ಎಸ್‌ಐಆರ್ : ಜಿಬಿಎ ಕಚೇರಿಯಲ್ಲಿ ಜನರ ಪರದಾಟ

KannadaprabhaNewsNetwork |  
Published : Sep 19, 2026, 03:45 AM IST
GBA

ಸಾರಾಂಶ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ‘ನೋಟಿಸ್’ ಸ್ವೀಕರಿಸಿರುವ ನಗರದ ನಾಗರಿಕರು, ಮತದಾರರ ಪಟ್ಟಿಯಲ್ಲಿನ ಹೆಸರು ಸೇರಿದಂತೆ ಸಣ್ಣ ಪುಟ್ಟ ದೋಷಗಳನ್ನು ಸರಿಪಡಿಸಿಕೊಳ್ಳಲು ಕೂಡ ಪರದಾಡುತ್ತಿದ್ದಾರೆ.

 ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ‘ನೋಟಿಸ್’ ಸ್ವೀಕರಿಸಿರುವ ನಗರದ ನಾಗರಿಕರು, ಮತದಾರರ ಪಟ್ಟಿಯಲ್ಲಿನ ಹೆಸರು ಸೇರಿದಂತೆ ಸಣ್ಣ ಪುಟ್ಟ ದೋಷಗಳನ್ನು ಸರಿಪಡಿಸಿಕೊಳ್ಳಲು ಕೂಡ ಪರದಾಡುತ್ತಿದ್ದಾರೆ.

ಅನಗತ್ಯವಾಗಿ ಹಿರಿಯ ನಾಗರಿಕರನ್ನು ಕಚೇರಿಗೆ ಬರುವಂತೆ ನೋಟಿಸ್ ನೀಡುವ ಜೊತೆಗೆ ಗಂಟೆ ಗಟ್ಟಲೆ ಕಾಯಿಸುವುದು ಹಾಗೂ ಗುರುತಿನ ದಾಖಲೆಗಳನ್ನು ಒದಗಿಸಿ ಎನ್ನುವ ಷರತ್ತುಗಳು ನಾಗರಿಕರನ್ನು ಹೈರಾಣಾಗಿಸಿವೆ. ಚುನಾವಣಾ ಆಯೋಗದ ಈ ತಲೆನೋವಿನ ಪ್ರಕ್ರಿಯೆ ವಿರುದ್ಧ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾರದ ದಿನಗಳಂದು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಜಿಬಿಎ ಕಚೇರಿಗೆ ಅಲೆದಾಡಬೇಕಾಗಿದೆ ಎಂದು ಕಿಡಿಕಾರಿದ್ದಾರೆ.

2002ರ ಮತದಾರರ ಪಟ್ಟಿಯಲ್ಲಿನ ಹೆಸರು ಮತ್ತು ಹಾಲಿ ಇರುವ ಮತದಾರರ ಪಟ್ಟಿಯಲ್ಲಿನ ಹೆಸರು, ಉಪನಾಮ, ಪಾಲಕರ ಹೆಸರು, ವಿಳಾಸ, ವಯಸ್ಸು, ಸೇರಿದಂತೆ ಇನ್ನಿತರ ವಿವರಗಳಲ್ಲಿ ಒಂದು ಅಕ್ಷರ ವ್ಯತ್ಯಾಸವಾಗಿದ್ದರೂ ಅಂತವರಿಗೆ ನೋಟಿಸ್ ನೀಡಲಾಗಿದೆ. ಈ ಹಿನ್ನೆಲೆ ಸಣ್ಣ ಲೋಪವನ್ನು ಕೂಡ ಸರಿಪಡಿಸಿಕೊಳ್ಳಲು ನಾಗರಿಕರು ಇಡೀ ದಿನ ಕೆಲಸ ಬಿಟ್ಟು ಕಚೇರಿಗೆ ಅಲೆಯುವಂತಾಗಿದೆ.

ಎಸ್‌ಐಆರ್ ನೋಟಿಸ್ ಸಂಬಂಧಿಸಿದಂತೆ ವಿಚಾರಣೆ

ಎಸ್‌ಐಆರ್ ನೋಟಿಸ್ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿರುವ ಪದ್ಮನಾಭನಗರದ ಜಿಬಿಎ ಕಚೇರಿಗೆ ಬಂದಿದ್ದ 75 ವರ್ಷದ ಹಿರಿಯ ನಾಗರಿಕರೊಬ್ಬರು ಪ್ರಕ್ರಿಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ‘2002ರಲ್ಲಿನ ಮತದಾರರ ಪಟ್ಟಿ ಮತ್ತು ಈಗಿನ ಪಟ್ಟಿಯ ಹೆಸರಿನಲ್ಲಿ ವ್ಯತ್ಯಾಸವಿದೆ ಎಂದು ಹೇಳಿ ನೋಟಿಸ್ ನೀಡಿದ್ದರು. ದಾಖಲೆಗಳನ್ನು ತೆಗೆದುಕೊಂಡು ಬಂದು ಕಾಯುತ್ತಿದ್ದೇನೆ. ಹಿರಿಯ ನಾಗರಿಕರನ್ನು ಅಲೆದಾಡಿಸಿದರೆ ಅನಗತ್ಯ ಆತಂಕ ಮತ್ತು ತೊಂದರೆಯಾಗುತ್ತದೆ. ಈ ಹಿಂದೆ ಮನೆ ಮನೆಗೆ ಭೇಟಿ ನೀಡಿದಾಗಲೇ ಈ ಎಲ್ಲಾ ಪ್ರಕ್ರಿಯೆಗಳನ್ನು ಮಾಡಬಹುದಾಗಿತ್ತು. ಎರೆಡೆರೆಡು ಬಾರಿ ಪ್ರಕ್ರಿಯೆ ಮಾಡುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.

‘ದಾಖಲೆಗಳನ್ನು ಪರಿಶೀಲನೆ ಮಾಡುವ ಜೊತೆಗೆ ಜೆರಾಕ್ಸ್ ಪ್ರತಿ ತೆಗೆದುಕೊಂಡು ಬನ್ನಿ ಎನ್ನುತ್ತಾರೆ. ಈಗ ನಾನು ಜೆರಾಕ್ಸ್ ಅಂಗಡಿ ಹುಡುಕಿಕೊಂಡು ಎಲ್ಲಿಗೆ ಹೋಗಲಿ’ ಎಂದು 71 ವರ್ಷದ ಮತ್ತೊಬ್ಬರು ಪ್ರಶ್ನಿಸಿದರು. ‘ನನ್ನ ಪತ್ನಿಯ ಹೆಸರಿನಲ್ಲಿ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಎಲ್‌ಐಸಿ ದಾಖಲೆ ಬಿಟ್ಟರೆ ಬೇರಾವುದೇ ಗುರುತಿನ ದಾಖಲೆ ಆಕೆಯ ಬಳಿ ಇಲ್ಲ. ಆಕೆ 10ನೇ ತರಗತಿಯೂ ವ್ಯಾಸಂಗ ಮಾಡಿಲ್ಲ. ಎಲ್‌ಐಸಿ ದಾಖಲೆಗಳ ಆಧಾರದ ಮೇಲೆ ಹೆಸರಿನ ವ್ಯತ್ಯಾಸ ಸರಿಪಡಿಸಿಕೊಡಬೇಕು ಎಂದು ಕೇಳಿ ನನ್ನ ಸರತಿಗಾಗಿ ಕಾಯುತ್ತಿದ್ದೇನೆ’ ಎಂದು ಮತ್ತೊಬ್ಬ ನಾಗರಿಕರು ಹೇಳಿದರು. ನೋಟಿಸ್ ಹಿನ್ನೆಲೆ ಶುಕ್ರವಾರ ಪದ್ಮನಾಭನಗರ ಜಿಬಿಎ ಕಚೇರಿಗೆ ಬಂದವರ ಪೈಕಿ ಹೆಚ್ಚಿನವರು ಹಿರಿಯ ನಾಗರಿಕರೇ ಆಗಿದ್ದರು.

ಮನೆಗೆ ಭೇಟಿ ನೀಡಬೇಕು:

ಓಡಾಡಲು ಸಾಧ್ಯವಾಗದ ವೃದ್ಧರು, ವಿಶೇಷ ಚೇತನರ ಮತದಾರರ ಪಟ್ಟಿಯಲ್ಲಿನ ಹೆಸರು ದೃಢೀಕರಣ ಮಾಡಿಕೊಳ್ಳಲು ಅವರ ಪರವಾಗಿ ಮಕ್ಕಳು ಅಥವಾ ಪಾಲಕರು ಹೋಗಲು ಅವಕಾಶವಿದೆ. ವಿಶೇಷ ಪ್ರಕರಣಗಳಲ್ಲಿ ಬಿಎಲ್‌ಒಗಳೇ ಮತದಾರರ ಮನೆಗೆ ಭೇಟಿ ನೀಡಬೇಕು ಎನ್ನುವ ನಿಯಮವಿದೆ. ಆದರೆ, ಕಚೇರಿಗಳಿಗೆ ನೋಟಿಸ್ ಸ್ವೀಕರಿಸಿದ ಸಾಕಷ್ಟು ಜನ ಬರುತ್ತಿರುವ ಕಾರಣ ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡಲು ಆಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಸಮಯ ಮಾಡಿಕೊಂಡು ಭೇಟಿ ನೀಡಲಾಗುತ್ತದೆ ಎಂದು ಬಿಎಲ್‌ಒ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಎಸ್‌ಸಿಡಿಸಿಸಿ ಬ್ಯಾಂಕ್‌ಗೆ 24ನೇ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ
ತಾಪಮಾನ ಹೆಚ್ಚಳ : ಹೀಟ್‌ಸ್ಟ್ರೋಕ್ ಹತೋಟಿಗೆ ಇಂದಿರಾ ಕ್ಯಾಂಟಿನ್‌ಗಳೇ ಕೂಲಿಂಗ್ ಸೆಂಟರ್