ಕನ್ನಡಪ್ರಭ ವಾರ್ತೆ ಆಳಂದ
ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಲ್ಲಿನ ತೊಂದರೆಯಿಂದಾಗಿ ಆಳಂದ ತಾಲೂಕಿನಲ್ಲಿರುವ ಅನಕ್ಷರಸ್ಥ 767 ವಯೋವೃದ್ಧರು ಮಾಸಿಕ ಪಿಂಚಣಿ ಬಾರದೆ 6 ತಿಂಗಳಿಂದ ನಿತ್ಯ ಕಚೇರಿಗಳಿಗೆ ಅಲೆದಾಡುತ್ತ ಪರದಾಡತೊಡಗಿದ್ದಾರೆ.ಅಂಚೆ ಕಚೇರಿಗೆ ಹೋದರೆ ಬ್ಯಾಂಕ್‍ಗೆ ಹೋಗಿ ಎನ್ನುತ್ತಿದ್ದಾರೆ. ಬ್ಯಾಂಕ್‍ಗೆ ಹೋದರೆ ತಹಸೀಲ್ದಾರ ಕಚೇರಿಗೆ ಹೋಗಿ ಎನ್ನುತ್ತಿದ್ದು, ಎಲ್ಲಿ ಹೋದರೂ ಕೆಲಸವಾಗುತ್ತಿಲ್ಲ. ಐದಾರು ತಿಂಗಳಿಂದ ನಮ್ಮ ತಿಂಗಳ ಹಣ ಕೈಗೆ ಬರುತ್ತಿಲ್ಲ ಓಡಾಡಿ ಸಾಕಾಗಿ ಹೋಗಿದೆ ಎಂದು ವೃದ್ಧರು ಗೋಳಾಡುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು 39773 ಪಿಂಚಣಿದಾರರಿದ್ದು, ಇದರಲ್ಲಿ 767 ಮಂದಿಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಇಲ್ಲದ್ದಕ್ಕೆ ಹಾಗೂ ಕೆವೈಸಿ ಮಾಡಿಸದ್ದಕ್ಕೆ ಹಣ ಕೈಗೆ ಸೇರುತ್ತಿಲ್ಲ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಬೇಕು. ಕೆವೈಸಿ ಮಾಡಿಸಿದರೆ ಹಣ ಬರುತ್ತವೆ ಎಂದು ಇದರ ನಿರ್ವಹಣೆ ಕಂದಾಯ ಇಲಾಖೆ ಸಿಬ್ಬಂದಿ ಹೇಳುತ್ತಿದ್ದಾರೆ.ಸರ್ಕಾರ ವೃದ್ಧಾಪ್ಯ ವಿಧವಾ, ಮೈತ್ರಿ , ಮನಸ್ವಿನಿ, ಅಂಗವಿಕಲ, 1 ಮತ್ತು 2, ಐಸಿಡ್ ತಾಳೆ, ರೈತ ಆತ್ಮಹತ್ಯೆ ಕುಟುಂಬಕ್ಕೆ ಪ್ರತಿ ತಿಂಗಳ 2 ಸಾವಿರ ರುಪಾಯಿ ಹೀಗೆ ಹಲವು ರೀತಿಯಲ್ಲಿ ಬಡವರಿಗೆ ಸಂತ್ರಸ್ತರಿಗೆ ಆಶ್ರಯವಾಗಿ ತಿಂಗಳ ಮಾಸಾನ ನೀಡುತ್ತಿದೆ. ಆದರೆ ಸಂಬಂಧಿತ ಇಲಾಖೆಯವರು ಸೂಕ್ತ ತಿಳಿವಳಿಕೆ ಇವರಿಗೆ ನೀಡದೆ ಹೋಗದ್ದರಿಂದ ಸಮಸ್ಯೆ ಹಾಗೆ ಮುುಂದುವರಿದಿದೆ.
ಈ ಕುರಿತು ಸಂಬಂಧಿ ಅಧಿಕಾರಿಗಳು ಹಣ ಬಾರದೇ ಇರುವ ವೃಯೋವೃದ್ಧ ಫಲಾನುಭವಿಗಳ ದಾಖಲೆಗಳನ್ನು ಸರಿಪಡಿಸಿ ಹಣ ಕೈಗೆ ಸೇರುವಂತೆ ಮಾಡುವರೆ ಎಂದು ಎದುರು ನೋಡುವಂತೆ ಮಾಡಿದೆ.60ರಿಂದ 64 ವಯಸ್ಸಿನ ವೃದ್ಧಾಪ್ಯರಿಗೆ ಮಾಸಿಕ 600 ರುಪಾಯಿ, 65 ವಯಸ್ಸಿನವರಿಗೆ ನೀಡುವ ಸಂಧ್ಯಾ ಸುರಕ್ಷಾ 1200 ರುಪಾಯಿ, ವಿಧವಾ ವೇತನ 800 ರುಪಾಯಿ ಹೀಗೆ ನೀಡಲಾಗುತ್ತಿದೆ. ಆದರೆ ಹಣವೇ ಬರುತ್ತಿಲ್ಲ. ಬ್ಯಾಂಕ್ ಅಂಚೆ ಕಚೇರಿಗೆ ಹೋದರೂ ಏನು ಮಾಡಬೇಕು ಎಂಬುದು ಒಂದು ತಿಳಿಯುತ್ತಿಲ್ಲ ಎಂದು ಕೈಯಲ್ಲಿ ಮಂಜೂರಾತಿ ಪತ್ರಹಿಡಿದ ಓಡಾಡತೊಡಗಿದ್ದಾರೆ.ಮಾಸಾಶನ ಬಾರದ ಫಲಾನುಭವಿಗಳು ತಮ್ಮ ಪಾಸ್‍ಬುಕ್‍ನೊಂದಿಗೆ ತಮ್ಮ ಖಾತೆ ಇರುವ ಬ್ಯಾಂಕ್‍ಗಳಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಇದ್ದ ಕಡೆ ತೆರಳಿ ಖಾತೆಗೆ ಆಧಾರ ಸಂಖ್ಯೆ ಜೋಡಣೆ ಮಾಡಬೇಕು. ಇದಕ್ಕೆ ಆಧಾರ್ ಕಾರ್ಡ್, ಪಾನ್‌ಕಾರ್ಡ್ ಅಥವಾ ಫಾರ ನಂ.16 ಭರ್ತಿಮಾಡಿಕೊಟ್ಟರೆ ಹಣ ಬರುತ್ತದೆ. ವೃದ್ಧರ ಕೆಲವರ ಥಂಬ್ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ತಾಂತ್ರಿಕೆ ತೊಂದರೆ ಎದುರಾಗಿದೆ.
- ಶ್ರೀನಿವಾಸ್ ಕುಲಕರ್ಣಿ, ನಾಡ ತಹಸೀಲ್ದಾರರು ಆಳಂದ