ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 (ಎಸ್‌ಐಆರ್) ಅಂಗವಾಗಿ ಕಾರವಾರ ನಗರದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಶುಕ್ರವಾರ ಪತ್ರ ಅಭಿಯಾನ ಆಯೋಜಿಸಲಾಗಿತ್ತು.
ಕಾರವಾರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 (ಎಸ್‌ಐಆರ್) ಅಂಗವಾಗಿ ನಗರದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಶುಕ್ರವಾರ ಪತ್ರ ಅಭಿಯಾನ ಆಯೋಜಿಸಲಾಗಿತ್ತು.
ವಸತಿ ನಿಲಯದ ವಿದ್ಯಾರ್ಥಿನಿಯರು ಪಾಲಕರಿಗೆ ಪತ್ರ ಬರೆದು ಕಳುಹಿಸುವ ಅಭಿಯಾನವನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಟಿ.ವೈ. ದಾಸನಕೊಪ್ಪ ಹಾಗೂ ತಹಸೀಲ್ದಾರ್ ಎ.ಎಸ್. ಪ್ರಸಾದ್ ಉದ್ಘಾಟಿಸಿದರು.
ನಂತರ ಮಾತನಾಡಿದ ಟಿ.ವೈ. ದಾಸನಕೊಪ್ಪ ಅವರು, ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಮತದಾನದ ಹಕ್ಕಿನ ಬಗ್ಗೆ ಮಕ್ಕಳಿಗೆ ಸರಳವಾಗಿ ಅರ್ಥವಾಗುವಂತೆ ಮಾರ್ಗದರ್ಶನ ಮಾಡಿ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ನೀಡಲಾಗುತ್ತಿರುವ ಎರಡು ಗಣತಿ ನಮೂನೆಗಳನ್ನು ಭರ್ತಿ ಮಾಡಿ, ಒಂದನ್ನು ಜು. 29ರ ರೊಳಗಾಗಿ ಬಿಎಲ್‌ಒ ಗಳಿಗೆ ಹಿಂದಿರುಗಿಸಿ, ಒಂದನ್ನು ತಮ್ಮ ಬಳಿ ಇರಿಸಿಕೊಳ್ಳುವಂತೆ ಎಲ್ಲ ಮಕ್ಕಳು ಪಾಲಕರಿಗೆ ಪತ್ರ ಬರೆಯುವಂತೆ ತಿಳಿಸಿ ಹೇಳಿದರು.
ತಹಸೀಲ್ದಾರ್ ಎ.ಎಸ್. ಪ್ರಸಾದ ಅವರು, ಮಕ್ಕಳು ಹೇಗೆ ಪತ್ರ ಆರಂಭಿಸಬೇಕು, ವಿಷಯವನ್ನು ಹೇಗೆ ಪ್ರಸ್ತಾಪಿಸಬೇಕು ಮತ್ತು ಎಸ್.ಐ.ಆರ್. ಪ್ರಾಮುಖ್ಯತೆ ಬಗ್ಗೆ ತಿಳಿ ಹೇಳಿದರು.
ತಾಪಂ ಯೋಜನಾ ಅಧಿಕಾರಿ ಚೋಳಪ್ಪ ಬಣಕಾರ, ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ಬಾಲೇಶ್ ಸಿದ್ದಯ್ಯನವರ, ವಾರ್ಡನ್ ಶಿವಲೀಲಾ ಘಂಟಾಮಠ ಇದ್ದರು.
ಯುವಜನತೆ ತಪ್ಪದೇ ಮತದಾನ ಮಾಡಿ: ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಯುವ ಜನತೆ ತಪ್ಪದೇ ಮತದಾನ ಮಾಡುವ ಮೂಲಕ, ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಹೇಳಿದರು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಅಂಗವಾಗಿ, ವಿದ್ಯಾರ್ಥಿಗಳಿಂದ ಪೋಷಕರಿಗೆ ಅರಿವು ಮೂಡಿಸಲು ಕಾರವಾರದ ಹಿಂದುಳಿದ ವರ್ಗಗಳ ಪೋಸ್ಟ್ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯ ಕಾರ್ಯದಲ್ಲಿ ಈಗಾಗಲೇ ಬಿಎಲ್‌ಒಗಳು ತಮ್ಮ ಮನೆಗಳಿಗೆ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಿದ್ದು, ಈ ಫಾರಂಗಳನ್ನು ಭರ್ತಿ ಮಾಡಿ, ಸಹಿ ಮಾಡಿ, ಕಡ್ಡಾಯವಾಗಿ ಹಿಂದಿರುಗಿಸುವಂತೆ ತಮ್ಮ ಪೋಷಕರಿಗೆ ಪತ್ರ ಬರೆಯುವಂತೆ ತಿಳಿಸಿದ ಅವರು, ಎಸ್‌ಐಆರ್‌ನ ಮಹತ್ವದ ಬಗ್ಗೆ ಅರಿವು ಮೂಡಿಸಿ, ಯುವಜನತೆ ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಅತ್ಯಗತ್ಯವಾಗಿರುವುದರಿಂದ 18 ವರ್ಷ ತುಂಬಿರುವ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳುವಂತೆ ತಿಳಿಸಿದರು.ವಸತಿ ನಿಲಯದಲ್ಲಿನ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪತ್ರ ಅಭಿಯಾನದಲ್ಲಿ ಭಾಗವಹಿಸಿ, ತಮ್ಮ ಪೋಷಕರಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ತಪ್ಪದೇ ಭಾಗವಹಿಸುವ ಕುರಿತಂತೆ ಪತ್ರ ಬರೆದರು.
ಜಿಪಂ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಮತ್ತು ವಸತಿ ನಿಲಯದ ವಾರ್ಡನ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.