ಚಿತ್ರದುರ್ಗ ಜಿಲ್ಲೆಯಲ್ಲಿ ಆರು ಹೊಸ ಮತಗಟ್ಟೆ ಸೃಜನೆ

KannadaprabhaNewsNetwork |  
Published : Nov 21, 2026, 01:15 AM IST
ಚಿತ್ರದುರ್ಗ  ಎರಡನೇ ಪುಟದ ಲೀಡ್   | Kannada Prabha

ಸಾರಾಂಶ

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‍ಎಸ್‍ಆರ್)-2027ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ರಮ್ಯಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯಲ್ಲಿ ಆರು ಹೊಸ ಮತಗಟ್ಟೆ ಸೃಜನೆಗೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‍ಎಸ್‍ಆರ್)-2027ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮತಗಟ್ಟೆಗಳ ಪುನರ್ ವಿಂಗಡಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ರಮ್ಯಾ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನೈಸರ್ಗಿಕ ವಿಕೋಪ, ಕಟ್ಟಡಗಳ ದುಸ್ಥಿತಿ, ಮತದಾರರ ಸಂಖ್ಯೆ ಹೆಚ್ಚಳ ಹಾಗೂ ಮತಗಟ್ಟೆಗಳ ದೂರದ ಆಧಾರದ ಮೇಲೆ ಮತಗಟ್ಟೆಗಳ ಪುನರ್‍ವಿಂಗಡಣೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ 1,764 ಮತಗಟ್ಟೆಗಳಿದ್ದು, ಹೊಸದಾಗಿ 6 ಮತಗಟ್ಟೆಗಳ ಸೇರ್ಪಡೆಯಿಂದ ಒಟ್ಟು ಮತಗಟ್ಟೆಗಳ ಸಂಖ್ಯೆ 1,770ಕ್ಕೆ ಏರಲಿದೆ. ಯಾವುದೇ ಮತಗಟ್ಟೆಯ ಸ್ಥಳಾಂತರ ಅಥವಾ ಹೆಸರು ಬದಲಾವಣೆ ಪ್ರಸ್ತಾವನೆ ಇಲ್ಲ ಎಂದು ಸಭೆಗೆ ವಿವರಿಸಿದರು.

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಮಲ್ಲೂರಹಳ್ಳಿಯ ಮತಗಟ್ಟೆ ಸಂಖ್ಯೆ 154ರ ವಿಭಜನೆಯಿಂದ 154ಎ ಹೊಸ ಮತಗಟ್ಟೆ ಸೃಜನೆಯಾಗಲಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 311ರಿಂದ 312ಕ್ಕೆ ಏರಿಕೆಯಾಗಲಿದೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬೊಗಳೇರಹಟ್ಟಿಯ ಮತಗಟ್ಟೆ ಸಂಖ್ಯೆ 3ರ ವಿಭಜನೆಯಿಂದ 3ಎ ಹೊಸ ಮತಗಟ್ಟೆ ರಚನೆಯಾಗಲಿದ್ದು, ಒಟ್ಟು ಮತಗಟ್ಟೆಗಳು 278ರಿಂದ 279ಕ್ಕೆ ಹೆಚ್ಚಳವಾಗಲಿವೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಳ್ಳಿಹಟ್ಟಿ (ಹೆಚ್) ಮಾನಂಗಿಯ ಮತಗಟ್ಟೆ ಸಂಖ್ಯೆ 102ರ ವಿಭಜನೆಯಿಂದ 102ಎ ಹೊಸ ಮತಗಟ್ಟೆ ಸೃಜನೆಯಾಗಲಿದ್ದು, ಒಟ್ಟು ಸಂಖ್ಯೆ 302ರಿಂದ 303ಕ್ಕೆ ಏರಲಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 3 ಹೊಸ ಮತಗಟ್ಟೆಗಳು ಸೇರ್ಪಡೆಯಾಗಲಿದ್ದು, ಒಟ್ಟು ಸಂಖ್ಯೆ 300ರಿಂದ 303ಕ್ಕೆ ಏರಲಿದೆ. ಇಲ್ಲಿ ಬ್ಯಾಡರಹಳ್ಳಿಯ ಮತಗಟ್ಟೆ 103ರ ವಿಭಜನೆಯಿಂದ 103ಎ, ಉಡುವಳ್ಳಿ ಮತಗಟ್ಟೆ 258ರಿಂದ 3 ಕಿಮೀ ಗಿಂತ ಹೆಚ್ಚಿನ ದೂರದಲ್ಲಿರುವ ವಸಂತನಗರಕ್ಕೆ 258ಎ ಹಾಗೂ ಪರಮೇನಹಳ್ಳಿ ಮತಗಟ್ಟೆ 260ರಿಂದ ದೂರವಿರುವ ಕತ್ರಿಕೆನಹಳ್ಳಿಗೆ ಹೊಸ ಮತಗಟ್ಟೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಹೊಸದುರ್ಗ ಮತ್ತು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಹೊಸ ಮತಗಟ್ಟೆಗಳ ಪುನರ್‍ವಿಂಗಡಣೆ ಪ್ರಸ್ತಾವನೆ ಇಲ್ಲ. ಕ್ರಮವಾಗಿ 258 ಮತ್ತು 315 ಮತಗಟ್ಟೆಗಳೇ ಮುಂದುವರಿಯಲಿವೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ಬಳಿಕ, ಈ ಪ್ರಸ್ತಾವನೆಗಳನ್ನು ಚುನಾವಣಾ ಆಯೋಗದ ಅನುಮೋದನೆಗಾಗಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ 2026ರ ಡಿಸೆಂಬರ್ 01ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಡಿಸೆಂಬರ್ 01 ರಿಂದ 31 ರವರೆಗೆ ಸಾರ್ವಜನಿಕರು ಆಕ್ಷೇಪಣೆಗಳು ಹಾಗೂ ಹಕ್ಕುಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಸ್ವೀಕೃತವಾದ ಆಕ್ಷೇಪಣೆಗಳನ್ನು 2027ರ ಜನವರಿ 14ರೊಳಗೆ ವಿಲೇವಾರಿ ಮಾಡಲಾಗುವುದು. ಬಳಿಕ ಜನವರಿ 20ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.

ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ನಮೂನೆ-6, ಹೆಸರು ತೆಗೆದುಹಾಕಲು ನಮೂನೆ-7 ಹಾಗೂ ವಿಳಾಸ ಬದಲಾವಣೆ ಮತ್ತು ತಿದ್ದುಪಡಿಗಾಗಿ ನಮೂನೆ-8 ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಬೂತ್ ಮಟ್ಟದ ಏಜೆಂಟರ ಮೂಲಕ ಅರ್ಹ ಮತದಾರರ ಹೆಸರು ಸೇರ್ಪಡೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತಹಶೀಲ್ದಾರ್ ಬೀಬೀ ಫಾತಿಮಾ, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್ ಕುಮಾರ್, ಜಿಲ್ಲಾ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಟಿ.ಯಶವಂತ್ ಕುಮಾರ್, ಬಿಎಸ್‍ಪಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ಸಿಪಿಐ(ಎಂ) ಡಿಒಸಿ ಸಿ.ಕೆ.ಗೌಸ್‍ಪೀರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ