ಕನ್ನಡಪ್ರಭ ವಾರ್ತೆ ಹೊನ್ನಾವರ
ಕಾನೂನಿನಂತೆ ನಮ್ಮ ಕೆಲಸ ನಾವು ನಿಭಾಯಿಸುವಲ್ಲಿ ಬದುಕಿನ ಸಾರ್ಥಕತೆಯಿದ್ದು ಅರಣ್ಯ ಭೂಮಿಯನ್ನು ಅತಿಕ್ರಮಣದಾರರಿಂದ ರಕ್ಷಿಸುವ ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ಅರಣ್ಯ ಇಲಾಖೆಯ ಸಿಬ್ಬಂದಿ ಪರಿಸರ ಹಾಗೂ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ ಸಿ.ಕೆ. ಇಲಾಖೆಯ ಸಿಬ್ಬಂದಿಗೆ ಸೂಚಿಸಿದರು.ಅರಣ್ಯ ಇಲಾಖೆ, ಕಾಮಕೋಡ ದುರ್ಗಮ್ಮ ದೇವಸ್ಥಾನ, ಎಸ್.ಡಿ.ಎಂ.ಕಾಲೇಜಿನ ಎನ್.ಎಸ್.ಎಸ್.ಘಟಕ, ಬೇಣ್ಮನೆ ಶಾಲೆ ಹಾಗೂ ಕಾಮಕೋಡ ಪರಿಸರಕೂಟ ಇವುಗಳ ಸಹಯೋಗದಲ್ಲಿ ಕಾಮಕೋಡ ದೇವರಕಾಡಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಕಾಳಪ್ಪನವರ ಮಾತನಾಡಿ, ಪ್ರಾದೇಶಿಕ ಅಗತ್ಯಕ್ಕೆ ಅನುಗುಣವಾಗಿ ಅರಣ್ಯ ಬೆಳೆಸಬೇಕಿದ್ದು ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ ರಕ್ಷಣೆ ಅಗತ್ಯ ಎಂದು ಹೇಳಿದರು.ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರ ಕುಮಟ ಘಟಕದ ವಿಜ್ಞಾನಿ ಡಾ. ಎಂ.ಡಿ. ಸುಭಾಷ ಚಂದ್ರನ್ ಅವರನ್ನು ಸನ್ಮಾನಿಸಲಾಯಿತು.
ಡಾ. ಎಂ.ಡಿ. ಸುಭಾಷ ಚಂದ್ರನ್ ಮಾತನಾಡಿ, ಕಾಮಕೋಡ ದೇವರಕಾಡು ಪಾರಂಪರಿಕ ತಾಣವೆಂದು ಘೋಷಿಸಲ್ಪಡುವ ಎಲ್ಲ ಅರ್ಹತೆ ಪಡೆದಿದ್ದು, ಈ ಕುರಿತಂತೆ ಜೀವವೈವಿಧ್ಯ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ನೆರವು ನೀಡುತ್ತೇನೆ ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿ ಪ್ರಮೋದ ನಾಯಕ ಬಾವಿಕೇರಿ, ಮುಖ್ಯ ಶಿಕ್ಷಕ ವಿಘ್ನೇಶ್ವರ ಭಟ್ಟ ಮಾತನಾಡಿದರು.
ಉಪ ವಲಯ ಅರಣ್ಯಾಧಿಕಾರಿ ಜಗನ್ನಾಥ ಗೌಡ, ಕಾಮಕೋಡ ಪರಿಸರ ಕೂಟ ಹಾಗೂ ದೇವಸ್ಥಾನ ಸಮಿತಿಯ ಮಾದೇವ ನಾಯ್ಕ, ಎಚ್.ಎಲ್. ಗುರುದತ್ತ, ಪ್ರಭಾಕರ ಭಟ್ಟ, ಸುಬ್ರಹ್ಮಣ್ಯ ಹೆಗಡೆ, ಗಾಯತ್ರಿ ನಾಯ್ಕ ಭಾಗವಹಿಸಿದರು.ಕಾಮಕೋಡ ಪರಿಸರ ಕೂಟದ ಅಧ್ಯಕ್ಷ ಡಾ. ಎಂ.ಜಿ. ಹೆಗಡೆ ಸ್ವಾಗತಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ನಾಗರಾಜ ಹೆಗಡೆ ಅಪಗಾಲ ವಂದಿಸಿದರು.
ಹಲಸು, ಹೊನ್ನೆ, ಹತ್ತಿ ಮೊದಲಾದ ಗಿಡಗಳನ್ನು ದೇವರಕಾಡಿನಲ್ಲಿ ನಾಟಿ ಮಾಡಲಾಯಿತು. ಅಧಿಕಾರಿಗಳು ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು.