ಕನ್ನಡಪ್ರಭ ವಾರ್ತೆ ಮಂಡ್ಯ
ಹೈಕೋರ್ಟ್ ನ್ಯಾಯಮೂರ್ತಿ ಎಸ್.ಸುನಿಲ್‌ದತ್ ಯಾದವ್ ಅವರು ಮದ್ದೂರು ಪಟ್ಟಣ, ಮಂಡ್ಯ ನಗರ ಹಾಗೂ ಬೇವಿನಹಳ್ಳಿ ಸಮೀಪ ನಿರ್ಮಾಣ ಹಂತದಲ್ಲಿರುವ ನ್ಯಾಯಾಧೀಶರ ವಸತಿ ಸಮುಚ್ಛಯ ವೀಕ್ಷಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ ಅವರು ನ್ಯಾಯಾಲಯ ಕಟ್ಟಡದ ನೀಲಿ ನಕಾಶೆ, ವಸತಿ ಸಮುಚ್ಛಯದ ನಿರ್ಮಾಣ ಹಂತದ ಕಾಮಗಾರಿ ಬಗ್ಗೆ ನ್ಯಾಯಮೂರ್ತಿಗಳಿಗೆ ವಿವರಿಸಿದರು.
ಟಿ.ಎಸ್.ಸತ್ಯಾನಂದ ಶ್ರಮದಿಂದ ೨೨ ಎಕರೆ ಮಂಜೂರು:ಸಾರ್ವಜನಿಕರು ಹಾಗೂ ವಕೀಲರ ಹಲವು ವರ್ಷಗಳ ಬೇಡಿಕೆಯಾದ ಹೊಸ ನ್ಯಾಯಾಲಯ ಕಟ್ಟಡ ನಿರ್ಮಾಣ ಸೂಕ್ತ ಜಾಗದ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಿ.ಎಸ್.ಸತ್ಯಾನಂದ ಅವರು ಜಿಲ್ಲಾಡಳಿತ ಮತ್ತು ಸರ್ಕಾರದ ಗಮನಸೆಳೆದು ೨೨ ಗುಂಟೆ ಜಾಗ ಮಂಜೂರು ಮಾಡಿಸಿದ್ದರು. ಇದರ ಬಗ್ಗೆ ಹೈಕೋರ್ಟ್ ಗಮನ ಸೆಳೆದು ಮಂಜೂರಾಗಿರುವ ಜಾಗವನ್ನು ನ್ಯಾಯಾಂಗ ಇಲಾಖೆ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಜಾಗದಲ್ಲಿ ಏಳು ನ್ಯಾಯಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಜಿಲ್ಲಾಡಳಿತ ನ್ಯಾಯಾಂಗ ಇಲಾಖೆಗೆ ಮಂಜೂರಾಗಿರುವ ಜಾಗವನ್ನು ಹಸ್ತಾಂತರಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಿದೆ. ನ್ಯಾಯಮೂರ್ತಿಗಳು ಜಾಗವನ್ನು ಪರಿಶೀಲಿಸಿ ನೀಲಿ ನಕಾಶೆಯನ್ನೂ ವೀಕ್ಷಿಸಿದರು.
ಹದಿನಾರು ನ್ಯಾಯಾಲಯಗಳು ಸೂಕ್ತ ಸ್ಥಳಾವಕಾಶವಿಲ್ಲದೆ ನ್ಯಾಯಾಲಯದ ಆವರಣ, ಕಾರ್‌ಶೆಡ್‌ಗಳನ್ನು ನ್ಯಾಯಾಲಯಗಳಾಗಿ ಪರಿವರ್ತಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಇದರ ಜೊತೆಗೆ ಹೊಸದಾಗಿ ಮಂಜೂರಾದ ನ್ಯಾಯಾಲಯಗಳು ಸ್ಥಳಾವಕಾಶವಿಲ್ಲದೆ ಇದುವರೆಗೂ ಪ್ರಾರಂಭವೇ ಆಗಿರುವುದಿಲ್ಲ. ಇದರ ವಿರುದ್ಧ ವಕೀಲರ ಸಂಘ ಸರ್ಕಾರ ಮತ್ತು ಹೈಕೋರ್ಟ್ ಗಮನಸೆಳೆದು ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಹೆಜ್ಜೆ ಇರಿಸಿದೆ. ಇದರಿಂದ ಹಲವು ವರ್ಷಗಳಿಂದ ಹಿಡಿದಿರುವ ಗ್ರಹಣ ಅಂತ್ಯವಾಗುವ ಸಂಭವವಿದೆ.
ಮಂಡ್ಯ ನಗರದ ಜೊತೆಗೆ ಮದ್ದೂರು ಮತ್ತು ಶ್ರೀರಂಗಪಟ್ಟಣ ನ್ಯಾಯಾಲಯಗಳ ಕುಂದುಕೊರತೆಗಳನ್ನೂ ನ್ಯಾಯಮೂರ್ತಿ ಸುನೀಲ್‌ದತ್‌ಯಾದವ್ ಪರಿಶೀಲನೆ ನಡೆಸಿದರು. ಮಂಡ್ಯದಂತೆ ಮದ್ದೂರಿನಲ್ಲೂ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು ಸ್ಥಳ ಮಂಜೂರು ಮಾಡಿರುವ ಸರ್ವೇ ನಂ ೮೦೦/೧, ೮೦೦/೩, ೮೦೧/೧ ರೇಷ್ಮೆ ಇಲಾಖೆಯ ವ್ಯಾಪ್ತಿಗೆ ಸೇರಿದ ೪.೩೫ ಎಕರೆ ಜಾಗವನ್ನು ಗುರುತಿಸಿ ೪ ಎಕರೆ ೩೦ ಗುಂಟೆ ಜಾಗವನ್ನು ನ್ಯಾಯಾಧೀಶರು ವೀಕ್ಷಿಸಿ ಮಾಹಿತಿ ಪಡೆದರು.
ವಸತಿ ಸಮುಚ್ಛಯ ಕಾಮಗಾರಿ ಪರಿಶೀಲನೆ:
ಮಂಡ್ಯ ಜಿಲ್ಲೆಯಲ್ಲಿರುವ ಏಳು ಸಿವಿಲ್ ನ್ಯಾಯಾಲಯ ಸಂಕೀರ್ಣಕ್ಕೆ ಸಂಬಂಧಪಟ್ಟಂತೆ ಕೃಷಿ ಇಲಾಖೆಗೆ ಸೇರಿದ ೨೨.೧೨ ಗುಂಟೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. ನ್ಯಾಯಾಲಯ ಸಂಕೀರ್ಣ ನಿರ್ಮಾಣಲ್ಲೆ ೨೫ ಕೋಟಿ ರು. ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.