ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪುರುಷ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಈರಮ್ಮ ವೀರಭದ್ರಪ್ಪ ದತ್ತಿನಿಧಿ ಆಶಯದಂತೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಕುರಿತು ಮಾತನಾಡಿದರು.
ಸರ್ ಎಂ.ವಿಶ್ವೇಶ್ವರಯ್ಯ ಅವರ ಸಾಧನೆ, ಶೋಧನೆ ಮತ್ತು ಆಸಕ್ತಿ ಇಡೀ ದೇಶವೇ ಕೊಂಡಾಡಿದೆ. ಕೆರೆ-ಕಟ್ಟೆಗಳನ್ನು ಕಟ್ಟುವುದು ಹೇಗೆ? ಅದಕ್ಕೆ ನೀರು ತುಂಬಿಸುವುದು ಹೇಗೆ? ಬರಡು ನಾಡಿನ ಭೂಮಿಯಲ್ಲಿಯೂ ಅತ್ಯಂತ ಕಡಿಮೆ ಖರ್ಚಿನಲ್ಲಿ ನೀರು ಉಳಿಸುವುದು ಹೇಗೆ ಎಂಬುದನ್ನು ತಮ್ಮ ಪ್ರಯೋಗಾತ್ಮಕ ಚಿಂತನೆಯಿಂದಲೇ ತೋರಿಸಿಕೊಟ್ಟರು ಎಂದರು.ಬಿಜಾಪುರ, ಹೈದರಾಬಾದ್ ಮುಂತಾದ ಕಡೆಗಳಲ್ಲಿ ತಮ್ಮ ಎಂಜಿನಿಯರಿಂಗ್ ವೃತ್ತಿಯನ್ನು ಮುಂದುವರಿಸಿ, ಅಸಾಧಾರಣ ಪಾಂಡಿತ್ಯ ಪಡೆದಿದ್ದರು. ಆ ಮೂಲಕ ನೀರು ಸಂಗ್ರಹಣೆ ಮತ್ತು ಸರಬರಾಜು ಮಾಡುವ ಕುರಿತು ಅದರ ವೈಶಿಷ್ಟ್ಯಗಳನ್ನು ಪರಿಚಯಿಸಿ, ಸರ್ಕಾರದ ಗಮನ ಸೆಳೆದಿದ್ದಾರೆ. ಅಂದಿನ ಮೈಸೂರು ಮಹಾರಾಜರು ಸರ್‌ಎಂವಿ ಕಾಯಕ ಪ್ರಭುತ್ವಕ್ಕೆ ಬೆರಗಾಗಿದ್ದರು ಎಂದು ಹೇಳಿದರು.
ಜಿ.ಶರಶ್ಚಂದ್ರ ರಾನಡೆ ಅವರು ಸ್ಥಾಪಿಸಿರುವ ದತ್ತಿನಿಧಿ ಆಶಯದಂತೆ ವರಕವಿ ಬೇಂದ್ರೆ ಕುರಿತು, ದೀಪಕ್ ಸಾಗರ್ ಮಾತನಾಡಿ, ಕನ್ನಡಕ್ಕೆ ಹೊಸ ಪದಗಳನ್ನು ನೀಡಿದ ಶಬ್ದ ಗಾರುಡಿಗ ದ.ರಾ. ಬೇಂದ್ರೆ. ತಮ್ಮ ಕಾವ್ಯಪ್ರಭೆ ಮೂಲಕವೇ ರಾಜ್ಯದ ಗಮನ ಸೆಳೆದರು. ಉತ್ತರ ಕರ್ನಾಟಕದ ಭಾಷೆಗೆ ತಾರಾ ಮೌಲ್ಯವನ್ನು ತಮ್ಮ ಕಾವ್ಯಗಳ ಮೂಲಕ ತಂದುಕೊಟ್ಟ ಮಹಾನ್ ಕವಿ ಬೇಂದ್ರೆ ಎಂದು ಬಣ್ಣಿಸಿದರು.
ಬೇಂದ್ರೆ ಅವರು ಬರೆದ ನರಬಲಿ ಪದ್ಯದ ವಿರುದ್ಧ ಬ್ರಿಟಿಷರು 9 ತಿಂಗಳ ಕಾಲ ಅವರನ್ನು ಹಿಂಡಲಗಾ ಜೈಲಿನಲ್ಲಿ ಇಟ್ಟಿದ್ದರು. ಅಲ್ಲದೇ, ಅವರಿಗೆ ಸರ್ಕಾರಿ ನೌಕರಿಯನ್ನು ನೀಡದಂತೆಯೂ ತಾಕಿತು ಮಾಡಿದ್ದರು. ಬದುಕಿನಲ್ಲಿ ಎಲ್ಲ ಕಷ್ಟಗಳನ್ನು ಅನುಭವಿಸಿ, ಬೇಂದ್ರೆ ತಮ್ಮ ಕಾವ್ಯಪ್ರಭೆ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಅತ್ಯಂತ ಎತ್ತರದಲ್ಲಿ ನಿಲ್ಲುತ್ತಾರೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಎಚ್.ಬಸವರಾಜಪ್ಪ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಎಂ.ಎಂ.ಸ್ವಾಮಿ ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಪುರುಷ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಈರಮ್ಮ ವೀರಭದ್ರಪ್ಪ ದತ್ತಿನಿಧಿ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ಉದ್ಘಾಟಿಸಿದರು.