ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಸ್ಥಳ ಪರಿಶೀಲನೆ

KannadaprabhaNewsNetwork |  
Published : Jul 07, 2026, 01:15 AM IST
6ಕೆಆರ್ ಎಂಎನ್ 4.ಜೆಪಿಜಿಹೈಕೋರ್ಟ್ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಸ್. ವಿಶ್ವಜಿತ್ ಶೆಟ್ಟಿ ಅವರು ರಾಮನಗರದ ನ್ಯಾಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ಸುಸಜ್ಜಿತ ಬೃಹತ್ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಸಂಬಂಧ ಹೈಕೋರ್ಟ್ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಸ್.ವಿಶ್ವಜಿತ್ ಶೆಟ್ಟಿ ಅವರು ರಾಮನಗರದ ನ್ಯಾಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು

ರಾಮನಗರ: ಸುಸಜ್ಜಿತ ಬೃಹತ್ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಸಂಬಂಧ ಹೈಕೋರ್ಟ್ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಸ್.ವಿಶ್ವಜಿತ್ ಶೆಟ್ಟಿ ಅವರು ರಾಮನಗರದ ನ್ಯಾಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈಗಿರುವ ನ್ಯಾಯಾಲಯ ಸಂಕೀರ್ಣ ಕಿರಿದಾಗಿದ್ದು ಸುಗಮ ನ್ಯಾಯದಾನ ವ್ಯವಸ್ಥೆಗೆ ಹಲವು ಅಡಚಣೆಗೆಗಳು ಎದುರಾಗುತ್ತಿದ್ದವು. ಇದಕ್ಕೆ ಪರಿಹಾರವಾಗಿ ಸುಸಜ್ಜಿತ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಿಕೊಡುವಂತೆ ರಾಜ್ಯಸರ್ಕಾರಕ್ಕೆ ಮನವಿ ಮಾಡಲಾಗಿತ್ತು.

ಮತ್ತೊಂದೆಡೆ ತಾಲೂಕು ಪಂಚಾಯಿತಿ ಸುಪರ್ದಿಯಲ್ಲಿದ್ದ ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ 1.15 ಎಕರೆ ಜಮೀನನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿತ್ತು. ನಂತರ 2026-27ನೇ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸುಸಜ್ಜಿತ ನ್ಯಾಯಾಲಯ ಸಂಕೀರ್ಣ ನಿರ್ಮಾಣದ ಘೋಷಣೆ ಮಾಡಿ, ಅನುದಾನ ಮೀಸಲಿಟ್ಟಿತ್ತು.

ಇದೀಗ ಯೋಜನೆಗೆ ವೇಗ ದೊರೆಯುತ್ತಿದೆ. ಲೋಕೋಪಯೋಗಿ ಇಲಾಖೆ ತಯಾರಿಸಿದ ನೀಲನಕ್ಷೆಗೆ ಹೈಕೋರ್ಟ್ ಅನುಮತಿ ನೀಡಿದ್ದು, ಶೀಘ್ರದಲ್ಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ. ನಂತರ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡು ವರ್ಷಾಂತ್ಯದ ವೇಳೆ ಕಾಮಗಾರಿ ಆರಂಭಗೊಳ್ಳುವ ಸಾಧ್ಯತೆ ಇದೆ.

ಈ ಸಂಬಂಧ ರಾಮನಗರದ ನ್ಯಾಯಾಲಯ ಸಂಕೀರ್ಣಕ್ಕೆ ಭೇಟಿ ನೀಡಿದ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಸ್.ವಿಶ್ವಜಿತ್ ಶೆಟ್ಟಿ ಅವರು, ಕಟ್ಟಡ ನಿರ್ಮಾಣಗೊಳ್ಳುವ ಸ್ಥಳಾವಕಾಶವನ್ನು ಪರಿಶೀಲಿಸಿದರು. ಹಾಲಿ ನ್ಯಾಯಾಲಯ ಸಂಕೀರ್ಣದಲ್ಲಿರುವ ಕುಂದು ಕೊರತೆಗಳು, ನೂತನ ಕಟ್ಟಡ ನಿರ್ಮಾಣದ ನೀಲ ನಕ್ಷೆಯನ್ನು ಪರಿಶೀಲಿಸಿದ ಅವರು, ಹೆದ್ದಾರಿ ಪಕ್ಕದಲ್ಲಿ ಸೂಕ್ತವಾದ ಸ್ಥಳಾವಕಾಶ ದೊರೆತಿದೆ. ಇಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣದಿಂದ ಅನುಕೂಲವಾಗಲಿದೆ. ಭವ್ಯವಾದ ನ್ಯಾಯಾಲಯ ಸಂಕೀರ್ಣ ವೇಗವಾಗಿ ನಿರ್ಮಾಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ನಂತರ ಬಾರ್ ಅಸೋಸಿಯೇಷನ್‌ಗೆ ಭೇಟಿ ನೀಡಿದ ಅವರು, ವಕೀಲರೊಂದಿಗೆ ಸಮಾಲೋಚನೆ ನಡೆಸಿದರು. ಹೈಕೋರ್ಟ್ ನ್ಯಾಯಮೂರ್ತಿಗಳು ಸುಸಜ್ಜಿತ ನ್ಯಾಯಾಲಯ ನಿರ್ಮಾಣದ ಕುರಿತು ವಕೀಲರೊಂದಿಗೆ ಮಾಹಿತಿ ಹಂಚಿಕೊಂಡರು.

ಈ ವೇಳೆ ಆಡಳಿತಾತ್ಮಕ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿದ ವಕೀಲರ ಸಂಘದ ಅಧ್ಯಕ್ಷ ಕೆ.ಕೆಂಪಯ್ಯ , ಸುಸಜ್ಜಿತ ನ್ಯಾಯಾಲಯ ನಿರ್ಮಾಣ ವಿಷಯ ಸಂತಸ ತಂದಿದೆ. ಪ್ರಸ್ತುತ ಇರುವ ವಕೀಲರ ಸಂಘದ ಕಟ್ಟಡ ನಮ್ಮದಲ್ಲ. ಕಾನೂನು ಸೇವಾ ಪ್ರಾಧಿಕಾರದ ಕಟ್ಟಡದಲ್ಲಿ ನಮಗೆ ಅವಕಾಶ ಮಾಡಿಕೊಡಲಾಗಿದೆ. ಇದೂ ಸಹ ತುಂಬಾ ಚಿಕ್ಕದಾಗಿದೆ. ಪ್ರತಿನಿತ್ಯ ರಾಮನಗರದ ನ್ಯಾಯಾಲಯ ಸಂಕೀರ್ಣಕ್ಕೆ 700ಕ್ಕೂ ಅಧಿಕ ವಕೀಲರು ಬಂದು ಹೋಗುತ್ತಾರೆ. ಭವಿಷ್ಯದಲ್ಲಿ ಈ ಸಂಖ್ಯೆ 1000 ಮೀರ ಬಹುದು. ಈ ಹಿನ್ನೆಲೆಯಲ್ಲಿ ನೂತನವಾಗಿ ನಿರ್ಮಾಣವಾಗುವ ಸುಸಜ್ಜಿತ ನ್ಯಾಯಾಲಯ ಸಂಕೀರ್ಣದಲ್ಲಿ ವಿಶಾಲವಾದ ಸ್ಥಳಾವಕಾಶವನ್ನು ವಕೀಲರ ಸಂಘ ಕಾರ್ಯನಿರ್ವಹಿಸಲು ನೀಡಬೇಕು ಎಂದು ಮನವಿ ಮಾಡಿದರು.

ನಂತರ ರಾಮನಗರದ ಬಸನಪುರದ ಶ್ರೀ ರಾಮದೇವರ ಬೆಟ್ಟ ರಣಹದ್ದು ವನ್ಯಜೀವಿ ಧಾಮದಲ್ಲಿರುವ ನ್ಯಾಯ ವನದಲ್ಲಿ ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಸಸಿ ನೆಟ್ಟರು. ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಚ್. ಅಣ್ಣಯ್ಯನವರ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಆರ್.ಸವಿತಾ, ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್, ಅರಣ್ಯ ಇಲಾಖೆಯ ಸುಷ್ಮಾ, ಪ್ರಾಧಿಕಾರದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

6ಕೆಆರ್ ಎಂಎನ್ 4.ಜೆಪಿಜಿ

ಹೈಕೋರ್ಟ್ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಸ್. ವಿಶ್ವಜಿತ್ ಶೆಟ್ಟಿ ಅವರು ರಾಮನಗರದ ನ್ಯಾಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುವನಾ ಮನೆಗೆ ಡಿಸಿಎಂ ಪರಮೇಶ್ವರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ
ಬಸವೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಅಕ್ಷರಾಭ್ಯಾಸ