ವಿದ್ಯಾರ್ಥಿ ಆರೋಗ್ಯ ಬಂಧು ಪುಸ್ತಕ ಲೋಕಾರ್ಪಣೆ

KannadaprabhaNewsNetwork |  
Published : Sep 19, 2026, 03:15 AM IST
ಚಿತ್ರ 18ಬಿಡಿಆರ್55 | Kannada Prabha

ಸಾರಾಂಶ

ವಸತಿ ನಿಲಯಗಳ 25 ಸಾವಿರ ವಿದ್ಯಾರ್ಥಿಗಳ ಆರೋಗ್ಯ ಸಮಗ್ರ ಮೇಲ್ವಿಚಾರಣೆಗಾಗಿ ರೂಪಿಸಲಾಗಿರುವ ವಿದ್ಯಾರ್ಥಿ ಆರೋಗ್ಯ ಬಂಧು ಪುಸ್ತಕವನ್ನು ಗುರುವಾರ ಲೋಕಾರ್ಪಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ವಸತಿ ನಿಲಯಗಳ 25 ಸಾವಿರ ವಿದ್ಯಾರ್ಥಿಗಳ ಆರೋಗ್ಯ ಸಮಗ್ರ ಮೇಲ್ವಿಚಾರಣೆಗಾಗಿ ರೂಪಿಸಲಾಗಿರುವ ವಿದ್ಯಾರ್ಥಿ ಆರೋಗ್ಯ ಬಂಧು ಪುಸ್ತಕವನ್ನು ಗುರುವಾರ ಲೋಕಾರ್ಪಣೆ ಮಾಡಲಾಯಿತು.

ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಂಸದ ಸಾಗರ ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರೊಂದಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಟ್ಟೆ ಮಾಧವ ವಿಠ್ಠಲರಾವ್ ಅವರು ಮಾಹಿತಿ ನೀಡಿ, ಬೀದರ್‌ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಈ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ತಿಂಗಳು ಆರೋಗ್ಯ ತಪಾಸಣೆ ನಡೆಸುವ ವಿಶೇಷ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆರೋಗ್ಯ ಇಲಾಖೆಯ ಸಹಯೋಗ ದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ತಿಂಗಳು ವೈದ್ಯರ ತಂಡಗಳು ಸಂಬಂಧಿಸಿದ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಲಿವೆ. ವಿದ್ಯಾರ್ಥಿಗಳ ದೈಹಿಕ ಆರೋಗ್ಯ, ಕಂಡುಬರುವ ಆರೋಗ್ಯ ಸಮಸ್ಯೆಗಳು ಸೇರಿದಂತೆ ಅಗತ್ಯವಿರುವ ಆರೋಗ್ಯ ಸಂಬಂಧಿತ ವಿಷಯಗಳನ್ನು ವೈದ್ಯರು ಪರಿಶೀಲಿಸಲಿದ್ದಾರೆ.

ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಯಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ, ತಪಾಸಣೆ ನಡೆಸಿದ ವೈದ್ಯರು ಸಮಸ್ಯೆಯ ವಿವರ ಹಾಗೂ ಅಗತ್ಯ ವೈದ್ಯಕೀಯ ಸಲಹೆಯನ್ನು ‘ವಿದ್ಯಾರ್ಥಿ ಆರೋಗ್ಯ ಬಂಧು’ ಪುಸ್ತಕದಲ್ಲಿ ದಾಖಲಿಸಲಿದ್ದಾರೆ. ಇದರಿಂದ ವಿದ್ಯಾರ್ಥಿಯ ಆರೋಗ್ಯ ಸಮಸ್ಯೆಯ ದಾಖಲೆ ಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಹಾಗೂ ಮುಂದಿನ ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಅದರ ಪ್ರಗತಿಯನ್ನು ಗಮನಿಸಲು ಅನುಕೂಲವಾಗಲಿದೆ.

‘ವಿದ್ಯಾರ್ಥಿ ಆರೋಗ್ಯ ಬಂಧು’ ಪುಸ್ತಕವು ವಿದ್ಯಾರ್ಥಿಗಳ ಆರೋಗ್ಯದ ದಾಖಲಾತಿ, ಮೇಲ್ವಿಚಾರಣೆ ಹಾಗೂ ಅಗತ್ಯ ಪರಿಹಾರ ಕ್ರಮಗಳನ್ನು ಒಂದೇ ವ್ಯವಸ್ಥೆಯಡಿ ತರಲು ಸಹಕಾರಿಯಾಗಲಿದೆ ಎಂದು ಜಿ.ಪಂ ಸಿಇಒ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ಕಟ್ಟಲು ಅನೇಕರು ತ್ಯಾಗ, ರಕ್ತ ಅರ್ಪಿಸಿದ್ದಾರೆ: ಚಕ್ರವರ್ತಿ ಸೂಲಿಬೆಲೆ
ಯೋಗೀಶ್‌ ಗೌಡ ಹತ್ಯೆ ಪ್ರಕರಣದ ಏಳು ಆರೋಪಿಗಳಿಗೆ ಜಾಮೀನು