ಕುಕನೂರು: ಕೌಟುಂಬಿಕ ಪ್ರೀತಿ ನೀಡಿ ಮಗುವಿಗೆ ಉತ್ತಮ ಭವಿಷ್ಯ ರೂಪಿಸುವ ಇಚ್ಛೆ ಹೊಂದಿರುವ ಪೋಷಕರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಅಸಾಂಸ್ಥಿಕ) ರವಿ ಬಡಿಗೇರ ಹೇಳಿದರು.
ತಾಲೂಕಿನ ಕದ್ರಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕುಕನೂರು ತಾಲೂಕಾಡಳಿತ, ತಾಪಂ ಮತ್ತು ಚಿಕ್ಕಬಿಡನಾಳ ಗ್ರಾಪಂ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕು, ಕಾನೂನು ಮತ್ತು ಮಕ್ಕಳ ಸುರಕ್ಷತೆ ಕುರಿತು ನರೇಗಾ ಕೂಲಿ ಕಾರ್ಮಿಕರಿಗೆ ಜರುಗಿದ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪೋಷಕತ್ವ ಯೊಜನೆಗೆ ಅರ್ಹರು ಅರ್ಜಿ ಸಲ್ಲಿಸಬೇಕು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ನ್ಯಾಯ ಕಾಯ್ದೆ-2015 ಸೆಕ್ಷನ್ 44 ರನ್ವಯ ಪೋಷಕತ್ವ ಯೋಜನೆಯಲ್ಲಿ 6 ರಿಂದ 18 ವರ್ಷದೊಳಗಿನ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಪಡೆದು ದತ್ತು ಹೋಗಲು ಸಾಧ್ಯವಾಗದಿರುವ (ಅನಾಥ) ಜೈವಿಕ ಪೋಷಕರಿಂದ ಬೇರ್ಪಟ್ಟ ಮಕ್ಕಳು, ಮಾರಣಾಂತಿಕ ಕಾಯಿಲೆಯಿಂದ ಬಳತ್ತಿರುವ ಪೋಷಕರ ಮಕ್ಕಳು,ಸುಮಾರು 6 ತಿಂಗಳಿಂದ 1 ವರ್ಷದವರೆಗೆ ಮಗುವಿನೊಂದಿಗೆ ಕುಟುಂಬದ ಯಾವೊಬ್ಬ ಸದಸ್ಯರು ಸಂಪರ್ಕಕ್ಕೆ ಬಾರದೇ ಇರುವಂತಹ ಮಕ್ಕಳು, ಕೌಟುಂಬಿಕ ಪ್ರೀತಿಯಿಂದ ವಂಚಿತವಾದ ಮಕ್ಕಳಿಗೆ ಪರ್ಯಾಯ ಕುಟುಂಬ ವ್ಯವಸ್ಥೆ ಕಲ್ಪಿಸುವ ಮೂಲಕ ಹೆತ್ತವರ ಪ್ರೀತಿ ನೀಡುವ ಅತ್ಯುತ್ತಮ ಯೋಜನೆಯಾಗಿದೆ. ತಂದೆ-ತಾಯಿಯ ಪ್ರೀತಿಯಿಂದ ವಂಚಿತವಾದ ಮಕ್ಕಳಿಗೆ ಕೌಟುಂಬಿಕ ಪ್ರೀತಿ ನೀಡಿ ಮಗುವಿಗೆ ಉತ್ತಮ ಭವಿಷ್ಯ ರೂಪಿಸುವ ಇಚ್ಛೆ ಹೊಂದಿರುವ ಯಾವುದೇ ಪೋಷಕರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.ಅಲ್ಲದೇ ಮಕ್ಕಳ ನಾಲ್ಕು ಮುಖ್ಯ ಹಕ್ಕುಗಳಾದ ಬದುಕುವ, ರಕ್ಷಣೆ, ವಿಕಾಸ ಹೊಂದುವ ಹಾಗೂ ಭಾಗವಹಿಸುವ ಹಕ್ಕುಗಳು ಮತ್ತು ಬಾಲ್ಯವಿವಾಹ ಕಾಯ್ದೆ-2006 ಹಾಗೂ ಪೊಕ್ಸೋ ಕಾಯ್ದೆಯ ಕುರಿತು ಮಾಹಿತಿ ನೀಡಿದರು.
ಮಕ್ಕಳ ಸಹಾಯವಾಣಿ-1098 ಕೊಪ್ಪಳದ ವಿಷಯ ನಿರ್ವಾಹಕ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಮಕ್ಕಳು ಬಾಲಕಾರ್ಮಿಕತೆಯಲ್ಲಿ ತೊಡಗಿದ್ದರೆ 18 ವರ್ಷದೊಳಗಿನ ಹೆಣ್ಣು ಮತ್ತು 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡಿದರೆ ಅದು ಬಾಲ್ಯವಿವಾಹ ಆಗುತ್ತದೆ. ಬಾಲ್ಯವಿವಾಹ ಮಾಡುವ ಅಥವಾ ಪೂರ್ವ ತಯಾರಿ ಮಾಡುವಲ್ಲಿ ಭಾಗಿಯಾದರೆ, ಮಕ್ಕಳು ಭಿಕ್ಷೆ ಬೇಡುತ್ತಿದ್ದರೆ, ಮಕ್ಕಳನ್ನು ಎಲ್ಲಂದರಲ್ಲಿ ಬಿಸಾಕಿ ಹೋದರೆ, ಚಿಂದಿ ಆಯುತ್ತಿರುವ ಮಕ್ಕಳಿದ್ದರೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕಂಡು ಬಂದರೆ ಮತ್ತು ಆರೈಕೆ ಪೋಷಣೆ ಅವಶ್ಯಕತೆಯಿರುವ ಮಕ್ಕಳು ಕಂಡು ಬಂದರೆ ಮಕ್ಕಳ ಸಹಾಯವಾಣಿ-1098ಕ್ಕೆ ಕರೆ ಮಾಡಿದಲ್ಲಿ 24 ಗಂಟೆಯೊಳಗೆ ಸ್ಥಳಕ್ಕೆ ಧಾವಿಸಿ ಮಕ್ಕಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕ್ರಮವಹಿಸಲಾಗುವುದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ಉದ್ಯೋಗ ಖಾತ್ರಿ ಮೇಟ್ ವಿಜಯ ವಹಿಸಿದ್ದರು.ಬಿ.ಎಫ್.ಟಿ ಮಂಜುನಾಥ ನಿರೂಪಿಸಿ ನೆರವೇರಿಸಿದರು. ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿದ್ದರು.