟಿ ಇದೆ. ನಮ್ಮದು ಬಡವರ ಪಕ್ಷ ಹಾಗಾಗಿ ನಾನು ಎಲ್ಲಿ ಹೋದರೂ ನಮ್ಮ ಕಾರ್ಯಕರ್ತರಿಗೆ ಹಾರ, ತುರಾಯಿ ನೀಡದೇ ಅದೇ ಹಣವನ್ನು ಪಕ್ಷದ ಸಂಘಟನೆಗೆ ನೀಡುವಂತೆ ಮನವಿ ಮಾಡುತ್ತಿದ್ದೇನೆ ಎಂದರು.ಆರ್‌ಎಸ್‌ಎಸ್‌ ಬ್ಯಾನ್?

ಆರ್‌ಎಸ್‌ಎಸ್‌ನ್ನು ಕಾಂಗ್ರೆಸ್‌ನವರು ಏಕೆ ಬ್ಯಾನ್‌ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಬಿ.ಕೆ. ಹರಿಪ್ರಸಾದ್, ಈಗಾಗಲೇ ಹಿಂದಿನ ಅವಧಿಯಲ್ಲಿ ಮೂರು ಬಾರಿ ಆರ್‌ಎಸ್‌ಎಸ್‌ ಬ್ಯಾನ್‌ ಆಗಿದೆ. ಈಗ ನಮ್ಮ ಮುಂದಿನ ಹೋರಾಟವು ಅದೇ ಆಗಲಿದೆ. ಅದು ಏನಾಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡೋಣ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಎಸ್‌ಐಆರ್‌ ಕುರಿತು 30ರಂದು ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ: ಸಿ.ಜೆ. ಪಾಟೀಲ

ಹುಬ್ಬಳ್ಳಿ: ಬಿಹಾರದಿಂದ ಆರಂಭವಾಗಿರುವ ಎಸ್‌ಐಆರ್ ಪ್ರಕ್ರಿಯೆ ಈ ವರೆಗೆ 13 ರಾಜ್ಯ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿದ್ದು, ಸುಮಾರು 6 ಕೋಟಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದೆ. ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಗೆ ಜಾಗೃತ ಕರ್ನಾಟಕ ಜೂ. 30ರಂದು ಸಂಜೆ 4ಕ್ಕೆ ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಬಹಿರಂಗ ಚರ್ಚೆಗೆ ಆಹ್ವಾನಿಸಿದೆ ಎಂದು ಜಾಗೃತ ಕರ್ನಾಟಕದ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಜೆ. ಪಾಟೀಲ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ಜಾಗೃತ ಕರ್ನಾಟಕ ಮತ್ತು ರಾಜ್ಯದ ಹಲವು ಸಮುದಾಯ, ಸಂಘಟನೆ ಮತ್ತು ಪಕ್ಷಗಳು ಎಸ್‌ಐಆರ್‌ನ್ನು ವಿರೋಧಿಸುತ್ತಿದ್ದರೆ, ಬಿಜೆಪಿ ಮಾತ್ರ ಸಮರ್ಥಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪರ ಮತ್ತು ವಿರುದ್ಧದ ಅಭಿಪ್ರಾಯ ಇರುವ ಎರಡು ಕಡೆಯವರನ್ನು ಮುಖಾಮುಖಿಯಾಗಿ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಚರ್ಚಿಸುವುದು ಅಗತ್ಯವಾಗಿದೆ ಎಂದರು.ಯಾವುದೇ ಪಕ್ಷಪಾತವಿಲ್ಲದೇ ಬಹಿರಂಗ ಚರ್ಚೆ ನಡೆಸುವ ಉದ್ದೇಶದಿಂದ ಚರ್ಚೆಯನ್ನು ಆನ್‌ಲೈನ್ ಮೂಲಕ ಲೈವ್ ಮಾಡಲು ಉದ್ದೇಶಿಸಲಾಗಿದೆ. ಹೀಗಾಗಿ, ಬಿಜೆಪಿ ರಾಜ್ಯಾಧ್ಯಕ್ಷರು ಅಥವಾ ವಿರೋಧ ಪಕ್ಷದ ನಾಯಕರು ಈ ಬಹಿರಂಗ ಚರ್ಚೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಬೇಕು. ರಾಜ್ಯದ ಜನತೆಗೆ ಮತದಾನದ ಹಕ್ಕಿನ ರಕ್ಷಣೆಯ ಅಭಯ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಚಿಂತಾಮಣಿ ಸಿಂದಗಿ, ಲಲಿತಾ ಹೆಗಡೆ, ಅಭಿಷೇಕ ರಾಯಕೊಪ್ಪ, ಕುಮಾರಣ್ಣ ಪಾಟೀಲ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಕರ ಪಾವತಿ ಒಟಿಎಸ್‌ಗೆ ಬೆಂಗಳೂರಿಗೆ ನಿಯೋಗ
ಅಂಧ, ಅನಾಥರ ಆಶ್ರಯದಾತ ಕಲ್ಲಯ್ಯಜ್ಜನವರಿಗೇ ಜೀವಬೆದರಿಕೆಗೆ ಭಾರೀ ಆಕ್ರೋಶ