ಚಿತ್ರದುರ್ಗ: ಸಲ್ಲದ ಕಾರಣಕ್ಕೆ ಮತದಾನ ಬಹಿಷ್ಕರಿಸುವುದು ಸರಿಯಾದ ನಡೆ ಅಲ್ಲ. ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಲಹೆ ಮಾಡಿದರು.
ಸಾಮಾಜಿಕ ವ್ಯವಸ್ಥೆಯಲ್ಲಿರುವ ನಾವು ಸಂವಿಧಾನ ಆಶಯಗಳಂತೆ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿದ್ದೇವೆ. ಅಂತೆಯೇ ಪ್ರತಿಯೊಬ್ಬರೂ ಸಕಾಲದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಇನ್ನಷ್ಟು ಗಟ್ಟಿಗೊಳಿಸಲು ಮತದಾನ ಉತ್ತಮ ವಿಧಾನವಾಗಿದೆ. ಯಾವುದೋ ಸಲ್ಲದ ಕಾರಣಕ್ಕಾಗಿ ಮತದಾನದಿಂದ ಹೊರಗುಳಿಯುವುದು ಕೂಡ ಸರಿಯಲ್ಲ ಎಂದರು.
ನಗರದ ಪ್ರದೇಶಗಳಲ್ಲಿರುವ ಬಹುಸಂಖ್ಯಾತ ಬುದ್ಧಿವಂತರು, ವಿದ್ಯಾವಂತರು ಮತದಾನದಿಂದ ಹೊರಗುಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಸ್ತುತ ಚುನಾವಣೆಯಲ್ಲಿ ಚಿತ್ರದುರ್ಗ ನಗರ ಮತ್ತು ಗ್ರಾಮೀಣ ಪ್ರದೇಶದ ಮತದಾರರೆಲ್ಲರೂ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ, ನಿರ್ಭೀತಿಯಿಂದ ಮತದಾನ ಮಾಡುವ ಮೂಲಕ ಹಕ್ಕನ್ನು ಚಲಾಯಿಸುವಂತೆ ಅವರು ಮನವಿ ಮಾಡಿದರು.ನಗರ ಪ್ರದೇಶ ಸೇರಿದಂತೆ ಹಿಂದಿನ ಚುನಾವಣೆ ಸಂದರ್ಭದಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆ ಪ್ರದೇಶಗಳ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಅಲ್ಲದೇ ನಗರ ನಿವಾಸಿಗಳ ಪ್ರತಿ ಮತದಾರರಿಗೆ ಪ್ರತ್ಯೇಕವಾಗಿ ಪತ್ರ ಬರೆದು ಮನವಿ ಮಾಡಿಕೊಳ್ಳುವುದಾಗಿ ಅವರು ನುಡಿದರು.
ಮಾ.16ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಪ್ರಸ್ತುತ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬರ ನಿರ್ವಹಣೆ ಕಾರ್ಯವೂ ಸವಾಲಿನದ್ದಾಗಿದೆ. ದೈನಂದಿನ ಕಚೇರಿಯ ಅಭಿವೃದ್ಧಿಪರ ಕಾರ್ಯಗಳೊಂದಿಗೆ ಜನಸಾಮಾನ್ಯರ ಕೆಲಸ-ಕಾರ್ಯಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ, ನಿಯಮದ ಉಲ್ಲಂಘನೆಯಾಗದಂತೆ ಚುನಾವಣಾ ಕಾರ್ಯನಿರ್ವಹಿಸಲು ಕಂದಾಯ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮತದಾರರ ಪಟ್ಟಿಯಲ್ಲಿ ಈವರೆಗೂ ಹೆಸರು ನೋಂದಾಯಿಸಿಕೊಳ್ಳದಿರುವ ಅರ್ಹ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಹಾಗೂ ತಿದ್ದುಪಡಿ ಮಾಡಿಕೊಳ್ಳಲು, ಹೆಸರಿರುವುದನ್ನು ಖಚಿತಪಡಿಸಿಕೊಳ್ಳಲು ಅವಕಾಶವಿದೆ. ಮತದಾರರು ಸೌಲಭ್ಯದ ಲಾಭ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಮಾರುತಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಇದ್ದರು.