ಎಸ್‌ಐಆರ್ ಲೋಪ : ಆಯೋಗಕ್ಕೆ ಶೋಭಾ ಪತ್ರ

KannadaprabhaNewsNetwork |  
Published : Jul 04, 2026, 02:00 AM ISTUpdated : Jul 04, 2026, 07:29 AM IST
Shobha karandlaje

ಸಾರಾಂಶ

 ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ  ನಡೆಸುತ್ತಿರುವಾಗ ರಾಜ್ಯ ಚುನಾವಣಾ ಆಯೋಗವು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾನಾಂತರ ಎಸ್ಐಆರ್‌ ನಡೆಸುತ್ತಿರುವುದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು :  ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್‌) ನಡೆಸುತ್ತಿರುವಾಗ ರಾಜ್ಯ ಚುನಾವಣಾ ಆಯೋಗವು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾನಾಂತರ ಎಸ್ಐಆರ್‌ ನಡೆಸುತ್ತಿರುವುದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ತಕ್ಷಣ ಮಧ್ಯಪ್ರವೇಶಿಸಿ ರಾಜ್ಯ ಚುನಾವಣಾ ಆಯೋಗದ ಸಮನಾಂತರ ಎಸ್ಐಆರ್‌ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯ ಚುನಾವಣಾ ಆಯೋಗವು ರಾಜ್ಯದೊಳಗಿನ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಕೇಂದ್ರ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ತಯಾರಿಸಲು ಸ್ವತಂತ್ರ ಅಧಿಕಾರ ಹೊಂದಿಲ್ಲ. ಆದರೂ ಜಿಬಿಎ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾನಾಂತರ ಎಸ್‌ಐಆರ್‌ ಪ್ರಕ್ರಿಯೆ ಪ್ರಾರಂಭಿಸಿರುವುದು ಸಂವಿಧಾನ ವಿರೋಧಿಯಾಗಿದೆ. ಇದು ಸಾರ್ವಜನಿಕಸ ಸಂಪನ್ಮೂಲಗಳ ಅನಗತ್ಯ ಖರ್ಚು, ಆಡಳಿತಾತ್ಮಕ ಗೊಂದಲ, ಮತದಾರರ ಪಟ್ಟಿಯ ಸತ್ಯಾಸತ್ಯತೆ ಬಗ್ಗೆ ಅನಿಶ್ಚಿತತೆಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

ರಾಜ್ಯ ಚುನಾವಣಾ ಆಯೋಗವು ನಡೆಸುತ್ತಿರುವ ಈ ಸಮಾನಾಂತರ ಎಸ್ಐಆರ್ ಪ್ರಕ್ರಿಯೆಯ ಕಾನೂನುಬದ್ಧತೆ ಪರಿಶೀಲಿಸಲು ಮತ್ತು ಕೇಂದ್ರ ಚುನಾವಣಾ ಆಯೋಗದ ಮೇಲ್ವಿಚಾರಣೆ ಹಾಗೂ ನಿಯಂತ್ರಣದಲ್ಲಿ ವಿಧಾನಸಭಾ ಮತದಾರರ ಪಟ್ಟಿಯ ಏಕರೂಪದ ಎಸ್ಐಆರ್‌ ಇರುವಂತೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಎಸ್‌ಐಆರ್‌ ನಿಲ್ಲಿಸಲು ಕೇಂದ್ರ ಸಚಿವೆ ಆಗ್ರಹ:

ರಾಜ್ಯ ಚುನಾವಣಾ ಆಯೋಗವು ಜಿಬಿಎ ವ್ಯಾಪ್ತಿಯ 27 ವಾರ್ಡ್‌ಗಳಲ್ಲಿ ನಡೆಸುತ್ತಿರುವ ಸಮಾನಾಂತರ ಎಸ್ಐಆರ್‌ ತಕ್ಷಣ ನಿಲ್ಲಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈಗಾಗಲೇ ಕೇಂದ್ರ ಚುನಾವಣಾ ಆಯೋಗ ರಾಜ್ಯಾದ್ಯಂತ ಎಸ್‌ಐಆರ್‌ ನಡೆಸುತ್ತಿದೆ. ಇದರ ನಡುವೆ ಜಿಬಿಎ ವಾರ್ಡ್‍ಗಳಲ್ಲಿ ರಾಜ್ಯ ಚುನಾವಣಾ ಆಯೋಗ ಮತ್ತೊಂದು ಎಸ್‍ಐಆರ್ ನಡೆಸುತ್ತಿದೆ. ಇದು ಮತದಾರರನ್ನು ಗೊಂದಲಕ್ಕೀಡು ಮಾಡಿದೆ ಎಂದು ಹೇಳಿದರು. ರಾಹುಲ್ ಗಾಂಧಿ ಅವರನ್ನು ತೃಪ್ತಿಪಡಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಇಂತಹ ಕೆಲಸ ಮಾಡುತ್ತಿದೆ. 20 ವರ್ಷಗಳ ನಂತರ ಈ ಎಸ್‍ಐಆರ್ ನಡೆಯುತ್ತಿದ್ದು, ದೇಶದಲ್ಲಿ ಅಕ್ರಮ ಮತದಾರನ್ನು ಗುರುತಿಸಲು, ಮೃತಪಟ್ಟವರ ಹೆಸರು ತೆಗೆಯಲು ಮತ್ತು ಇತರ ಹಲವಾರು ಕಾರಣಗಳಿಂದ ಎಸ್‍ಐಆರ್ ನಡೆಯುತ್ತಿದೆ ಎಂದರು. 

ನಗರ ಪ್ರದೇಶಗಳಲ್ಲಿ ಮತದಾರರ ಹೆಸರು ಎರಡು ಕಡೆ

 ನಗರ ಪ್ರದೇಶಗಳಲ್ಲಿ ಮತದಾರರ ಹೆಸರು ಎರಡು ಕಡೆ ಇರುತ್ತದೆ. ಕೆಲವರು ಬೇರೆ ಕಡೆ ನೆಲೆಸಿರುತ್ತಾರೆ. ಹಳ್ಳಿಗೆ ಹೋಗಿರುತ್ತಾರೆ. ಆದರೆ, ಅವರ ಹೆಸರು ಮತಪಟ್ಟಿಯಲ್ಲಿ ಇರುತ್ತದೆ. ಲೆಕ್ಕಕ್ಕೆ ಇವರು ಇರುತ್ತಾರೆ. ಆದರೆ ಮತ ಚಲಾಯಿಸುವುದಿಲ್ಲ. ಇದರಿಂದ ಶೇಕಡವಾರು ಮತದಾನ ಕಡಿಮೆಯಾಗುತ್ತದೆ. ಇದನ್ನೆಲ್ಲ ತಪ್ಪಿಸಲು ಎಸ್‍ಐಆರ್ ನಡೆಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನೈಸ್‌ ರಸ್ತೆಯಲ್ಲಿ ಟೋಲ್‌ ಕಟ್ಟಬೇಡಿ: ಕುಮಾರಸ್ವಾಮಿ
ಕೆಪಿಎಸ್ಸಿ ನೇಮಕ ಹಗರಣ : ಮತ್ತೆ ಸಾಹುಕಾರ್‌ ಸಸ್ಪೆಂಡ್‌ಗೆ ಸಚಿವ ಸಂಪುಟ ಶಿಫಾರಸು