ಗದಗ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಸೂಚಿಸಿದರು.
ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಪೈಕಿ ಇಬ್ಬರನ್ನು ಕ್ಯಾಂಪಸ್ ಅಂಬಾಸಿಡರ್ಸ್ ಆಗಿ ನೇಮಕ ಮಾಡಲಾಗುವುದು. ಚುನಾವಣೆ ಆಯೋಗ ನೀಡಿರುವ ಶಾಲಾ-ಕಾಲೇಜುಗಳಲ್ಲಿ ಮತದಾನ ಜಾಗೃತಿ ಮತ್ತು ಕ್ಯಾಲೆಂಡರ್ ಆಫ್ ಇವೆಂಟ್ಸ್ ಕ್ಯಾಂಪಸ್ ಇವೆಂಟ್ಸ್ ಅಡಿಯಲ್ಲಿ ಜೂ. 30ರ ಒಳಗಾಗಿ ಎಸ್‌ಐಆರ್‌ಗೆ ಸಂಬಂಧಿಸಿದ 30 ನಿಮಿಷಗಳ ಚಟುವಟಿಕೆಯನ್ನು ಎಲ್ಲ ಕ್ಲಬ್‌ಗಳಲ್ಲಿ ಕಡ್ಡಾಯವಾಗಿ ಹಮ್ಮಿಕೊಂಡು, ಅದರ ಫೋಟೋ ಮತ್ತು ವಿವರಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ತಿಳಿಸಿದರು.
ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಸಿಬ್ಬಂದಿ ಒಳಗೊಂಡಂತೆ ಸ್ವತಂತ್ರ ಫೋರಂ ರಚಿಸಿ, ಸ್ವೀಪ್ ಹಾಗೂ ಎಸ್‌ಐಆರ್ ಸಂಬಂಧಿತ ಆಡಿಯೋ, ವಿಡಿಯೋ ಮತ್ತು ಜಾಗೃತಿ ಸಾಮಗ್ರಿಗಳನ್ನು ಪ್ರಸಾರ ಮಾಡಲು ಕ್ರಮಕೈಗೊಳ್ಳಬೇಕು. ಸೋಮವಾರದ ಒಳಗಾಗಿ ಇದರ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದರು.ಚುನಾವಣಾ ಸಾಕ್ಷರತೆಯನ್ನು ತಳಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಪ್ರತಿ ಬೂತ್ ಮಟ್ಟದಲ್ಲಿ ಚುನಾವಣಾ ಪಾಠಶಾಲೆ ರಚಿಸಲಾಗುವುದು. ಇದರ ನೋಡಲ್ ಅಧಿಕಾರಿಯಾಗಿ ಆಯಾ ಭಾಗದ ಬಿಎಲ್‌ಒ ಕಾರ್ಯನಿರ್ವಹಿಸಲಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸ್ಥಳೀಯ ಯುವಕರು, ರೈತರು, ಮಹಿಳೆಯರು ಮತ್ತು ಸಮುದಾಯದ ಇತರ ಸದಸ್ಯರನ್ನು ಈ ಸಮಿತಿಯಲ್ಲಿ ಒಳಗೊಳ್ಳುವ ಮೂಲಕ ವ್ಯಾಪಕ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಪ್ರಸ್ತುತ ಒಟ್ಟು 536 ಇಎಲ್‌ಸಿ ಕ್ಲಬ್‌ಗಳಿದ್ದು, ಇದರಲ್ಲಿ 325 ಶಾಲೆ, 101 ಪಿಯು ಬೋರ್ಡ್, 57 ಕಾಲೇಜು ಹಾಗೂ ಐಟಿಐ ಮತ್ತು ಡಿಪ್ಲೊಮಾ ಸೇರಿದಂತೆ 53 ಸ್ವತಂತ್ರ ಸಂಸ್ಥೆಗಳು ಒಳಗೊಂಡಿವೆ. ಇವುಗಳಲ್ಲಿ ಸದ್ಯ 402 ಕ್ಲಬ್ ಸಕ್ರಿಯವಾಗಿದ್ದು, ಇನ್ನುಳಿದ 134 ಕ್ಲಬ್ ಶೀಘ್ರದಲ್ಲೇ ಸಕ್ರಿಯಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಕೋಶದ ಬಸವನಗೌಡ ಕೊಟೂರು, ಅಧಿಕಾರಿಗಳಾದ ಡಾ. ನಂದಾ ಹಣಬರಹಟ್ಟಿ, ರಾಧಾ ಮಣ್ಣೂರು, ಆರ್.ಎಸ್. ಬುರಡಿ, ಎಸ್.ಬಿ. ಮಾಸನಾಯಕ, ಮಹೆಬೂಬ್ ತುಂಬರಮಟ್ಟಿ, ಅಮಿತ ಬಿದರಿ, ತಾಪಂ ಇಒ ಡಾ. ಎಚ್.ಎಸ್. ಜಿನಗ, ಯುವಜನ ಸೇವ ಮತ್ತು ಕ್ರೀಡಾ ಇಲಾಖೆಯ ಅಧಿಕ್ಷಕ ಜಗದೀಶ ಹುಳ್ಳಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.