ರಸ್ತೆ ಕಾಮಗಾರಿ, ಸಮಸ್ಯೆಗಳ ಬಗ್ಗೆ ನಡೆದ ಸಭೆ । ಅಧಿಕಾರಿಗಳಿಗೆ ಸಮಗ್ರ ಕಾಮಗಾರಿಗಳ ಬಗ್ಗೆ
ಪಟ್ಟಣದ ಬಿ.ಎಚ್.ರಸ್ತೆ ಕಾಮಗಾರಿಗಳನ್ನು ಇದೇ 15ರೊಳಗೆ ಜಿಲ್ಲಾಧಿಕಾರಿ, ಪಿಡಬ್ಲುಡಿ ಮತ್ತಿತರ ಅಧಿಕಾರಿಗಳೊಡನೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ವ್ಯಕ್ತಪಡಿಸಿದರು.
ಗುರುವಾರ ತರೀಕೆರೆಗೆ ಭೇಟಿ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪಟ್ಟಣದಲ್ಲಿ ಕೈಗೊಂಡಿರುವ ಬಿ.ಎಚ್.ರಸ್ತೆ ಕಾಮಗಾರಿ ಬಗ್ಗೆ ಸಾರ್ವಜನಿಕರ ಅನಿಸಿಕೆಗಳನ್ನು ಆಲಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳೊಡನೆ ಸುಧೀರ್ಘ ಚರ್ಚಿಸಿದ ಬಳಿಕ ಅಧಿಕಾರಿಗಳಿಗೆ ಸಮಗ್ರ ಕಾಮಗಾರಿಗಳ ಬಗ್ಗೆ ಸೂಚನೆ ನೀಡಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ಮಾತನಾಡಿ ಪಟ್ಟಣ ಸಮೀಪ ಹಾದುಹೋಗಿರುವ ರಾ.ಹೆದ್ದಾರಿ ಬೈಪಾಸ್ ರಸ್ತೆ ಕಾಮಗಾರಿಯಲ್ಲಿ ದಳವಾಯಿ ಕೆರೆ ಬಳಿಯ ಅಂಡರ್ ಪಾಸ್ ರಸ್ತೆ ಅಸಮರ್ಪಕವಾಗಿದ್ದು ಮಳೆಗಾಲದಲ್ಲಿ ನೀರು ಹೊರಕ್ಕೆ ಹರಿಯದೆ ಸೇತುವೆ ಕೆಳಗಡೆ ನಿಂತು ಕೆಸರು ತುಂಬುತ್ತದೆ. ಅಲ್ಲದೆ ಸೇತುವೆ 2 ದಂಡೆಗಳಿಂದ ಮಳೆಗಾಲದಲ್ಲಿ ನೀರು ಬಸಿಯುತ್ತಿದ್ದು, ರೈತರು ತಮ್ಮ ತೋಟ, ಹೊಲ ಗದ್ದೆಗಳಿಗೆ, ಅಕ್ಕಪಕ್ಕದ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ರಾ. ಹೆ. ಪ್ರಾಧಿಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಾಗ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ತರೀಕೆರೆ ಪಟ್ಟಣದ ಬಿ.ಎಚ್.ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿರುವುದಲ್ಲದೆ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಪದೇ ಪದೇ ಅಪಘಾತಗಳಾಗುತ್ತಿವೆ. ದಿನವಿಡಿ ವಿದ್ಯುತ್ ನಿಲುಗಡೆ ಸಮಸ್ಯೆಯಿಂದ ಸಣ್ಣಪುಟ್ಟ ವರ್ತಕರು ಮತ್ತು ರೈತರಿಗೆ ತೊಂದರೆಯಾಗಿದೆ. ಸಮರ್ಪಕ ಕಾಮಗಾರಿ ಮಾಡದೆ, ರಸ್ತೆಯೆಲ್ಲಾ ಧೂಳು ತುಂಬಿ ನಾಗರಿಕರಿಗೆ ತೊಂದರೆಯಾಗುತ್ತಿದೆ ಇದನ್ನು ಕೂಡಲೇ ಸರಿಪಡಿಸಿ ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಪಟ್ಟಣ ಬಿ.ಎಚ್.ರಸ್ತೆ ಕಾಮಗಾರಿ ಸ್ಥಳದಲ್ಲಿ ಸಾಕಷ್ಟು ಧೂಳು ಇದ್ದರೂ ಕ್ರಮವಹಿಸದಿರುವವರು ಇಂದು ,ಮಾತ್ರ ನೀರು ಸಿಂಪಡಿಸಿ ಧೂಳು ತಡೆದಿದ್ದಾರೆ. ರಸ್ತೆ ಕಾಮಗಾರಿ ವೇಳೆ ಅಪಘಾತಗಳು ಸಂಭವಿಸುತ್ತಿವೆ. ಅನೇಕರು ಕೈಕಾಲು ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಬಿ.ಎಚ್.ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದ್ದು ಕಾಮಗಾರಿಗೆ ಬಳಸುತ್ತಿರುವ ಜಲ್ಲಿ, ಸೀಮೆಂಟ್ ಕಬ್ಬಿಣ ಇತ್ಯಾದಿ ಗುಣಮಟ್ಟದಿಂದ ಕೂಡಿಲ್ಲ ವೆಂದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ ಎಂಬ ಪತ್ರಕರ್ತರೊಬ್ಬರು ಸಂಸದರ ಗಮನಕ್ಕೆ ತಂದರು.
6ಕೆಟಿಆರ್..ಕೆ.4ಃ ತರೀಕೆರೆಯಲ್ಲಿ ನಡೆದ ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿದರು. ಮಾಜಿ ಶಾಸಕ ಡಿ.ಎಸ್.ಸುರೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಟಿ.ಎಲ್.ರಮೇಶ್, ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ ಮತ್ತಿತರರು ಇದ್ದರು.