ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಲೋಕೋಪಯೋಗಿ ಇಲಾಖೆ ಶಿರಸಿ ವಿಭಾಗದ ಕಚೇರಿಯ ಶೌಚಾಲಯಕ್ಕೆ ಕಳೆದ 3 ತಿಂಗಳಿಂದ ಡೋರ್ ಲಾಕ್ ಮಾಡಲಾಗಿದ್ದು, ಗಬ್ಬೆದ್ದು ನಾರುತ್ತಿದೆ.
ಶಂಕರ ಜಿ. ಜಾವೂರ
ಶಿರಸಿ: ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಲೋಕೋಪಯೋಗಿ ಇಲಾಖೆ ಶಿರಸಿ ವಿಭಾಗದ ಕಚೇರಿಯ ಶೌಚಾಲಯಕ್ಕೆ ಕಳೆದ 3 ತಿಂಗಳಿಂದ ಡೋರ್ ಲಾಕ್ ಮಾಡಲಾಗಿದ್ದು, ಗಬ್ಬೆದ್ದು ನಾರುತ್ತಿದೆ.
ಇಡೀ ಕಚೇರಿ ವಾತಾವರಣ ಅನೈರ್ಮಲ್ಯದಿಂದ ಕೂಡಿದೆ. ದುರ್ನಾತದ ಮಧ್ಯೆಯೇ ಸಿಬ್ಬಂದಿ ಕೆಲಸ ಮಾಡುವುದು ಮತ್ತು ಶೌಚಾಲಯಕ್ಕಾಗಿ ಬಯಲನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.
ಈ ಬಗ್ಗೆ ಅಲ್ಲಿನ ಸಿಬ್ಬಂದಿ ಹಲವಾರು ಬಾರಿ ಶೌಚಾಲಯದ ಸ್ವಚ್ಛತಾ ಕಾರ್ಯ ನೋಡಿಕೊಳ್ಳುವ ಡಿವಿಜನ್ ಆಫೀಸಿಗೆ ಮನವಿ ಮಾಡಿದರೂ ಇದುವರೆಗೂ ಈ ಶೌಚಾಲಯದ ಸ್ವಚ್ಛತೆಯಾಗುತ್ತಿಲ್ಲ.
ಹಳಿಯಾಳ, ಜೋಯಿಡಾ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಮುಂಡಗೋಡ ತಾಲೂಕು ಸೇರಿದಂತೆ 6 ತಾಲೂಕಿಗೂ ಮುಖ್ಯ ಕಚೇರಿ ಇದಾಗಿದೆ. ಈ ಕಚೇರಿಗೆ ದಿನನಿತ್ಯ ನೂರಾರು ಜನರು ಸಾರ್ವಜನಿಕರು ಮತ್ತು ಗುತ್ತಿಗೆದಾರರು ಬಂದು ಹೋಗುತ್ತಾರೆ. ಸಕ್ಕರೆ ಕಾಯಿಲೆ ಹಾಗೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದವರು ಈ ಶೌಚಾಲಯಕ್ಕೆ ತೆರಳಿದರೆ ಅಲ್ಲಿನ ವಾಸನೆ ಮತ್ತು ಗಲೀಜಿನಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಸಹಜವಾಗಿದೆ.
ಇಷ್ಟೆಲ್ಲಾ ಇಲಾಖೆಗಳ ಮುಖ್ಯ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಿರಸಿ ವಿಭಾಗದ ಲೋಕೋಪಯೋಗಿ ಇಲಾಖೆ ಕೇವಲ ಒಂದು ಶೌಚಾಲಯವನ್ನು ಸ್ವಚ್ಛಗೊಳಿಸಲು ಹಣವಿಲ್ಲವೆಂದರೆ ಇದೆಂಥ ವಿಪರ್ಯಾಸ ಎನ್ನುತ್ತಾರೆ ಸಾರ್ವಜನಿಕರು.
ಇದೆಲ್ಲವೂ ಗೊತ್ತಿದ್ದರೂ ಶೌಚಾಲಯದ ಸ್ವಚ್ಛತೆ ಕಾಪಾಡುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಳಂಬ ಧೋರಣೆ ತೋರಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಶೌಚಾಲಯದ ಸ್ವಚ್ಛತೆಗೂ ಹಣವಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಸ್ವಚ್ಛತೆಗೆ ಕ್ರಮ: ಕಳೆದ 3 ತಿಂಗಳ ಹಿಂದೆಯೇ ಶೌಚಾಲಯದ ಸ್ವಚ್ಛತೆಯ ಟೆಂಡರ್ ಮುಗಿದ ಕಾರಣ ಶೌಚಾಲಯವನ್ನು ಸ್ವಚ್ಛಗೊಳಿಸದೆ ಹಾಗೆ ಬಿಡಲಾಗಿತ್ತು. ಈ ಸುದ್ದಿ ತಿಳಿದ ತಕ್ಷಣ ನಮ್ಮ ಸ್ವಂತ ಹಣ ಖರ್ಚು ಮಾಡಿ ಶೌಚಾಲಯವನ್ನು ಸ್ವಚ್ಛಗೊಳಿಸಿ ಸಿಬ್ಬಂದಿಗೆ ಅನುಕೂಲ ಮಾಡಿಕೊಡುತ್ತೇವೆ. ತಕ್ಷಣ ಶೌಚಾಲಯದ ಸ್ವಚ್ಛತೆಯ ಕುರಿತು ಮರು ಟೆಂಡರ್ ಕರೆದು ಶೌಚಾಲಯದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ ಲೋಕೋಪಯೋಗಿ ಇಲಾಖೆ ವಿಭಾಗದ ಎಇಇ ಮದನ್ ಕುಮಾರ್ ಶಿಂಧೆ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.