ಖಾಸಗಿ ಶಾಲೆಗಳಿಗೆ ಅನುದಾನಕ್ಕೆ ಆಗ್ರಹಿಸಿ 9 ರಿಂದ ಧರಣಿ

KannadaprabhaNewsNetwork |  
Published : Sep 08, 2026, 01:45 AM IST
ಚಿತ್ರ 7ಬಿಡಿಆರ್55 | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದ ಅನುದಾನ ರಹಿತ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಿ, ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಸೆ.9ರಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಚೇರಿ ಎದುರು ಅನಿರ್ದಿಷ್ಟಾವಧಿ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ ಎಂದು ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಅಡಳಿತ ಮಂಡಳಿಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸುನಿಲ ಹುಡಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ಕಲ್ಯಾಣ ಕರ್ನಾಟಕ ಭಾಗದ ಅನುದಾನ ರಹಿತ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಿ, ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಸೆ.9ರಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಚೇರಿ ಎದುರು ಅನಿರ್ದಿಷ್ಟಾವಧಿ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ ಎಂದು ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಅಡಳಿತ ಮಂಡಳಿಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸುನಿಲ ಹುಡಗಿ ತಿಳಿಸಿದರು.

ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸಂವಿಧಾನದ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ಷೇತ್ರಕ್ಕೆ ಮೀಸಲಿಡಲಾಗಿರುವ ಅನುದಾನದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಕೆಕೆಆರ್‌ಡಿಬಿಗೆ ಮೀಸಲಾದ ₹5,000 ಕೋಟಿ ಅನುದಾನದಲ್ಲಿ ಕನಿಷ್ಠ ಶೇ.30ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಅದರಲ್ಲಿ ಶೇ.5ರಷ್ಟು ಅನುದಾನವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ನೀಡಬೇಕು. 1995ರಿಂದ ಅನುದಾನಕ್ಕಾಗಿ ಕಾಯುತ್ತಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಹಂತ ಹಂತವಾಗಿ ಅನುದಾನ ನೀಡಬೇಕು ಎಂದರು.

ಸೆ.9 ರಿಂದ 17ರವರೆಗೆ ಕಲಬುರಗಿಯಲ್ಲಿ ನಡೆಯಲಿರುವ ಹೋರಾಟದಲ್ಲಿ ಏಳು ಜಿಲ್ಲೆಗಳಿಂದ ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಮುಖ್ಯಮಂತ್ರಿ ಕಲಬುರಗಿಗೆ ಆಗಮಿಸುವ ಸಂದರ್ಭದಲ್ಲಿ ಹೋರಾಟವು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಒಕ್ಕೂಟದ ವಿಭಾಗೀಯ ಉಪಾಧ್ಯಕ್ಷ ಓಂಕಾರೇಶ್ವರ ವಿಶ್ವನಾಥಪ್ಪ, ಖಜಾಂಚಿ ಮಂಜುರ್ ಇರ್ಫಾನ್, ವಿಭಾಗೀಯ ಕಾರ್ಯದರ್ಶಿ ಅರುಣಕುಮಾರ ಪೋಚಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುನಾಥ ರಡ್ಡಿ, ಜಿಲ್ಲಾ ಉಪಾಧ್ಯಕ್ಷ ಮುಕ್ರಂ ಪಟೇಲ, ಜಿಲ್ಲಾ ಖಜಾಂಚಿ ಗಣಪತಿ ಸೋಲಪುರೆ, ಬಸವಕಲ್ಯಾಣ ತಾಲೂಕಾಧ್ಯಕ್ಷ ಧನರಾಜ ದೊಡಮನಿ, ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸಯ್ಯದ್ ಅಹೆಮ್ಮದ್ ಮುದ್ದೆ, ಹಿರಿಯ ಮುಖಂಡರಾದ ಗುಂಡಯ್ಯ ತೀರ್ಥಾ, ಔರಾದ್ ತಾಲೂಕಾಧ್ಯಕ್ಷ ಗುರುನಾಥ ದೇಶಮುಖ, ಕಮಲನಗರ ತಾಲೂಕಾಧ್ಯಕ್ಷ ರಾಜಕುಮಾರ ಹಮಿಲಪುರೆ, ಭಾಲ್ಕಿ ತಾಲೂಕಾಧ್ಯಕ್ಷ ಸುಭಾಷ ಹುಲಸುರೆ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಸೆ.21ರಂದು ಬೀದರ್‌ನಲ್ಲಿ ಬೃಹತ್ ಧರಣಿ: ಮಣಗೀರೆ: ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಅಡಳಿತ ಮಂಡಳಿ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಮಣಗೀರೆ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಹಾವಳಿ ಹೆಚ್ಚುತ್ತಿದ್ದು, ಇದರಿಂದ ಶಾಲಾ ಶಿಕ್ಷಣ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಅನಧಿಕೃತ ಕೋಚಿಂಗ್ ಕೇಂದ್ರಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಸೆಪ್ಟೆಂಬರ್ 21ರಂದು ಬೀದರ್‌ನ ಡಿಡಿಪಿಐ ಕಚೇರಿ ಎದುರು ಬೃಹತ್ ಧರಣಿ ನಡೆಸಲಾಗುವುದು ಎಂದು ತಿಳಿಸಿದರು. ಬೀದರ್ ತಾಲೂಕಾಧ್ಯಕ್ಷ ಸಂದೀಪ ಶಟಕಾರ ಮಾತನಾಡಿ, ಸೆ. 21ರಂದು ನಡೆಯಲಿರುವ ಪ್ರತಿಭಟನೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಖಾಸಗಿ ಅನುದಾನ ರಹಿತ ಶಾಲೆಗಳನ್ನು ಸಂಪೂರ್ಣ ಮುಚ್ಚಲಾಗುವುದು. ಅಂದಿನ ಪ್ರತಿಭಟನೆಗೆ ಎಲ್ಲ ಖಾಸಗಿ ಶಾಲೆಗಳು ಕೈಜೋಡಿಸುವಂತೆಯೂ ಸಂದೀಪ ಕರೆ ಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಂಗ್‌ಪಿನ್‌ ಕನ್ನಾಳೆಗೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದವರಾರು?: ಖಂಡ್ರೆ
ಬರ ಘೋಷಣೆ ಕೇಂದ್ರವೇ ಹೊಣೆ: ಸಚಿವ ಖಂಡ್ರೆ