ಇಲ್ಲಿನ ಪಡೀಲ್‌ ಪ್ರಜಾಸೌಧ ಜಿಲ್ಲಾಧಿಕಾರಿಯಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಂಪುಟದ ಸಚಿವರು ಡಬಲ್‌ ಡೆಕ್ಕರ್‌ ತೆರೆದ ಬಸ್‌ನಲ್ಲಿ ಪ್ರಯಾಣಿಸಿ ರೋಡ್‌ ಶೋ ನಡೆಸಿದರು.

ಮಂಗಳೂರು : ಇಲ್ಲಿನ ಪಡೀಲ್‌ ಪ್ರಜಾಸೌಧ ಜಿಲ್ಲಾಧಿಕಾರಿಯಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಂಪುಟದ ಸಚಿವರು ಡಬಲ್‌ ಡೆಕ್ಕರ್‌ ತೆರೆದ ಬಸ್‌ನಲ್ಲಿ ಪ್ರಯಾಣಿಸಿ ರೋಡ್‌ ಶೋ ನಡೆಸಿದರು.

ಕದ್ರಿ ದೇವಸ್ಥಾನದಿಂದ ನಗರದ ಕೆಪಿಟಿ ಸರ್ಕ್ಯೂಟ್‌ ಹೌಸ್‌ವರೆಗೆ ಸಚಿವರು ಕೆಎಸ್‌ಆರ್‌ಟಿಸಿ ಐರಾವತ ಬಸ್‌ನಲ್ಲಿ ಪ್ರಯಾಣಿಸಿದರು. ಬಳಿಕ, ಮುಖ್ಯಮಂತ್ರಿ ಹಾಗೂ ಸಚಿವರು ಸರ್ಕ್ಯೂಟ್‌ ಹೌಸ್‌ನಿಂದ ಪಂಪ್‌ವೆಲ್‌ ಮಾರ್ಗವಾಗಿ ಪ್ರಜಾಸೌಧಕ್ಕೆ ಅಂಬಾರಿ ಡಬಲ್‌ ಡೆಕ್ಕರ್‌ ತೆರೆದ ಬಸ್‌ನಲ್ಲಿ ಸಂಚರಿಸಿದರು.

ಪಟಾಕಿ ಸಿಡಿಸಿ, ಜಯಘೋಷ ಕೂಗಿ ಸಂಭ್ರಮ

ಪಂಪ್‌ವೆಲ್‌ಗೆ ಬಸ್‌ ತಲುಪುತ್ತಲೇ ಅಲ್ಲಿ ಸೇರಿದ್ದ ಜನರು ಪಟಾಕಿ ಸಿಡಿಸಿ, ಜಯಘೋಷ ಕೂಗಿ ಸಂಭ್ರಮಿಸಿದರು. ಪಂಪ್‌ವೆಲ್‌ನಿಂದ ರೋಡ್‌ ಶೋ ಆರಂಭಗೊಂಡಿತು. ರಸ್ತೆಯ ಎರಡೂ ಬದಿಯಲ್ಲಿ, ಕಟ್ಟಡದ ಮೇಲೆ, ಪಂಪ್‌ವೆಲ್‌ ಮೇಲ್ಸೇತುವೆ ಮೇಲೆ ನಿಂತಿದ್ದ ಸಾವಿರಾರು ಜನರು ಮುಖ್ಯಮಂತ್ರಿ, ಸಚಿವರ ಹೆಸರು ಕೂಗಿ ಘೋಷಣೆ ಮೊಳಗಿಸಿದರು. ಚೆಂಡೆ, ವಾದ್ಯ, ನಾಸಿಕ್‌ ಬ್ಯಾಂಡ್‌, ಹುಲಿ ಕುಣಿತ, ಗೊಂಬೆ ಕುಣಿತ, ಕೀಲು ಕುದುರೆ, ಪುಷ್ಪಾರ್ಚನೆಗಳು ಮೆರವಣಿಗೆ ವೇಳೆ ಗಮನ ಸೆಳೆದವು.

ತೆರೆದ ವಾಹನದಲ್ಲಿ ನಿಂತಿದ್ದ ಸಿಎಂ

ತೆರೆದ ವಾಹನದಲ್ಲಿ ನಿಂತಿದ್ದ ಸಿಎಂ ಹಾಗೂ ಸಚಿವರು ಭಾರೀ ಬಿಸಿಲಿನ ನಡುವೆಯೂ ಎರಡೂ ಭಾಗದ ಜನರತ್ತ ಕೈ ಬೀಸುತ್ತಾ ಸಾಗಿದರು. ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಜನರಿಗೆ ನಿಲ್ಲಲು ಸ್ಟಾಲ್‌ ರೀತಿಯ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯಮಂತ್ರಿ ಮತ್ತು ಸಚಿವರ ತಂಡ ಪ್ರಜಾಸೌಧಕ್ಕೆ ಆಗಮಿಸುತ್ತಲೇ ಅಲ್ಲಿ ನೆರೆದಿದ್ದ ಜನರು ಜಯಘೋಷ ಕೂಗಿದರು. ಪ್ರಜಾಸೌಧವನ್ನು ವಿಶೇಷ ರೀತಿಯಲ್ಲಿ ಹೂವುಗಳಿಂದ ಅಲಂಕರಿಸಲಾಗಿತ್ತು. ಮುಖ್ಯಮಂತ್ರಿ ಹಾಗೂ ಸಚಿವರು ಸಂಪುಟ ಸಭೆಗೆ ತೆರಳುವ ಮುನ್ನ ಪ್ರಜಾಸೌಧದ ಎದುರು ಗ್ರೂಪ್‌ ಫೋಟೋ ತೆಗೆಸಿಕೊಂಡರು. ಬಳಿಕ, ಸಿಎಂ ಅವರು ಪ್ರಜಾಸೌಧದ ಆವರಣದಲ್ಲಿ ಗಿಡ ನೆಟ್ಟು ನೀರುಣಿಸಿದರು. ಮುಖ್ಯಮಂತ್ರಿ ಅವರು ಪ್ರಜಾಸೌಧಕ್ಕೆ ಬರುತ್ತಲೇ ನಾಯಕರು, ಕಾರ್ಯಕರ್ತರು, ಮುಖಂಡರು ಹಾರ ಹಾಕಿ, ಹೂವು ನೀಡಿ ಸ್ವಾಗತಿಸಿದರು.