ಕನ್ನಡಪ್ರಭ ವಾರ್ತೆ ಕಲಬುರಗಿವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ-2026ರ ಅನ್ವಯ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 2002ರ ಎಸ್.ಐ.ಆರ್. ಪಟ್ಟಿಯ ಮಾಹಿತಿ ನೀಡದ ಮತ್ತು ಸದರಿ ಪಟ್ಟಿಗೆ ದಾಖಲೆಗೆ ತಾಳೆಯಾಗದ 1,05,493 ಮತದಾರರಿಗೆ ಮತದಾರರ ನೋಂದಣಾಧಿಕಾರಿ/ ಸಹಾಯಕ ಮತದಾರರ ನೋಂದಣಾಧಿಕಾರಿ ಸಮಕ್ಷಮ ವಿಚಾರಣೆಗೆ ಹಾಜರಾಗಲು ನೋಟಿಸ್ ಸಿದ್ಧಪಡಿಸಲಾಗಿದೆ. ಇದರಲ್ಲಿ ಈಗಾಗಲೆ 59,389 ಮತದಾರರಿಗೆ ನೋಟಿಸ್ ತಲುಪಿಸಿದ್ದು, 46,111 ಜನರಿಗೆ ನೋಟಿಸ್ ನೀಡಬೇಕಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.ಕಳೆದ ಆ. 24 ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 18,49,585 ಜನ ಮತದಾರರಿದ್ದು, ಇದರಲ್ಲಿ 2002ರ ಎಸ್.ಐ.ಆರ್. ಪಟ್ಟಿಯ ಮಾಹಿತಿ ನೀಡದ 53,788 ಜನ ಮತದಾರರನ್ನು ನೋ ಮ್ಯಾಪಿಂಗ್ ಮತ್ತು 2002ರ ಎಸ್.ಐ.ಆರ್. ಪಟ್ಟಿಯ ದಾಖಲೆಗೆ ತಾಳೆಯಾಗದ 51,705 ಜನ ಮತದಾರರನ್ನು ಅನೋಮಲೀಸ್ ಎಂದು ಪರಿಗಣಿಸಲಾಗಿದೆ. ಇಂತಹ ಮತದಾರರಿಗೆ ಕಳೆದ ಸೆ.5 ರಿಂದ ವಿಚಾರಣೆ ಆರಂಭವಾಗಿದ್ದು, ಅ.12 ಕೊನೆಯ ವಿಚಾರಣೆ ದಿನವಾಗಿದೆ ಎಂದರು.ವಿಧಾನಸಭಾ ಕ್ಷೇತವಾರು ಪ್ರಕಾರ, ಅಫಜಲಪುರನಲ್ಲಿ 6,179, ಜೇವರ್ಗಿಯಲ್ಲಿ 5,005, ಚಿತ್ತಾಪೂರದಲ್ಲಿ 1,887, ಸೇಡಂನಲ್ಲಿ 3,516, ಚಿಂಚೋಳಿಯಲ್ಲಿ 3,625, ಗುಲಬರ್ಗಾ ಗ್ರಾಮೀಣದಲ್ಲಿ 6,400, ಗುಲಬರ್ಗಾ ದಕ್ಷಿಣದಲ್ಲಿ 13,816, ಗುಲಬರ್ಗಾ ಉತ್ತರದಲ್ಲಿ 14,070 ಹಾಗೂ ಆಳಂದನಲ್ಲಿ 4,891 ಮತದಾರರಿಗೆ ನೋಟಿಸ್ ನೀಡಲಾಗಿದೆ. ತ್ವರಿತ ವಿಚಾರಣೆ ನಡೆಸಿ ವಿಲೇವಾರಿಗೆ ಈಗಿರುವ 9 ಜನ ಎ.ಇ.ಆರ್.ಓ.ಗಳ ಜತೆಗೆ ಹೆಚ್ಚುವರಿಯಾಗಿ 67 ಜನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಡಿ.ಸಿ. ಇಕ್ರಂ ಶರೀಫ್ ಮಾಹಿತಿ ನೀಡಿದರು.ಎಸ್.ಐ.ಆರ್.ನಲ್ಲಿ ಮತಗಟ್ಟೆಗಳ ತರ್ಕಬದ್ದೀಕರಣದ ನಂತರ 61 ಹೊಸ ಮತಗಟ್ಟೆ ರಚನೆಯಾಗಿದ್ದು, ಇದಕ್ಕಾಗಿ 61 ಬಿಎಲ್‌ಓಗಳನ್ನು ಸಹ ನೇಮಕ ಮಾಡಲಾಗಿದೆ. ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರಲು ಬಯಸುವವರಿಗೆ ಸೆ. 19 ಮತ್ತು 20 ರಂದು ವಿಶೇಷ ಅಭಿಯಾನ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.ಹೆಸರು ಸೇರ್ಪಡೆಗೆ ನಮೂನೆ 6 ಸಲ್ಲಿಕೆ: ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ಮತದಾರರು ನಮೂನೆ-6 ಭರ್ತಿ ಮಾಡಿ ಅಥವಾ ಆನ್‌ಲೈನ್ ಮೂಲಕ ಅಗತ್ಯ ದಾಖಲಾತಿಯೊಂದಿಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರಲು ಈಗಲೂ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಪ್ರಕ್ರಿಯೆ ನಿರಂತರವಾಗಿರಲಿದೆ. ಸ್ವೀಕೃತ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಪಟ್ಟಿಯಲ್ಲಿ ಸೇರಿಸಲು ಕ್ರಮ ವಹಿಸಲಾಗುತ್ತದೆ. ಸೆ. 23ರೊಳಗೆ ಅರ್ಜಿ ಸಲ್ಲಿಸಿದಲ್ಲಿ ಅ.27 ರಂದು ಪ್ರಕಟಿಸಲಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳಲಿದೆ ಎಂದು ಡಿ.ಸಿ. ಇಕ್ರಂ ಶರೀಫ್ ತಿಳಿಸಿದರು.-------------