ಸಿರುಗುಪ್ಪ ತಾಲೂಕಿನ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಸೆಪ್ಟಂಬರ್ 9ರಂದು ಗಡಿಗ್ರಾಮ ರಾವಿಹಾಳ್‌ನ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಿರುಗುಪ್ಪ ಘಟಕದ ಅಧ್ಯಕ್ಷ ಡಾ. ಮಧುಸೂದನ ಕಾರಿಗನೂರು ತಿಳಿಸಿದರು.
ಬಳ್ಳಾರಿ: ಸಿರುಗುಪ್ಪ ತಾಲೂಕಿನ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಸೆಪ್ಟಂಬರ್ 9ರಂದು ಗಡಿಗ್ರಾಮ ರಾವಿಹಾಳ್‌ನ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಿರುಗುಪ್ಪ ಘಟಕದ ಅಧ್ಯಕ್ಷ ಡಾ. ಮಧುಸೂದನ ಕಾರಿಗನೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದ ಅಧ್ಯಕ್ಷರಾಗಿ ಸಿರುಗುಪ್ಪ ತಾಲೂಕಿನ ಹೆಸರಾಂತ ಹಾಸ್ಯ ಕಲಾವಿದ ನರಸಿಂಹಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಗತಿಪರ ಕೃಷಿಕರಾಗಿರುವ ಕವಿತಾ ಮಿಶ್ರಾ ಹಾಗೂ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮ್ಮೇಳನದ ಅಂಗವಾಗಿ ರಾವಿಹಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ಆಯೋಜಿಸಲಾಗಿದ್ದು, ಕನ್ನಡದ ಧ್ವಜಗಳು, ಕಲಾ ತಂಡಗಳು ಹಾಗೂ ಜಾನಪದ ಕಲಾ ಪ್ರದರ್ಶನಗಳೊಂದಿಗೆ ಮೆರವಣಿಗೆ ನಡೆಯಲಿದೆ. ಗ್ರಾಮೀಣ ಪ್ರದೇಶದಲ್ಲಿ ಕನ್ನಡದ ಜಾಗೃತಿ ಮೂಡಿಸುವಲ್ಲಿ ಈ ಮೆರವಣಿಗೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.ಈ ಬಾರಿಯ ಸಮ್ಮೇಳನದಲ್ಲಿ ಸಾಹಿತ್ಯದ ಜೊತೆಗೆ ಕೃಷಿ ಮತ್ತು ರೈತರ ಬದುಕಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಹೆಸರಾಂತ ಸಾಹಿತಿಗಳು, ಚಿಂತಕರು ಹಾಗೂ ವಿಷಯ ತಜ್ಞರಿಂದ ವಿವಿಧ ಸಾಹಿತ್ಯಿಕ, ಸಾಮಾಜಿಕ ಹಾಗೂ ರೈತ ಸ್ನೇಹಿ ಗೋಷ್ಠಿಗಳು ನಡೆಯಲಿವೆ. ಕನ್ನಡ ಸಾಹಿತ್ಯವನ್ನು ಗ್ರಾಮೀಣ ಬದುಕಿನೊಂದಿಗೆ ಬೆಸೆಯುವುದು ಹಾಗೂ ರೈತರ ಸಮಸ್ಯೆಗಳು ಮತ್ತು ಸಾಧನೆಗಳಿಗೆ ಸಾಹಿತ್ಯದ ಮೂಲಕ ಧ್ವನಿ ನೀಡುವುದು ಸಮ್ಮೇಳನದ ಪ್ರಮುಖ ಆಶಯವಾಗಿದೆ.
ಸಮ್ಮೇಳನದ ಸಂಜೆ ಅವಧಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಗೀತ, ನೃತ್ಯ, ಜಾನಪದ ಕಲೆಗಳು ಸೇರಿದಂತೆ ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.“ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ಕನ್ನಡ ಭಾಷೆ, ಸಾಹಿತ್ಯ, ಕೃಷಿ, ಗ್ರಾಮೀಣ ಬದುಕು ಮತ್ತು ಸಂಸ್ಕೃತಿಯನ್ನು ಒಂದೆಡೆ ಸೇರಿಸುವ ಕನ್ನಡದ ಹಬ್ಬವಾಗಬೇಕು. ರಾವಿಹಾಳಿನ ಸಮ್ಮೇಳನಕ್ಕೆ ಜಿಲ್ಲಾದ್ಯಂತದ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ರೈತ ಬಾಂಧವರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಡಾ. ಮಧುಸೂದನ ಕಾರಿಗನೂರು ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.