ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಇರುವ ಅನಗತ್ಯ ಹೆಸರುಗಳನ್ನು ಪಟ್ಟಿಯಿಂದ ತೆಗೆಯುವ ಸಲುವಾಗಿ ಪರಿಷ್ಕರಣೆ ಅಗತ್ಯ. ಇದಕ್ಕೆ ಅಗತ್ಯ ಸಮಯ ನೀಡದೇ ಬಿಜೆಪಿ ಜಾರಿಗೆ ತಂದಿರುವ ಎಸ್‍ಐಆರ್ ಉದ್ದೇಶ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದಾಗಿದೆ. ಈ ಪ್ರಯೋಗದಿಂದ ಈಚೆಗೆ ದೇಶದಲ್ಲಿ ನಡೆದಿರುವ ಬಿಹಾರ ಮತ್ತು ಪಶ್ಷಿಮ ಬಂಗಾಳದಲ್ಲಿ ಬಿಜೆಪಿ ರಾಜಕೀಯ ಲಾಭ ಗಳಿಸಿದ್ದು ಕರ್ನಾಟಕದಲ್ಲೂ ಈ ಪ್ರಯತ್ನವನ್ನು ಮುಂದುವರಿಸಿದೆ. ಪಶ್ಷಿಮ ಬಂಗಾಳದಲ್ಲಿ 27 ಲಕ್ಷ ಮಂದಿ ಮತದಾನದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಹೂಡಿರುವ ಈ ತಂತ್ರಗಾರಿಕೆಯಿಂದ ಆಗುವ ಅನಾಹುತದ ಬಗ್ಗೆ ಅನಕ್ಷರಸ್ಥರು ಮಾತ್ರವಲ್ಲದೇ ವಿದ್ಯಾವಂತರಿಗೂ ಸರಿಯಾದ ಮಾಹಿತಿ ಇಲ್ಲದ ಕಾರಣ ಮತದಾನದಿಂದ ವಂಚಿತರಾಗುವುದು ಖಚಿತ. ಈ ನೆಲದಲ್ಲಿ ಹುಟ್ಟಿದವರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದೇ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಉದ್ದೇಶವಾಗಿದ್ದು ಬಿಜೆಪಿ ಸರ್ವಾಧಿಕಾರಿ ಧೋರಣೆಯ ತಂತ್ರಗಾರಿಕೆಯನ್ನು ರಾಜ್ಯದ ಮತದಾರರು ಅರ್ಥಮಾಡಿಕೊಳ್ಳಬೇಕಿದೆ ಎಂದರು.ಜಾತಿಧರ್ಮದ ಭೇದವಿಲ್ಲದೇ ಈ ದೇಶದಲ್ಲಿ ಹುಟ್ಟಿದವರಿಗೆ ಚಲಾಯಿಸುವ ಹಕ್ಕಿದೆ. ಜೂನ್ 30 ನೇ ತಾರೀಕಿನಿಂದ ಆಗಸ್ಟ್ 5 ರೊಳಗೆ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸದವರಿಗೆ ಮತದಾನದ ಹಕ್ಕೇ ಇರುವುದಿಲ್ಲ. ಮತ್ತು ಸರ್ಕಾರದ ಸವಲತ್ತುಗಳಿಂದಲೂ ವಂಚಿತರಾಗುತ್ತಾರೆ. ಆಗಸ್ಟ್ 5 ನೇ ತಾರೀಕಿನ ಒಳಗೆ ಅರ್ಜಿ ಸಲ್ಲಿಸಬೇಕು ಅಥವಾ ಸಮೀಕ್ಷೆಗಾಗಿ ಮನೆಗಳಿಗೆ ಬರುವ ಬಿಎಲ್‍ಓಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಅವೈಜ್ಞಾನಿಕವಾದ ಈ ಪರಿಷ್ಕರಣೆಯ ಬಗ್ಗೆ ಸುಪ್ರೀಂ ಕೋರ್ಟ್ ಕೂಡಾ ಒಪ್ಪಿಗೆ ನೀಡಿದ್ದು ಜನಜಾಗೃತಿಗೊಳಿಸುವುದೊಂದೆ ಪರಿಹಾರ ಮಾರ್ಗವಾಗಿದೆ ಎಂದೂ ಹೇಳಿದರು.
ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರುಗಳಾದ ಶಬನಂ ಮಂಜುಳಾ ನಾಗೇಂದ್ರ ಹಾಗೂ ವಿಲಿಯಂ ಮಾರ್ಟಿಸ್ ಇದ್ದರು.