ಮುಂಡರಗಿ: ಕಡಿಮೆ ಅಕ್ಷರಗಳಲ್ಲಿ ಅರ್ಥಗರ್ಭಿತ ಸಂದೇಶ ಸಾರುವ ಶಕ್ತಿ ಚುಟುಕುಗಳಿಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು ಸಾಹಿತ್ಯಕ್ಕೆ ವಿಶೇಷವಾದ ಸ್ಥಾನವಿದೆ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.ರಾಜ್ಯ ಚುಟುಕು ಸಾಹಿತ್ಯ ಪರಿಷತ್ತು ಗುರುವಾರ ಪಟ್ಟಣದ ಕ.ರಾ. ಬೆಲ್ಲದ ಮಹಾವಿದ್ಯಾಲಯದ ಸಭಾಭವನದಲ್ಲಿ ಆಯೋಜಿಸಿದ್ದ ಚುಟುಕು ಲೇಖಕಿಯರ ಹತ್ತನೇ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರಾಸ ಮತ್ತು ಚಾತುರ್ಯದಿಂದಾಗಿ ಚುಟುಕುಗಳು ನೆನಪಿನಲ್ಲಿ ಉಳಿಯುವುದು ಹಾಗೂ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವುದು ಹೆಚ್ಚು. ಯುವಕರು ಚುಟುಕು ರಚನೆಯತ್ತ ಗಮನ ಹರಿಸಬೇಕು. ನಿಯಮಿತವಾಗಿ ಚುಟುಕುಗಳನ್ನು ಓದಬೇಕು ಎಂದರು.ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿದ್ದು, ಯುವಕರು ನಿಯಮಿತವಾಗಿ ಅಧ್ಯಯನ ಕೈಗೊಳ್ಳಬೇಕು. ಸರ್ಕಾರ ಜನತೆಗೆ ಉಚಿತ ಹಾಗೂ ಅನವಶ್ಯಕ ಸೌಲಭ್ಯಗಳನ್ನು ವಿತರಿಸುವ ಬದಲಾಗಿ ಶಾಲಾ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷೆ ಸುಧಾ ಶೀಲವಂತರ ಮಾತನಾಡಿ, ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳ ಇತಿಹಾಸ ಸುದೀರ್ಘವಾಗಿದ್ದು, ಕನ್ನಡ ಭಾಷೆಯ ಎಂಟು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇಂದಿನ ತಲೆಮಾರಿನವರು ನಮ್ಮ ಭಾಷೆಯ ಇತಿಹಾಸವನ್ನು ತಿಳಿದಕೊಳ್ಳಬೇಕು ಎಂದರು.ಚುಟುಕು ಲೇಖಕಿಯರ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಹನುಮಾಕ್ಷಿ ಗೋಗಿ ಮಾತನಾಡಿ, ಸಾವಿರಾರು ವರ್ಷಗಳ ಸಂಮೃದ್ಧ ಇತಿಹಾಸವನ್ನು ಹೊಂದಿರುವ ಕನ್ನಡ ದೇಶದ ಒಂದು ಸಶಕ್ತ ಭಾಷೆಯಾಗಿದ್ದು, ಸಾಹಿತ್ಯ ರಚನೆಯ ಗುಣ ಕನ್ನಡಿಗರ ರಕ್ತದಲ್ಲಿ ಕರಗತವಾಗಿದೆ. ಸಾಹಿತ್ಯಾಸಕ್ತರಲ್ಲದವರೂ ಇಲ್ಲಿ ಸಾಹಿತ್ಯ ರಚಿಸಿ ಅಜರಾಮರರಾಗಿ ಉಳಿದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಶರಣಪ್ಪ ಕೊಟಗಿ ವಿವಿಧ ಗ್ರಂಥಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಅನ್ನದಾನೀಶ್ವರ ಸ್ವಾಮಿಜಿ ಅವರಿಗೆ ಚುಟುಕು ಭೂಷಣ, ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರಿಗೆ ಚುಟುಕು ದಾಸೋಹಿ ಹಾಗೂ ವಿಜಯಕುಮಾರ ಬಣಕಾರ ಅವರಿಗೆ ಸಾಧನಶ್ರೀ ಪುರಸ್ಕಾರಗಳನ್ನು ನೀಡಿ ಗೌರವಿಸಲಾಯಿತು. ತಾಲೂಕು ಚುಸಾಪ ಅಧ್ಯಕ್ಷ ಸಿ.ಎಸ್. ಅರಸನಾಳ ಅವರು ಅಭಿನಂದನಾ ಪರ ನುಡಿಗಳನ್ನಾಡಿದರು. ಚೆನ್ನಬಸಪ್ಪ ಧಾರವಾಡಶೆಟ್ರು, ಬಿ.ಜಿ. ಜವಳಿ, ವಂದನಾ ರಮೇಶ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಶೋಭಾ ಮೇಟಿ ಸ್ವಾಗತಿಸಿದರು. ಕೇಂದ್ರ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಕೆ. ಗಣಪ್ಪನವರ ನಿರೂಪಿಸಿದರು. ಕೊಟ್ರೇಶ ಜವಳಿ ವಂದಿಸಿದರು.