ಮನುಷ್ಯ ಎಲ್ಲರೊಂದಿಗೂ ಅನ್ಯೋನ್ಯವಾಗಿರುವ ಸಾಮಾಜಿಕ ಪ್ರಾಣಿ. ಅಂತಹ ಸಮಾಜದ ಋಣವನ್ನು ಇಂತಹ ವಿವಿಧ ಸತ್ ಕಾರ್ಯಗಳನ್ನು ಮಾಡುವ ಮೂಲಕ ತೀರಿಸಬೇಕು.

ಮುಂಡರಗಿ: ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರು ಆದರ್ಶ ಬದುಕನ್ನು ಬದುಕಿ, ರಾಜಕಾರಣಿಗಳಿಗೂ ವಚನ ಸಾಹಿತ್ಯವನ್ನು ಪರಿಚಯಿಸಿದ ಶರಣ ಪಥದ ಹಿರಿಯರು ಎಂದು ಗದಗ- ಡಂಬಳ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಬಣ್ಣಿಸಿದರು.

ತಾಲೂಕಿನ ಕಲಕೇರಿ ಗ್ರಾಮದ ಎಂ.ಬಿ. ಪಾಟೀಲ ಸ್ವತಂತ್ರ ಪಪೂ ಮಹಾವಿದ್ಯಾಲಯದ ಆವರಣದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರ 92ನೇ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ ಹಾಗೂ ಶರಣರ ದೃಷ್ಟಿಯಲ್ಲಿ ಜೀವನ ಮಾರ್ಗ ಧರ್ಮಸಭೆ ಹಾಗೂ ಕೃತಿ ಲೋಕಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮನುಷ್ಯ ಎಲ್ಲರೊಂದಿಗೂ ಅನ್ಯೋನ್ಯವಾಗಿರುವ ಸಾಮಾಜಿಕ ಪ್ರಾಣಿ. ಅಂತಹ ಸಮಾಜದ ಋಣವನ್ನು ಇಂತಹ ವಿವಿಧ ಸತ್ ಕಾರ್ಯಗಳನ್ನು ಮಾಡುವ ಮೂಲಕ ತೀರಿಸಬೇಕು. ಇನ್ನೊಬ್ಬರಿಗೆ ಸಂತೋಷವಾಗುವಂತೆ ಕೆಲಸ ಮಾಡಿದರೆ ಅದುವೇ ನಿಜವಾದ ಬದುಕಾಗುತ್ತದೆ. ಅಂತಹ ಬದುಕನ್ನು ಎಸ್.ಎಸ್. ಪಾಟೀಲರು ಬದುಕಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ ಎಂದರು.

ದಾವಣಗೆರೆಯ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಅರುಣಕುಮಾರ ಅಜ್ಜಪ್ಪ ಮಾತನಾಡಿ, ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರ ಸರಳತೆ, ವಿನಯತೆ, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮ ಸಮಾಜಕ್ಕೆ ಮಾದರಿಯಾಗಿದೆ. ಅಧಿಕಾರದಲ್ಲಿದ್ದರೂ ಅಥವಾ ಇಲ್ಲದಿದ್ದರೂ ಸಮಾಜಕ್ಕೆ ಸೇವೆ ಸಲ್ಲಿಸುವ ಅವರ ಉತ್ಸಾಹ ಎಂದಿಗೂ ಕಡಿಮೆಯಾಗಿಲ್ಲ ಎಂದರು.

ಕಲಕೇರಿ ವಿರುಪಾಪುರ ಅಭಿನವ ಮುದುಕೇಶ್ವರ ಸ್ವಾಮಿಜಿ ಮಾತನಾಡಿ, ಕೇವಲ ತಮಗಾಗಿ ಬದುಕದೆ, ಸಮಾಜಕ್ಕೆ ಉಪಕಾರಿಯಾಗುವಂತೆ ಜೀವಿಸಿದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ. ಅಂತಹ ಬದುಕನ್ನು ಬದುಕಿ ನಮಗೆಲ್ಲರಿಗೂ ಮಾದರಿಯಾದವರು ಮಾಜಿ ಸಚಿವ ಎಸ್,ಎಸ್.ಪಾಟೀಲ ಅವರು ಎಂದರು.

ಡಾ. ವಿಜಯಕುಮಾರ್ ಕಮ್ಮಾರ ಅವರು ರಚಿಸಿದ ಶರಣ ಕುರುಬಗೊಲ್ಲಾಳೇಶ್ವರ ವಚನ ಗಂಥವನ್ನು ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಆರೋಗ್ಯ ಶಿಬಿರದಲ್ಲಿ ದಾವಣಗೆರೆಯ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಸುಮಾರು 50ರಿಂದ 60 ಪ್ರಸಿದ್ಧ ವೈದ್ಯರ ತಂಡವು ಗ್ರಾಮೀಣ ಭಾಗದ ನೂರಾರು ಸಾರ್ವಜನಿಕರಿಗೆ ಇಎನ್‌ಟಿ, ಕಣ್ಣಿನ ವಿಭಾಗ, ಮೂಳೆ ಮತ್ತು ಕೀಲು ಮೂಳೆ, ಜನರಲ್ ಸರ್ಜರಿ ಹಾಗೂ ಮೆಡಿಸಿನ್ ವಿಭಾಗ ಸೇರಿದಂತೆ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು.

ಕಾರ್ಯಕ್ರಮದಲ್ಲಿ ಮುಧುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಗೌರವ ಉಪಸ್ಥಿತಿ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಂಜುನಾಥ ಮೇಗಳಮನಿ, ಕುಮಾರಸ್ವಾಮಿ ಹಿರೇಮಠ, ಎಫ್.ಜಿ. ಹಿರೇಗೌಡ್ರ, ಹಾಲಪ್ಪ ಕಬ್ಬೇರಹಳ್ಳಿ, ಕೊಟ್ರೇಶ ಅಂಗಡಿ, ಶ್ರೀಮತಿ ಲಮಾಣಿ, ಡಾ. ಪ್ರಕಾಶ ಹೊಸಮನಿ, ಭೀಮಸಿಂಗ ರಾಠೋಡ, ಗಂಗಾಧರ ಅಣ್ಣಿಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ 92 ಸಸಿಗಳನ್ನು ನೆಡಲಾಯಿತು.