ಶಾಸಕ ವಿನಯ್‌ ಕುಲಕರ್ಣಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಇತರೆ ಏಳು ಆರೋಪಿಗಳು ಷರತ್ತು ಬದ್ಧ ಜಾಮೀನು ನೀಡಿ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು: ಶಾಸಕ ವಿನಯ್‌ ಕುಲಕರ್ಣಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಇತರೆ ಏಳು ಆರೋಪಿಗಳು ಷರತ್ತು ಬದ್ಧ ಜಾಮೀನು ನೀಡಿ ಹೈಕೋರ್ಟ್‌ ಆದೇಶಿಸಿದೆ.

ಏಳು ಮಂದಿ ಆರೋಪಿಗಳು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ

ಪ್ರಕರಣದಲ್ಲಿ ತಮಗೆ ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಅಮಾನತ್ತಿನಲ್ಲಿಟ್ಟು, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ವಿಕ್ರಂ ಬಳ್ಳಾರಿ (37) ಹಾಗೂ ಕೀರ್ತಿಕುಮಾರ ಬಸವರಾಜ ಕುರುಹಟ್ಟಿ ಸೇರಿ ಏಳು ಮಂದಿ ಆರೋಪಿಗಳು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮದ್‌ ನವಾಜ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಪ್ರಕರಣದಲ್ಲಿ ಮೇಲ್ಮನವಿದಾರ ಆರೋಪಿಗಳಿಗೆ ಜನಪ್ರತಿನಿಧಿಗಳ ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಮೇಲ್ಮನವಿಗಳು ತೀರ್ಮಾನವಾಗುವ ತನಕ ವಿಚಾರಣಾ ನ್ಯಾಯಾಲಯದ ಆದೇಶ ಅಮಾನತಿನಲ್ಲಿರಿಸಲಾಗಿದೆ.

ಆರೋಪಿಗಳಿಗೆ ಷರತ್ತುಬದ್ಧ ಜಾಮೀನಿನ ಮೇಲೆ ಮೇಲೆ ಬಿಡುಗಡೆ ಆದೇಶ ಮಾಡಲಾಗುತ್ತಿದೆ. ಮೇಲ್ಮನವಿದಾರರು ತಲಾ 5 ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು. ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ಬಿಟ್ಟು ಹೋಗಬಾರದು. ಹೈಕೋರ್ಟ್ ಹಾಗೂ ವಿಶೇಷ ನ್ಯಾಯಾಲಯ ನಿರ್ದೇಶಿಸಿದಾಗ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಷರತ್ತು ವಿಧಿಸಿದೆ.ವಿಕ್ರಂ ಬಳ್ಳಾರಿ (ಎ–2) ಕೀರ್ತಿಕುಮಾರ ಬಸವರಾಜ ಕುರುಹಟ್ಟಿ (ಎ–3), ಸಂದೀಪ್‌ ಸೌದತ್ತಿ (ಎ–4), ವಿನಾಯಕ ಕಟಗಿ (ಎ–5), ಮಹಾಬಲೇಶ್ವರ ಹೊಂಗಲ್‌ (ಎ–6), ಸಂತೋಷ ಸವದತ್ತಿ (ಎ–7) ಮತ್ತು ವಿಕಾಸ ಕಲಬುರಗಿ (ಎ–18) ಜಾಮೀನು ಪಡೆದ ಆರೋಪಿಗಳು.

ಪ್ರಕರಣದ ಹಿನ್ನೆಲೆ: 

ಯೋಗೀಶಗೌಡ ಅವರನ್ನು 2016ರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳ ಪೈಕಿ 17 ಜನರನ್ನು ಅಪರಾಧಿಗಳು ಎಂದು ತೀರ್ಮಾನಿಸಿದ್ದ, ನಗರ ಜನಪ್ರತಿನಧಿಗಳ ವಿಶೇಷ ನ್ಯಾಯಾಲಯ 2026ರ ಏ.17ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ ಕುಲಕರ್ಣಿ ಸಹ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಅವರ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿ ಇತ್ತೀಚೆಗೆ ಆದೇಶಿಸಿತ್ತು.