ಎಸ್‌ಐಆರ್‌: 4 ಸಾವಿರ ವಿದ್ಯಾರ್ಥಿಗಳಿಂದ ಕೊಪ್ಪಳದಲ್ಲಿ ಬೃಹತ್ ಮಾನವ ಸರಪಳಿ

KannadaprabhaNewsNetwork |  
Published : Sep 19, 2026, 02:15 AM IST
ಫೋಟೋ  ಮತದಾರರ ಪಟ್ಟಿ ಪರಿಷ್ಕರಣೆಯ ಜಾಗೃತಿ ಕಾರ್ಯಕ್ರಮ  | Kannada Prabha

ಸಾರಾಂಶ

ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಜಾಗೃತಿಯ ಬೃಹತ್ ಮಾನವ ಸರಪಳಿ ನಿರ್ಮಿಸಲಾಗಿತ್ತು.

ಕೊಪ್ಪಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಮಹತ್ವದ ಹಕ್ಕಾಗಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ-ಯುವತಿಯೂ ಮತದಾರರ ಪಟ್ಟಿಗೆ ತಮ್ಮ ಹೆಸರು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಜಾಗೃತಿಯ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಸ್‌ಐಆರ್ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದ್ದು, ಸೆ. 19 ಮತ್ತು 20ರಂದು ಮತದಾರರು ತಮ್ಮ ಸಮೀಪದ ಮತಗಟ್ಟೆಗೆ ತೆರಳಿ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. 2026ರ ಅ. 1ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಸೇರಿದಂತೆ ಅರ್ಹ ಯುವಜನರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹರು ಸೆ. 23ರೊಳಗೆ ನಮೂನೆ-6 ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ತಮ್ಮ ಸಹೋದರ, ಸಹೋದರಿಯರು ಹಾಗೂ ಸುತ್ತಮುತ್ತಲಿನ ಯುವಜನರಿಗೆ ಮತದಾರರಾಗಿ ನೋಂದಾಯಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಸೆ. 19 ಮತ್ತು 20ರಂದು ಎಲ್ಲ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತಗಟ್ಟೆಗಳಲ್ಲಿ ಹಾಜರಿದ್ದು, ಸಾರ್ವಜನಿಕರಿಗೆ ಮಾಹಿತಿ ಹಾಗೂ ನೆರವು ನೀಡಲಿದ್ದಾರೆ. ಗ್ರಾಪಂ ಕಚೇರಿಗಳಲ್ಲೂ ಕರಡು ಮತದಾರರ ಪಟ್ಟಿ ಲಭ್ಯವಿದ್ದು, ಸಾರ್ವಜನಿಕರು ಪರಿಶೀಲಿಸಿಕೊಳ್ಳಬಹುದು ಎಂದರು.

ಭಾರತ ನಕ್ಷೆಯಲ್ಲಿ ಮಾನವ ಸರಪಳಿ: ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಲು ತಾಲೂಕು ಕ್ರೀಡಾಂಗಣದಲ್ಲಿ 200×120 ಅಡಿ ವಿಸ್ತೀರ್ಣದ ಭಾರತ ನಕ್ಷೆ ರೂಪಿಸಲಾಗಿತ್ತು. ಕೊಪ್ಪಳ ತಾಲೂಕಿನ ವಿವಿಧ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನಕ್ಷೆಯ ಸುತ್ತ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.

ಇದರ ಜತೆಗೆ ‘SIR-2026’ ಹಾಗೂ ‘ಸ್ವೀಪ್ ಕೊಪ್ಪಳ’ ಎಂಬ ಪದವನ್ನು ವಿದ್ಯಾರ್ಥಿಗಳು ಮಾನವ ಸರಪಳಿಯ ಮೂಲಕ ರೂಪಿಸಿದರು. ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಪ್ರತಿಜ್ಞಾವಿಧಿ ಬೋಧಿಸಿದರು. ಬೃಹತ್ ಮಾನವ ಸರಪಳಿಯ ದೃಶ್ಯಗಳನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಯಿತು.

ಜಿಪಂ ಯೋಜನಾ ನಿರ್ದೇಶಕ ಎಸ್.ಎಂ. ಕಾಂಬಳೆ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅನಂತಕುಮಾರ ಎ.ಎಸ್., ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಶೇಖರ ಪಾಟೀಲ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್ ಸಿದ್ಧತೆ: ಮಲ್ಲಿಕಾರ್ಜುನ ನಾಗಪ್ಪ
ಎಲ್ಲರಿಗೂ ಕಾನೂನು ದೊರೆಯಲಿ: ಹುಲ್ಲೂರ ಹೇಮಲತಾ ಬಸಪ್ಪ