ಆಯುಷ್ ವೈದ್ಯರ ವೃತ್ತಿಪರ ಹಕ್ಕುಗಳು, ಸೇವಾ ಭದ್ರತೆ ಹಾಗೂ ಗ್ರಾಮೀಣ ಮತ್ತು ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಸಮರ್ಪಕ ಬಳಕೆಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ (ಎಎಫ್‌ಐ) ರಾಜ್ಯ ಸಮಿತಿ ನೇತೃತ್ವದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಆಯುಷ್ ವೈದ್ಯರ ವೃತ್ತಿಪರ ಹಕ್ಕುಗಳು, ಸೇವಾ ಭದ್ರತೆ ಹಾಗೂ ಗ್ರಾಮೀಣ ಮತ್ತು ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಸಮರ್ಪಕ ಬಳಕೆಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ (ಎಎಫ್‌ಐ) ರಾಜ್ಯ ಸಮಿತಿ ನೇತೃತ್ವದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲಾಯಿತು.
ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಸೇರಿದ ಸಂಘದ ಪದಾಧಿಕಾರಿಗಳು,ಸದಸ್ಯರು ಘೋಷಣೆಗಳನ್ನು ಕೂಗಿದರು, ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಡಾ. ಮೋಹನ್ ಬೆನಕದಾರ್ ಮಾತನಾಡಿ, ಸಂಘದ ಪ್ರಮುಖರು. ಕೆಪಿಎಂಇ ನೋಂದಣಿ ಮತ್ತು ನವೀಕರಣ, ಫೈರ್ ಎನ್ಒಸಿ ಸೇರಿದಂತೆ ಆಯುಷ್ ಕ್ಲಿನಿಕ್ಗಳಿಗೆ ಸಂಬಂಧಿಸಿದ ಪ್ರಾಯೋಗಿಕ ಸಮಸ್ಯೆಗಳಿಗೆ ಸರಳ ಹಾಗೂ ಸ್ಪಷ್ಟ ನಿಯಮಗಳನ್ನು ಜಾರಿಗೊಳಿಸಬೇಕು, ಸರ್ಕಾರಿ ಸಮಿತಿಗಳು ಹಾಗೂ ಕೆಪಿಎಂಇಗೆ ಸಂಬಂಧಿಸಿದ ಸಮಿತಿಗಳಲ್ಲಿ ಆಯುಷ್ ವೈದ್ಯರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಒತ್ತಾಯಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಪಡೆದಿರುವ ಆಯುಷ್ ವೈದ್ಯಕೀಯ ಪದವಿಯ ಪಠ್ಯಕ್ರಮ ಮತ್ತು ಅದರ ವ್ಯಾಪ್ತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು. ಆಯುಷ್ ವೈದ್ಯರಿಗೆ ಕಾನೂನುಬದ್ಧವಾಗಿ ದೊರೆಯುವ ಹಕ್ಕುಗಳಿಗೆ ರಕ್ಷಣೆ ಒದಗಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಆಯುಷ್ ವೈದ್ಯರಿಗೆ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯದ ಇತರ ಜಿಲ್ಲೆಗಳಲ್ಲಿ ಆಯುಷ್ ವೈದ್ಯರಿಗೆ ಇಂತಹ ಸಮಸ್ಯೆಗಳು ಎದುರಾಗದಿದ್ದರೂ, ರಾಯಚೂರು ಜಿಲ್ಲೆಯಲ್ಲಿ ಕೆಲ ಆಯುಷ್ ವೈದ್ಯರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಅಧಿಕೃತ ಮಾನ್ಯತೆ ಹೊಂದಿರುವ ಆಯುಷ್ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿಯೂ ಆರೋಗ್ಯ ಸೇವೆ ಸಲ್ಲಿಸುತ್ತಿ ದ್ದಾರೆ. ಆದರೆ, ಕೆಲವರು ತಮ್ಮನ್ನು ಆರ್‌ಟಿಐ ಕಾರ್ಯಕರ್ತರು ಎಂದು ಪರಿಚಯಿಸಿಕೊಂಡು ವೈದ್ಯರಿಗೆ ತೊಂದರೆ ನೀಡುತ್ತಿದ್ದಾರೆ. ಸರ್ಕಾರವೇ ಆರೋಗ್ಯ ಸೇವೆ ಒದಗಿಸುವಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭ ದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೆಲ ವೈದ್ಯರ ವಿರುದ್ಧ ದಾಖಲಾಗಿರುವ ದೂರುಗಳು, ಕ್ಲಿನಿಕ್ಗಳಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳು ಹಾಗೂ ವಿಧಿಸಿರುವ ದಂಡ ಸೇರಿದಂತೆ ಎಲ್ಲ ಕ್ರಮಗಳನ್ನು ಪರಿಶೀಲಿಸಬೇಕು. ಕಾನೂನುಬದ್ಧವಾಗಿಲ್ಲದ ಕ್ರಮಗಳು ಕಂಡುಬಂದಲ್ಲಿ ಅವುಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಆನಂದ ಎಸ್.ಕಿರಿಶಾಳ, ಆಯುಷ್ ವೈದ್ಯರಾದ ಡಾ. ಶ್ರೀಕಾಂತ ಕೊಂಕಣಿ, ಡಾ.ಅಮೀತ್ ಎಂ.ಎಸ್., ಡಾ.ಆನಂದ ಕುಲಕರ್ಣಿ, ಡಾ.ಮಹಾವೀರ್ ಹಾವೇರಿ, ಡಾ. ಸಂದೀಪ್ ಕುಲಕರ್ಣಿ, ಡಾ.ರವೀಂದ್ರ, ಡಾ. ಎ.ಡಿ.ಹನೀಫ್, ಡಾ.ಸುನೀಲ್ ರಾಯ್, ಡಾ.ರಾಜೇಂದ್ರ, ಡಾ. ಶಶಿಕಾಂತ್ ಹೆಚ್.ಸಿ., ಡಾ. ಸುನಿಲ್ ಆರ್. ಹಿರೇಮಠ, ಡಾ. ಸಂತೋಷ ಎಂ.ಬಿ., ಡಾ. ಶ್ರೀನಿವಾಸ ಕೆ. ಬನ್ನಿಗೋಳ, ಡಾ. ಸೋಮಶೇಖರ್ ಹುಡೆದ್, ಡಾ. ಜಿ.ಬಿ. ಕುಂಬಾರ, ಡಾ. ಪ್ರಕಾಶ ಪಾಟೀಲ್ ಸೇರಿ ವಿವಿಧ ಪ್ರದೇಶಗಳಿಂದ ನೂರಾರು ಸಂಖ್ಯೆಯಲ್ಲಿ ಆಯುಷ್ ವೈದ್ಯರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.